Advertisement

ಎಚ್‌ಎಎಲ್‌ ರಸ್ತೆ ಸಿಗ್ನಲ್‌ ಮುಕ್ತವಾಗಿಸಲು ಒಡಂಬಡಿಕೆ

11:40 AM Jul 10, 2018 | Team Udayavani |

ಬೆಂಗಳೂರು: ಎಚ್‌ಎಎಲ್‌ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ರಸ್ತೆಯನ್ನು ಸಿಗ್ನಲ್‌ ಮುಕ್ತ ಕಾರಿಡಾರ್‌ಗೊಳಿಸುವ ಕುರಿತಂತೆ ಬಿಬಿಎಂಪಿ ಹಾಗೂ ಎಚ್‌ಎಎಲ್‌ ಅಧಿಕಾರಿಗಳು ಸೋಮವಾರ ಒಪ್ಪಂದ ಮಾಡಿಕೊಂಡಿದ್ದಾರೆ. 

Advertisement

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಹಾಗೂ ಎಚ್‌ಎಎಲ್‌ ಬೆಂಗಳೂರು ಸಂಕೀರ್ಣದ ಮುಖ್ಯ ಕಾರ್ಯನಿರ್ವಣಾಧಿಕಾರಿ ಶೇಖರ್‌ ಶ್ರೀವಾತ್ಸವ ಅವರು ಸೋಮವಾರ ಒಡಂಬಡಿಗೆ ಸಹಿ ಹಾಕಿದ್ದಾರೆ. ಒಪ್ಪಂದದ ಪ್ರಕಾರ ಎಚ್‌ಎಎಲ್‌ ಸಂಸ್ಥೆ ಅಂಡರ್‌ ಪಾಸ್‌ ನಿರ್ಮಾಣಕ್ಕಾಗಿ ಸುರಂಜನ್‌ದಾಸ್‌ ಜಂಕ್ಷನ್‌ ಬಳಿ ಸಂಸ್ಥೆಗೆ ಸೇರಿದ 31,000 ಅಡಿ ಜಾಗವನ್ನು ಪಾಲಿಕೆಗೆ ನೀಡಲಿದೆ.

ಎಚ್‌ಎಎಲ್‌ ರಸ್ತೆಯಲ್ಲಿ ದಟ್ಟಣೆ ಮುಕ್ತ ಸಂಚಾರಕ್ಕಾಗಿ ಮೂರು ಅಂಡರ್‌ಪಾಸ್‌ಗಳು ಹಾಗೂ ವಿಂಡ್‌ ಟನಲ್‌ ರಸ್ತೆ ಅಭಿವೃದ್ಧಿಪಡಿಸಲಿರುವ ಪಾಲಿಕೆ ಕಾಮಗಾರಿ ನಂತರದಲ್ಲಿ ಜಾಗವನ್ನು ಎಚ್‌ಎಎಲ್‌ಗೆ ವಾಪಸ್‌ ನೀಡಲಿದೆ. ಈಗಾಗಲೇ ಪಾಲಿಕೆಯಿಂದ ಎಚ್‌ಎಎಲ್‌ ರಸ್ತೆಯ 17 ಕಿ.ಮೀ ಉದ್ದದ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಿದೆ.

ಆದರೆ, ಎಚ್‌ಎಎಲ್‌ ಬಳಿ ಅಂಡರ್‌ಪಾಸ್‌ ನಿರ್ಮಾಣಕ್ಕೆ ಎಚ್‌ಎಎಲ್‌ನ 31,000 ಅಡಿ ಜಾಗ ಅಗತ್ಯವಿದೆ. ಇದೀಗ ಎಚ್‌ಎಎಲ್‌ ಅಧಿಕಾರಿಗಳು ಜಾಗ ನೀಡಲು ಒಪ್ಪಿದ್ದು, ಜಾಗಕ್ಕೆ ಪರಿಹಾರದ ಬದಲಿಗೆ ಹಳೆ ವಿಮಾನ ನಿಲ್ದಾಣಕ್ಕೆ ಹೋಗುವ 1.7 ಕಿ.ಮೀ. ಉದ್ದದ ವಿಂಡ್‌ ಟನಲ್‌ ರಸ್ತೆ ಹಾಗೂ ರಾಜಕಾಲುವೆಗಳ ಸೇತುವೆಗಳನ್ನು ಅಭಿವೃದ್ಧಿಪಡಿಸುವಂತೆ ಕೋರಿದ್ದಾರೆ. 

ವಿಂಡ್‌ ಟನಲ್‌ ರಸ್ತೆಯ ಅಭಿವೃದ್ಧಿಯಿಂದ ಸಾರ್ವಜನಿಕರಿಗೂ ಅನುಕೂಲವಾಗಲಿದೆ. ಹೀಗಾಗಿ ರಸ್ತೆ ನಿರ್ಮಿಸಿ ಮಾರ್ಗ ಮಧ್ಯೆ ಬರುವ ಸೇತುವೆ ಹಾಗೂ ರಸ್ತೆಯನ್ನು 55 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಪಾಲಿಕೆ ಒಪ್ಪಿದ್ದು, ರಸ್ತೆ ಅಭಿವೃದ್ಧಿ ನಂತರದಲ್ಲಿ ರಸ್ತೆಯಲ್ಲಿ ಸಾರ್ವಜನಿಕರ ಸಂಚಾರಕ್ಕೂ ಅವಕಾಶ ನೀಡಬೇಕೆಂಬ ಪಾಲಿಕೆಯ ಷರತ್ತಿಗೆ ಎಚ್‌ಎಎಲ್‌ ಒಪ್ಪಿಗೆ ಸೂಚಿಸಿದೆ. 

Advertisement

ಒಡಂಬಡಿಕೆ ವೇಲೆ ಎಚ್‌ಎಎಲ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಟಿ.ಸುವರ್ಣರಾಜು ಸೇರಿ ಪ್ರಮುಖರು ಹಾಜರಿದ್ದರು. 

ಸಿಗ್ನಲ್‌ ಮುಕ್ತ ಕಾಮಗಾರಿಯ ವಿವರ: ವೆಲ್ಲಾರ ಜಂಕ್ಷನ್‌ನಿಂದ ಹೋಫ್ ಫಾರಂವರೆಗೆ 17 ಕಿ.ಮೀ. ಉದ್ದದ ರಸ್ತೆಯನ್ನು ಸಿಗ್ನಲ್‌ ಮುಕ್ತಗೊಳಿಸುವುದು ಪಾಲಿಕೆಯ ಉದ್ದೇಶವಾಗಿದೆ. ಅದರಂತೆ ಸುರಂಜನ್‌ದಾಸ್‌ ಜಂಕ್ಷನ್‌ (ಕುವೆಂಪು ವೃತ್ತ), ವಿಂಡ್‌ ಟನಲ್‌ ರಸ್ತೆ ಜಂಕ್ಷನ್‌ ಹಾಗೂ ಕುಂದಲಹಳ್ಳಿ ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. 

ಮುಖ್ಯಮಂತ್ರಿಗಳ ನಗರೋತ್ಥಾನ ಅಡಿಯಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಕುವೆಂಪು ವೃತ್ತದಲ್ಲಿ ಅಂಡರ್‌ಪಾಸ್‌ ನಿರ್ಮಾಣವಾಗಲಿದ್ದು, 55 ಕೋಟಿ ರೂ. ವೆಚ್ಚದ ವಿಂಡ್‌ ಟನಲ್‌ ರಸ್ತೆ ಅಭಿವೃದ್ಧಿ 12 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದರಿಂದ ಎಚ್‌ಎಎಲ್‌ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.
-ಕೆ.ಟಿ.ನಾಗರಾಜ್‌, ಮುಖ್ಯ ಎಂಜಿನಿಯರ್‌ (ಯೋಜನೆ) 

ಅಂಡರ್‌ಪಾಸ್‌ಗಳ ನಿರ್ಮಾಣ ಎಲ್ಲೆಲ್ಲಿ?
-ಸುರಂಜನ್‌ದಾಸ್‌ ಜಂಕ್ಷನ್‌ (ಕುವೆಂಪು ವೃತ್ತ)
-ವಿಂಡ್‌ ಟನಲ್‌ ರಸ್ತೆ ಜಂಕ್ಷನ್‌
-ಕುಂದಲಹಳ್ಳಿ ಜಂಕ್ಷನ್‌

Advertisement

Udayavani is now on Telegram. Click here to join our channel and stay updated with the latest news.

Next