Advertisement

ಗುಡ್ಡಗಾಡು ದಾಟಿ ಎಂಡೋ ಸಂತ್ರಸ್ತ ಮಗುವಿನ ಚಿಕಿತ್ಸೆ

12:54 AM May 23, 2020 | Sriram |

ಬೆಳ್ತಂಗಡಿ: ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಕಂಡು ಬಂದರು ಎಂಡೋ ಸಂತ್ರಸ್ತರ ಬವಣೆಯಂತು ನಿರಂತರವಾಗಿ ಕಾಡುತ್ತಿದೆ. ಏತನ್ಮಧ್ಯೆ ನೆರಿಯದ ಕುಟುಂಬವೊಂದು ಸೌಲಭ್ಯಗಳಿಂದ ವಂಚಿತವಾಗುವುದರ ಜತೆಗೆ ಸೂಕ್ತ ಚಿಕಿತ್ಸೆ ಒದಗಿಸಲು ರಸ್ತೆ ಸಂಪರ್ಕ ಇಲ್ಲದೆ ಜೀವನ ಯಾತನೆ ಅನುಭವಿಸುತ್ತಿದೆ.

Advertisement

ತಾ|ನ ನೆರಿಯ ಗ್ರಾಮದ ಗಂಡಿಬಾಗಿಲು ಸಮೀಪದ ಮೇನಾಚೆರಿಲ್‌ ನಿವಾಸಿ ಜೋಯ್‌ ಜೋಸೆಪ್‌ ಅವರ ಮಗಳು ಸ್ಟಿನಾ ಜೋಸೆಫ್‌(9) ಎಂಡೋಪೀಡಿತೆಯಾಗಿದ್ದು ಹಾಸಿಗೆ ಹಿಡಿದಿದ್ದಾಳೆ. ಈ ಮಧ್ಯೆ ಜೋಯ್‌ ಅವರ ಪತ್ನಿ ಬಿಂದೂ ಜೋಯ್‌ ನರ ಸಂಬಂಧಿ ಕಾಯಿಲೆಯಿಂದ ಮಲಗಿದಲ್ಲಿಯೇ ಇದ್ದಾರೆ.

ಮಗಳು ಹಾಗೂ ಪತ್ನಿಯ ಅನಾರೋಗ್ಯದಿಂದ ದಿಕ್ಕೆಟ್ಟ ಜೋಯ್‌ ಅವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಮೂವತ್ತು ವರ್ಷಗಳಿಂದಲೂ ಮೇನಾಚೆರಿಲ್‌ನಲ್ಲಿ ವಾಸವಿದ್ದು, ಸಮರ್ಪಕ ರಸ್ತೆ ವ್ಯವಸ್ಥೆಯಿಲ್ಲದೇ ಮಗಳ ಚಿಕಿತ್ಸೆಗೆ ಗುಡ್ಡಗಾಡು ದಾಟಿ ಬರಬೇಕಿದೆ.

ರಸ್ತೆ ಸಂಪರ್ಕಕ್ಕಾಗಿ ಮೂರು ವರ್ಷಗಳಿಂದ ಗ್ರಾ.ಪಂ.ನಿಂದ ಅಂಗವಿಕಲರ ಇಲಾಖೆ ಆಯುಕ್ತರ ವರೆಗೆ ಅಲೆದಾಡಿದ್ದಾರೆ. ಮಂಗಳೂರು ಮಾನವ ಹಕ್ಕು ಇಲಾಖೆ, ಕಾನೂನು ಪ್ರಾಧಿಕಾರಕ್ಕೂ ರಸ್ತೆ ಸಂಪರ್ಕ ಒದಗಿಸುವಂತೆ ಮನವಿ ನೀಡಿದ್ದಾರೆ. ಆದರೆ ಪ್ರಯತ್ನಗಳಾವುದೂ ಫಲ ನೀಡಿಲ್ಲ.

ತುರ್ತು ಸಂದರ್ಭ ಆಂಬ್ಯುಲೆನ್ಸ್‌ ಬರಲಸಾಧ್ಯ
ಇತ್ತ ಮಗಳು ಸ್ಟಿನಾ ಜೋಯ್‌ ನಿತ್ಯಕರ್ಮದಿಂದ ಹಿಡಿದು ಪ್ರತಿಯೊಂದಕ್ಕೂ ಮತ್ತೂಬ್ಬರನ್ನು ಅವಲಂಬಿಸಬೇಕಿದೆ.ಆಸ್ಪತ್ರೆಗೆ ಕರೆತರಲು ಜೀಪು ಬಾಡಿಗೆ 2 ಸಾವಿರ ರೂ. ನೀಡಬೇಕಿದೆ. ಮಳೆಗಾಲದಲ್ಲಂತೂ ಚರ್ಚ್‌, ಆಸ್ಪತ್ರೆ ಯಾವುದೇ ಅನಿವಾರ್ಯಕ್ಕೆ ಮೂರು ಕಿ.ಮೀ. ಸುತ್ತಿಬಳಸಿ ಗುಡ್ಡಗಾಡು ದಾಟಿ ಅಣಿಯೂರು, ಗಂಡಿಬಾಗಿಲು ತಲುಪಬೇಕಿದೆ. ಆ ಬಳಿಕವಷ್ಟೇ ಬೆಳ್ತಂಗಡಿ, ಮಂಗಳೂರು ಆಸ್ಪತ್ರೆ ಸೇರಬೇಕು.

Advertisement

30 ಮೀಟರ್‌ ರಸ್ತೆ
ಇವರ ಮನೆ ಸೇರಲು ಸಂಬಂಧಿಕರ ವರ್ಗಸ್ಥಳ ಅವಲಂಬಿಸಬೇಕಿದೆ. ಕರುಣೆಯಿಂದ 30 ಮೀ. ರಸ್ತೆ ಬಿಡಲು ಸಂಬಂಧಿಕರೇ ಒಪ್ಪುವ ಸ್ಥಿತಿಯಲ್ಲಿಲ್ಲ. ಈ ಕುರಿತು ಗ್ರಾ.ಪಂ. ತಹಶೀಲ್ದಾರ್‌ ಬಳಿ ಮನವಿ ಮಾಡಿದ್ದಾರೆ. ಕೋವಿಡ್-19 ಲಾಕ್‌ಡೌನ್‌ ಅನಂತರ ಕ್ರಮಕ್ಕೆ ಮುಂದಾಗುವುದಾಗಿ ಭರವಸೆ ನೀಡಿದ್ದಾರೆ ಎಂದು ಜೋಯ್‌ ಅಳಲು ತೋಡಿಕೊಂಡಿದ್ದಾರೆ.

ಕುಟುಂಬ ಸಂಕಷ್ಟದಲ್ಲಿದೆ
ರಸ್ತೆ ಇಲ್ಲದೆ ನಾನು ದುಡಿದ ಮೊತ್ತ ಆಸ್ಪತ್ರೆ, ವಾಹನ ಬಾಡಿಗೆಗೆ ಭರಿಸುವಂತಾಗಿದೆ. ವಾಹನ ಬರಲು 30 ಮೀ. ರಸ್ತೆ ಸಿಕ್ಕಿದರೆ ಸಾಕು. ಉಳಿದ ರಸ್ತೆಯನ್ನು ನಾನೇ ಅಗೆದು ಮಾಡಿದ್ದೇನೆ. ಅಂಗವಿಕಲರ ಮಾಸಿಕ ವೇತನ ಔಷಧಕ್ಕೂ ಸಾಲುತ್ತಿಲ್ಲ. ಭೂಮಿ ಅಭಿವೃದ್ಧಿ ಕೃಷಿ ಸಾಲ, ಮನೆ ಸಾಲ ಬಡ್ಡಿ ಸೇರಿ 5 ಲಕ್ಷ ರೂ. ಸಾಲವಿದೆ.
 -ಜೋಯ್‌ ಜೋಸೆಫ್, ಎಂಡೋ ಸಂತ್ರಸ್ತೆ ತಂದೆ

ಅಗತ್ಯ ಕ್ರಮ ತೆಗೆ ದುಕೊಳ್ಳಲಾಗುವುದು
ಜೋಯ್‌ ಅವರಿಗೆ ಸ್ಥಳೀಯ ನಿವಾಸಿ ಮೂಲ ವರ್ಗಸ್ಥಳದಿಂದ ರಸ್ತೆ ನೀಡಬೇಕಿದೆ. ಅಥವಾ ಅವರಿಗೆ ಖರೀದಿಸಿ ನೀಡುವ ಕುರಿತಾಗಿ ಗ್ರಾ.ಪಂ. ಹಾಗೂ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಖರೀದಿಗೆ ಅವಕಾಶವಿದ್ದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
 - ಗಣಪತಿ ಶಾಸ್ತ್ರಿ, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next