ಹುಬ್ಬಳ್ಳಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳು ತಮ್ಮ ಸೇವೆ ನಿಲ್ಲಿಸಿದ್ದವು. ಆದರೆ, ಇಲ್ಲಿನ ಎಲುಬು-ಕೀಲು ತಜ್ಞ ವೈದ್ಯರೊಬ್ಬರು ಒಂದು ದಿನವೂ ಚಿಕಿತ್ಸೆ ನಿಲ್ಲಿಸದೇ, ಸೇವೆ ಸಲ್ಲಿಸುವ ಮೂಲಕ ರೋಗಿಗಳ ಮೆಚ್ಚುಗೆಗೆಪಾತ್ರವಾಗಿದ್ದು, ಜಿಲ್ಲಾಧಿಕಾರಿಯಿಂದ ಪ್ರಶಂಸೆ ಪತ್ರ ಪಡೆದಿದ್ದಾರೆ.
ಇಲ್ಲಿನ ಕೋರ್ಟ್ ವೃತ್ತದ ಬಳಿ ಇರುವ ವೀರಭದ್ರೇಶ್ವರ ಅರ್ಥೋಕೇರ್ ಸೆಂಟರ್‌ನ ಡಾ| ಮಹಾಂತೇಶ ಹಳೇಮನಿ ಅವರು ಲಾಕ್‌ಡೌನ್ ಲೆಕ್ಕಿಸದೆ ನಿತ್ಯವೂ ತಮ್ಮ ಆಸ್ಪತ್ರೆಗೆ ಆಗಮಿಸಿ, ಚಿಕಿತ್ಸೆ ನೀಡಿದ್ದಾರೆ. ಲಾಕ್‌ಡೌನ್ ಘೋಷಣೆಯಿಂದ ಇಲ್ಲಿ ವರೆಗೆ ಸುಮಾರು 360ಕ್ಕೂ ಹೆಚ್ಚು ಜನರ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದು, ಸುಮಾರು ಆರು ಜನರಿಗೆ ಶಸ್ತ್ರ ಚಿಕಿತ್ಸೆ ಕೈಗೊಂಡಿದ್ದಾರೆ.
ಲಾಕ್‌ಡೌನ್ ಸಂದರ್ಭದಲ್ಲಿ ಒಂದು ದಿನ ಆಸ್ಪತ್ರೆಗೆ ಬರುತ್ತಿದ್ದಾಗ, ಕೋರ್ಟ್ ವೃತ್ತದ ಬಳಿ ಪೊಲೀಸರು ಇವರನ್ನು ತಡೆದು ಥಳಿಸಲು ಮುಂದಾಗಿದ್ದರು. ಆಗ ತಾವು ವೈದ್ಯ ಸೇವೆ ಸಲ್ಲಿಸಲು ಹೋಗುತ್ತಿರುವೆ ಎಂದು ಹೇಳುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆಗಮಿಸುತ್ತಿದ್ದರು. ಅವರು ಈ ಕುರಿತು ವಿಚಾರಿಸಿದಾಗ ಡಾ| ಮಹಾಂತೇಶ ಅವರು, ತಾವು ವೈದ್ಯರಾಗಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡಲು ಬಂದಿದ್ದೇನೆ. ಆದರೆ, ಪೊಲೀಸರು ತಡೆದಿದ್ದಾರೆ ಎಂದು ತಿಳಿಸಿದ್ದರು.
ಆಗ ಅಲ್ಲಿಯೇ ಇದ್ದ ಡಾ| ಮಹಾಂತೇಶ ಅವರ ಆಸ್ಪತ್ರೆಗೆ ಸ್ವತಃ ಜಿಲ್ಲಾಧಿಕಾರಿಗಳೇ ಭೇಟಿ ನೀಡಿ ಪರಿಶೀಲಿಸಿ, ಅಲ್ಲಿಯೇ ಇದ್ದ ರೋಗಿಗಳನ್ನು ನೋಡಿದರು. ನಂತರ ಅವರ ಸೇವೆಗೆ ಮೆಚ್ಚುಗೆ ಸೂಚಿಸಿದ್ದಲ್ಲದೇ, ನಿಮಗೆ ಯಾವುದೇ ತೊಂದರೆ ಯಾದರೂ, ತಮ್ಮನ್ನು ಸಂಪರ್ಕಿಸಿ, ಸಾಮಾಜಿಕ ಅಂತರ ಹಾಗೂ ಸ್ವಚ್ಛತೆ ಕಾಯ್ದುಕೊಳ್ಳಿ ಎಂದು ಸೂಚನೆ ನೀಡಿದ್ದರು.
ಈ ವೈದ್ಯರು ಜಿಲ್ಲಾಡಳಿತ ಮನವಿ ಮೇರೆಗೆ ಒಂದು ದಿನವೂ ತಪ್ಪಿಸದೆ ಆಸ್ಪತ್ರೆಗೆ ಆಗಮಿಸಿ ರೋಗಿಗಳ ತಪಾಸಣೆ, ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ಕೈಗೊಂಡಿದ್ದರು. ಅಲ್ಲದೇ ಉಚಿತವಾಗಿ ಸೇವೆ ಸಲ್ಲಿಸಿದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ವೈದ್ಯರಿಗೆ ಪ್ರಶಂಸಾ ಪತ್ರ ನೀಡಿದ್ದಾರೆ.
ವಿಶೇಷವೆಂದರೆ ಡಾ| ಮಹಾಂತೇಶ ಅವರು ತಮ್ಮ ಸ್ವಗ್ರಾಮ ಇಂಗಳಹಳ್ಳಿಗೆ ತಮ್ಮ ಸ್ವಂತ ವಾಹನದಲ್ಲಿ ರೋಗಿಗಳನ್ನು ಉಚಿತವಾಗಿ ಕರೆತಂದು, ಉಚಿತ ಚಿಕಿತ್ಸೆ ನೀಡಿಕೆ ಕಾರ್ಯವನ್ನು ಇಂದಿಗೂ ಮುಂದುವರಿಸಿದ್ದಾರೆ.