ಇದು ಖಂಡಿತಾ ಉದ್ಧಟತನವಲ್ಲ!
ಹಾಗಂತ ಹೇಳಿಕೊಂಡರು ನಿರ್ದೇಶಕ ರಘುನಂದನ್. ಅವರು ಹಾಗೆ ಹೇಳಿಕೊಳ್ಳಲು ಕಾರಣ ಚಿತ್ರದ ಟ್ರೇಲರ್‌ನಲ್ಲಿದ್ದ “ಎರಡು ಮಲಯಾಳಂ ಹಾಗೂ ಒಂದು ತೆಲುಗು ಚಿತ್ರದಿಂದ ಕದ್ದು ಮಾಡಿದ ಸಿನಿಮಾ ಅಲ್ಲ, ಈ ಚಿತ್ರದಲ್ಲಿ ಕಥೆ ಇದೆ …’ ಮುಂತಾದ ಸಂಭಾಷಣೆಗಳು. ಈ ಸಂಭಾಷಣೆಗಳ ಮೂಲಕ ರಘುನಂದನ್ ಯಾರಿಗೋ ಟಾಂಗ್ ಕೊಡುತ್ತಿದ್ದಾರೆ ಎಂಬ ಬಲವಾದ ಅನುಮಾನ ಪತ್ರಕರ್ತರನ್ನು ಕಾಡತೊಡಗಿತ್ತು. ಈ ಅನುಮಾನವನ್ನೇ ಪ್ರಶ್ನೆಯ ರೂಪದಲ್ಲಿ ನಿರ್ದೇಶಕರ ಮುಂದೆ ಇಡಲಾಯಿತು.
ಅದಕ್ಕೆ ಉತ್ತರಿಸಿದ ಅವರು, “ಇದು ಖಂಡಿತಾ ಯಾರಿಗೋ ಟಾಂಗ್ ನೀಡಿದ್ದಲ್ಲ ಅಥವಾ ಇದು ಉದ್ಧಟತನವೂ ಅಲ್ಲ. ಕನ್ನಡ ಚಿತ್ರಗಳಲ್ಲಿ ಕಥೆ ಇಲ್ಲ ಅಂತ ಕೇಳುತ್ತಲೇ ಇದ್ದೆ. ಹಾಗಾಗಿಯೇ ಈ ಚಿತ್ರದಲ್ಲಿ ಕಥೆ ಇದೆ ಅಂತ ಸಂಭಾಷಣೆ ಹೇಳಿಸಿದ್ದೇನೆ. ಮೇಲಾಗಿ ನಮ್ಮ ಚಿತ್ರದಲ್ಲಿ ಡ್ಯಾನ್ಸ್, ಫೈಟು, ಫಾರಿನ್ ಲೊಕೇಶನ್ ಯಾವುದೂ ಇಲ್ಲ. ಏನಾದರೂ ಇದ್ದರೆ, ಅದು ಬರೀ ಕಥೆ ಮಾತ್ರ. ಅದನ್ನೇ ಪ್ರಮೋಟ್ ಮಾಡ್ತಿದ್ದೀನಿ …’ ಅಂತ ಹೇಳಿಕೊಂಡರು ರಘುನಂದನ್.
ಅಂದ ಹಾಗೆ, ರಘುನಂದನ್ ಹೊಸದೊಂದು ಸಿನಿಮಾ ಮಾಡಿದ್ದಾರೆ. ಹೆಸರು “ಅರಣ್ಯ ಕಾಂಡ’. ಅವರು ಮಾತಾಡಿದ್ದು ಅದೇ ಚಿತ್ರದ ಪತ್ರಕಾಗೋಷ್ಠಿಯಲ್ಲಿ. ಅಂದು ಪತ್ರಿಕಾಗೋಷ್ಠಿ ಎನ್ನುವುದಕ್ಕಿಂತ ಚಿತ್ರದ ಹಾಡುಗಳ ಬಿಡುಗಡೆ ಮಾಡಲಾಯಿತು. ಹಾಡುಗಳ ಬಿಡುಗಡೆ ನೆಪದಲ್ಲಿ ಚಿತ್ರದ ಬಗ್ಗೆಯೂ ಮಾತನಾಡಿದರು ರಘುನಂದನ್. ಈ ಚಿತ್ರದಲ್ಲಿ ಅಮರ್ ಗೌಡ, ಅರ್ಚನ ಕೊಟ್ಟಿಗೆ ನಟಿಸಿದರೆ, ಅನಿಲ್ ಬ್ರಹ್ಮಾವರ್ ಮತ್ತು ಲಕ್ಷ್ಮೀ ಅನಿಲ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹೇಮಂತ್ ಜೋಯಿಸ್ ಎನ್ನುವವರು ಸಂಗೀತ ಸಂಯೋಜಿಸಿದ್ದಾರೆ. ಅಂದು ಅವರೆಲ್ಲರ ಜೊತೆಗೆ ಹಾಡುಗಳನ್ನು ಲಹರಿ ಸಂಸ್ಥೆಯ ಮೂಲಕ ಬಿಡುಗಡೆ ಮಾಡುತ್ತಿರುವ ಲಹರಿ ವೇಲು ಸಹ ಇದ್ದರು.
ನಿರ್ದೇಶಕರು ಗಮನಿಸಿದಂತೆ ಕನ್ನಡದಲ್ಲಿ “ನವಗ್ರಹ’ ನಂತರ ಟ್ರೆಶರ್ ಹಂಟ್ ಕಥೆ ಬಂದಿರಲಿಲ್ಲವಂತೆ. ಹಾಗಾಗಿ ಅವರು ಈ ಚಿತ್ರದಲ್ಲಿ ಕಾಡಿನಲ್ಲಿ ನಿಧಿ ಶೋಧನೆ ಮಾಡುವುದಕ್ಕೆ ಹೊರಟಿದ್ದಾರೆ. “ಇಲ್ಲಿ ನಾಯಕ ಕಳ್ಳ. ನಾಯಕಿ ಒಬ್ಬ ಪತ್ರಕರ್ತೆ. ಕಾಡಿನ ಒಂದು ಜಾಗದಲ್ಲಿ ನಿಧಿ ಇರುವುದು ಅವರಿಗೆ ಗೊತ್ತಾಗುತ್ತದೆ. ಅವರು ಏಳು ಜನರ ತಂಡ ಕಟ್ಟಿಕೊಂಡು ನಿಧಿ ಹುಡುಕುವುದಕ್ಕೆ ಹೊರಡುತ್ತಾರೆ. ಇಬ್ಬರು ಕಾಡಿನ ಜನ ಸಹ ಸೇರಿಕೊಳ್ಳುತ್ತಾರೆ. ಅವರಿಗೆ ನಿಧಿ ಸಿಗುತ್ತದಾ, ಇಲ್ಲವಾ ಎಂಬುದು ಚಿತ್ರದ ಕಥೆ. ಹೆಬ್ರಿ, ದಾಂಡೇಲಿ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೀವಿ. ಇದು ಕಾಡಿನಲ್ಲಿ ನಡೆಯುವ ಕಥೆಯಾದ್ದರಿಂದ, ಇದಕ್ಕೆ “ಅರಣ್ಯ ಕಾಂಡ’ ಅಂತ ಹೆಸರಿಟ್ಟಿದ್ದೇವೆ’ ಎಂದರು ರಘುನಂದನ್.
ನಾಯಕ ಅಮರ್ ಹವ್ಯಾಸಿ ರಂಗಭೂಮಿಯವರು. ಅವರು ಕಳೆದ ವರ್ಷ ಮೇ 27ಕ್ಕೆ ಆಡಿಷನ್‌ಗೆ ಹೋಗಿದ್ದರಂತೆ. ಆಡಿಷನ್ ಮುಗಿದ ಮೇಲೆ, ಜೂನ್ ಒಂದರಂದು ಮಹೂರ್ತವಿದ್ದು, ಅದಕ್ಕೆ ಬರಬೇಕು ಎಂದರಂತೆ. ಹೀಗೆ ಕೆಲವೇ ದಿನಗಳ ಅಂತರದಲ್ಲಿ ಚಿತ್ರದಲ್ಲಿ ನಾಯಕನಾಗಿದ್ದಾಗಿ ಅಮರ್ ಹೇಳಿಕೊಂಡರು. ಇನ್ನು ಅರ್ಚನಾ ಈ ಚಿತ್ರಕ್ಕೆ ನಾಯಕಿ ಆದಾಗ ಬಹಳ ಆಶ್ಚರ್ಯವಾಗಿತ್ತಂತೆ. “ಕಾರಣ ನಾನು ಇದಕ್ಕಿಂತ ಬಹಳ ದಪ್ಪ ಇದೆ. ಮನೇಲಿ ಈ ವಿಷಯ ಹೇಳಿದಾಗ, ನನ್ನ ತಮ್ಮ ನಕ್ಕ. ಆದರೂ ನಾನು ಆಯ್ಕೆಯಾದೆ. ಈ ಚಿತ್ರದಲ್ಲಿ ನಾಯಕನಿಗೆ ಸಹಾಯ ಮಾಡುವ ಪಾತ್ರ ನನ್ನದು’ ಎಂದರು.
ಇಲ್ಲಿ ನಿರ್ಮಾಪಕ ಅನಿಲ್ ಅವರಿಗಿಂತ, ಅವರ ಪತ್ನಿ ಲಕ್ಷ್ಮೀ ಅವರಿಗೆ ಚಿತ್ರ ನಿರ್ಮಾಣ ಮಾಡಬೇಕು ಅಂತ ಆಸೆ ಇತ್ತಂತೆ. “ನನಗೆ ನಟಿಸಬೇಕು ಅಂತ ಆಸೆ ಇತ್ತು. ನಟಿಯಂತೂ ಆಗಲಿಲ್ಲ, ನಿರ್ಮಾಣ ಮಾಡಿದರೆ, ಚಿತ್ರವನ್ನು ಹತ್ತಿರದಿಂದ ನೋಡಬಹುದು ಅಂತ ಈ ಚಿತ್ರ ನಿರ್ಮಾಣ ಮಾಡೋಕೆ ಮುಂದಾದೆವು’ ಎಂದರು. ಈ ಚಿತ್ರದಲ್ಲಿ ದಾಸರ “ದಾರಿ ಯಾವುದಯ್ಯ ವೈಕುಂಠಕೆ …’ ಮುಂತಾದ ಪದಗಳಿವೆ. ಅದನ್ನು ರಾಕ್ ಸ್ಟೈಲ್‌ನಲ್ಲಿ ಮಾಡಿದ್ದಾರೆ ಹೇಮಂತ್.