ನವದೆಹಲಿ: 2017ರಲ್ಲಿ ಭಾರತ ಸರ್ಕಾರ ಇಸ್ರೇಲ್ ಜತೆಗೆ 2 ಬಿಲಿಯನ್ ಡಾಲರ್ ಒಪ್ಪಂದದ ಮೇರೆಗೆ ಪೆಗಾಸಸ್ ಗೂಢಚಾರಿಕೆ ತಂತ್ರಾಂಶ ಖರೀದಿಸಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಬೆನ್ನಲ್ಲೇ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಶಾಲಾರಂಭಕ್ಕೆ ಗ್ರೀನ್ ಸಿಗ್ನಲ್, ನೈಟ್ ಕರ್ಫ್ಯೂ ರದ್ದು: ಹೊಸ ನಿಯಮ ಪ್ರಕಟಿಸಿದ ರಾಜ್ಯ ಸರ್ಕಾರ
ಇಸ್ರೇಲ್ ನ ಎನ್ ಎಸ್ ಒ ಸಂಸ್ಥೆ ತಯಾರಿಸಿದ್ದ ಗೂಢಚರ್ಯೆ ತಂತ್ರಾಂಶ ಪೆಗಾಸಸ್ ಭಾರತದಲ್ಲಿ ಭಾರೀ ವಿವಾದ ಹುಟ್ಟುಹಾಕಿತ್ತು. ಪೆಗಾಸಸ್ ಬಳಸಿ ಪ್ರಮುಖ ರಾಜಕೀಯ ಮುಖಂಡರು, ಸೇನೆ, ಸರ್ಕಾರಿ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ನ್ಯಾಯಾಧೀಶರು ಮತ್ತು ಪತ್ರಕರ್ತರ ಮಾಹಿತಿಯನ್ನು ಕಾನೂನು ಬಾಹಿರವಾಗಿ ಕಲೆ ಹಾಕಿರುವುದಾಗಿ ಆರೋಪಿಸಲಾಗಿತ್ತು.
ದೇಶದ ಪ್ರಾಥಮಿಕ ಪ್ರಜಾಪ್ರಭುತ್ವ ಸಂಸ್ಥೆಗಳು, ರಾಜಕಾರಣಿಗಳು ಮತ್ತು ಸಾರ್ವಜನಿಕರ ಮೇಲೆ ಕಣ್ಗಾವಲು ಇಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಗೂಡಚರ್ಯೆ ನಡೆಸಲು ಪೆಗಾಸಸ್ ತಂತ್ರಾಂಶ ಖರೀದಿಸಿದ್ದು, ಸರ್ಕಾರಿ ಅಧಿಕಾರಿಗಳು, ವಿರೋಧ ಪಕ್ಷದ ಮುಖಂಡರು, ಸೇನೆ, ನ್ಯಾಯಾಂಗ ಸೇರಿದಂತೆ ಎಲ್ಲರನ್ನೂ ಗುರಿಯಾಗಿರಿಸಿಕೊಂಡು ಫೋನ್ ಕದ್ದಾಲಿಕೆ ನಡೆಸಿದೆ. ಇದು ದೇಶದ್ರೋಹ. ಈ ಮೂಲಕ ಪ್ರಧಾನಿ ಮೋದಿ ಸರ್ಕಾರ ದೇಶದ್ರೋಹ ಎಸಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಸ್ರೇಲ್ ನ ಗೂಢಚಾರಿಕೆಯ ಪೆಗಾಸಸ್ ಮತ್ತು ಮಿಸೈಲ್ ವ್ಯವಸ್ಥೆಗೆ ಸಂಬಂಧಿಸಿಂತೆ 2 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು.
ಇಸ್ರೇಲ್ ನ ಎನ್ ಎಸ್ ಒ ಜೊತೆ ಯಾವುದೇ ವಹಿವಾಟು ನಡೆಸಿಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ ನಲ್ಲಿ ಹೇಳಿತ್ತು. ಪೆಗಾಸಸ್ ಬಳಸಿ ಯಾರನ್ನೆಲ್ಲಾ ಗುರಿಯಾಗಿರಿಸಿಕೊಂಡು ಫೋನ್ ಕದ್ದಾಲಿಕೆ ಮಾಡಲಾಗಿತ್ತು ಅವರ ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ತಾಂತ್ರಿಕ ಸಮಿತಿ ಕೇಳಿತ್ತು.