Advertisement

ಬ್ರಾಡ್‌ಫೋರ್ಡ್‌ನಲ್ಲಿ ನೂಲಿನ ತೇರು: ಅವನತಿಯ ದಾರಿಯಲ್ಲಿ ಸಾಗಿದ ಮಹಾನಗರದ ಕಥೆ !

12:00 PM Apr 03, 2022 | Team Udayavani |

ಇಂಗ್ಲೆಂಡ್‌ನ‌ ಪಶ್ಚಿಮ ಕರಾವಳಿ ಸಮೀಪದ ಮ್ಯಾಂಚೆಸ್ಟರ್‌ ಹತ್ತಿಯ ನೂಲಿಗೆ ಪ್ರಸಿದ್ಧಿ ಪಡೆದಿದ್ದರೆ ಪೂರ್ವದ ತುದಿಯಲ್ಲಿಯ ಲೀಡ್ಸ್- ಬ್ರಾಡ್‌ ಫೋರ್ಡ್‌ ಮಹಾನಗರಗಳು ಇಪ್ಪತ್ತನೇ ಶತಮಾನದ ಆದಿಯಲ್ಲಿ ಉಣ್ಣೆಯ ನೂಲಿನ ಮಗ್ಗ ಮತ್ತು ಬಟ್ಟೆಗಳಿಗೆ ಖ್ಯಾತಿಯ ಶಿಖರಕ್ಕೇರಿತ್ತು. ಈ ಎರಡು ನೂಲಿನ ಊರುಗಳನ್ನು ಬೇರ್ಪಡಿಸುವುದು ಇಂಗ್ಲೆಂಡ್‌ನ‌ ಮಧ್ಯದಲ್ಲಿ ಬೆನ್ನೆಲುಬಿನಂತೆ ದಕ್ಷಿಣೋತ್ತರವಾಗಿ ಹಬ್ಬಿದ ಪೆನ್ನೈನ್‌ (Pennine) ಪರ್ವತ ಶ್ರೇಣಿ.

Advertisement

ಈ ಪರ್ವತ ಶ್ರೇಣಿಯ ಕಣಿವೆಯ ಗ್ರಾಮಗಳಲ್ಲಿ 13ನೇ ಶತಮಾದಲ್ಲಿ ಪ್ರಾರಂಭವಾಗಿ ಉಣ್ಣೆಯ ನೂಲಿನ ಉದ್ಯೋಗ ಬೆಳೆದದ್ದು ಮಧ್ಯಯುಗದ ಕೊನೆಗೆ. ಆಗ ಬ್ರಾಡ್‌ಫೋರ್ಡ್‌ ಇಂಗ್ಲೆಂಡಿನ jewel in the realm ಎನ್ನುವ ಖ್ಯಾತಿ ಪಡೆಯಿತು. “ವೂಲ್‌ ಸಾಕ್‌’ (ಉಣ್ಣೆ ತುಂಬಿದ ಚೀಲ) ಶ್ರೀಮಂತಿಕೆಯ ದ್ಯೋತಕವಾಯಿತು. ಅದರ ಸಾಂಕೇತಿಕವಾಗಿಯೋ ಎನ್ನುವಂತೆ ಲಂಡನ್‌ನ ಪಾರ್ಲಿಮೆಂಟ್‌ನ ಲಾರ್ಡ್‌ ಚಾನ್ಸಲರ್‌ ಸಹ ಒಂದು ವೂಲ್‌ ಸ್ಯಾಕ್‌ ಮೇಲೆಯೇ ಕುಳಿತುಕೊಂಡು ಕಾರ್ಯನಿರ್ವಹಿಸುತ್ತಿದ್ದ.

ಹೌಸ್‌ ಆಫ್ ಲಾರ್ಡ್ಸ್ ನಲ್ಲಿ ಚರ್ಚೆ ನಡೆಯುವಾಗ ಇಂದಿಗೂ ಆತನ ಅಧಿಕಾರದ ಚಿಹ್ನೆಯಂತೆ ಎದುರಿಗೇ ಆ ಕೆಂಪು ಚೀಲ ಇರುತ್ತದೆ! ಹತ್ತಿ, ಕೃಷಿ ವ್ಯವಸಾಯ ಬೆಳೆಯಲು ಇಲ್ಲಿಯ ಹವಾಮಾನ ಅನುಕೂಲಕರವಾಗಿಲ್ಲ. ಮೇಕೆ, ಕುರಿಗಳನ್ನು ಸಾಕುವುದು, ಮೇಯಿಸುವುದು ಸುಲಭ. ಅವುಗಳ ಹಾಲು ಮಾಂಸ, ಚರ್ಮ ಮತ್ತು ತುಪ್ಪಳ ಇವೆಲ್ಲವುಗಳದ್ದೂ ಉಪಯೋಗವಾಗುತ್ತದೆ.

ಏರ್‌ ಎನ್ನುವ ನದಿ ಮತ್ತು ಅದರ ಉಪನದಿಯ ದೊಡ್ಡ (broad) ಹಾಯಿ ಅಥವಾ ದಾಟು (ford) ನಿಂದ ಅದರ ಹೆಸರು ಬ್ರಾಡ್‌ಫೋರ್ಡ್‌ ಎಂದಾಗಿದ್ದು, ಸುತ್ತಮುತ್ತಲಿನ ನದಿ, ಝರಿಗಳಲ್ಲಿಯ ವಿಪುಲವಾದ ಮೃದು ನೀರು ಲಭ್ಯವಿದ್ದ ಕಾರಣ ಈ ಉಣ್ಣೆಯ ಉದ್ಯೋಗ ಬೆಳೆಯಿತು. ಇದನ್ನು ಆಗಿನ ಕಾಲದ ಯೂರೋಪಿನ ಉಳಿದ ದೇಶಗಳಲ್ಲೂ ಕಾಣುತ್ತೇವೆ.

ದುಡಿಯುವ ಜನಸಾಮಾನ್ಯರಲ್ಲದೆ ಕ್ರಿಸ್ತ ಮತದ ಮೋನಾಸ್ಟರಿಯಲ್ಲಿಯೇ ವಾಸಿಸುತ್ತಿದ್ದ ಭಿಕ್ಷುಗಳು (monks) ಸಹ ತಮ್ಮ ಮನನ, ಸೇವೆ, ಅಧ್ಯಯನದ ಜತೆಗೆ ಈ ಉದ್ಯೋಗದಲ್ಲಿರುತ್ತಿದ್ದರು. ಈ ಪ್ರಾಂತಗಳ ಹತ್ತಿರದ ದೊಡ್ಡ ಪಟ್ಟಣಗಳಲ್ಲಿ ಇಂದಿಗೂ ಆ ವೂಲ್‌ ಮಾರ್ಕೆಟ್‌ನ ಕುರುಹುಗಳಿವೆ.

Advertisement

ಖ್ಯಾತಿಯ ಶಿಖರ

ಉಣ್ಣೆಯ ನೂಲಿನಲ್ಲೂ ಬೇರೆ ಬೇರೆ ಥರಗಳಿವೆ. “ದೇಸಿ’ ಕುರಿಗಳ ಉಣ್ಣೆಯ ಎಳೆಗಳು ಗಿಡ್ಡ. ಆಮದು ಮಾಡಿದ ಮರಿನೋ ಕುರಿಯ ಮತ್ತು ಬಹಳ ಉದ್ದವಾದ ಉಣ್ಣೆಯ ನೂಲಿಗೆ ಪ್ರಸಿದ್ಧವಾದ ಅಲ್‌ ಪಾಕಾ ಮತ್ತು ಮೋಹೇರ್‌ ಉಣ್ಣೆಗಳನ್ನು ಆಮದು ಮಾಡಿ ಇಲ್ಲಿಯ ನೂಲಿನ ಮಗ್ಗಗಳಲ್ಲಿ ಉಪಯೋಗಿಸಲಾಗುತ್ತಿತ್ತು. “ಬ್ರಾಡ್‌ಫೋರ್ಡ್‌ ಕೌಂಟ’ ಎನ್ನುವ ಮಾನದಂಡವನ್ನು ಸ್ಥಾಪಿಸಿದ ಹೆಗ್ಗಳಿಕೆ ಈ ಊರಿಗೆ ಇದೆ.

ಅದು ಉಣ್ಣೆಯ ತೆಳುವಾದ ಎಳೆಗಳ ಗಾತ್ರವನ್ನು ಸೂಚಿಸುವ ಸಂಖ್ಯೆ. ನಾನು ವಾಸಿಸುತ್ತಿರುವ ಜಾಗದಿಂದ 35 ಮೈಲಿನ ದೂರದಲ್ಲಿರುವ Bradford Industrial Museumನಲ್ಲಿ ಉಣ್ಣೆಯ ಇತಿಹಾಸವನ್ನು ಇಂದಿಗೂ ಚಲಿಸುವ ಯಂತ್ರಗಳಿಂದ, ಉಪಕರಣಗಳು ಮತ್ತು ವಸ್ತು ಪ್ರದರ್ಶನಗಳಿಂದ ಶಾಲೆಯಿಂದ ತಂಡ ತಂಡವಾಗಿ ಬರುವ ಮಕ್ಕಳು ಕಲಿಯುತ್ತಾರೆ. ಈಗದು ಮ್ಯೂಸಿಯಂ ಆದರೆ ಒಂದಾನೊಂದು ಕಾಲದಲ್ಲಿ ಮೂರ್ಸೈಡ್‌ ಮಿಲ್‌ ಆಗಿದ್ದ ಕಟ್ಟಡದ ಎತ್ತರದ ಚಿಮಣಿ ಹೆಮ್ಮೆಯಿಂದ ಆಕಾಶವನ್ನು ಸೀಳಿ ನಿಂತಿದೆ.

ಒಳಗೆ ಕಾಲಿಡುತ್ತಲೇ ನಮ್ಮನ್ನು ಸ್ವಾಗತ ಮಾಡುವುದು ಮೆರಿನೋ ಕುರಿಯ ಪ್ರತಿಮೆ. ಅದರ ಉಣ್ಣೆ ಉತ್ತಮ ಗುಣಮಟ್ಟದ್ದಾಗಿದ್ದು, ಅದರ ಎಳೆಗಳು ಉದ್ದ ಮತ್ತು ಗಟ್ಟಿ. ಅದರಿಂದ ವಿಖ್ಯಾತ ವೋರ್ಸ್ಟೇಡ್‌ (Worsted) ನೂಲು ಹುಟ್ಟುತ್ತದೆ. ಅದರಿಂದ ತಯಾರಿಸಿದ ಬಟ್ಟೆಗಳಿಗೆ ಜಗತ್ತಿನ ತುಂಬ ಬೇಡಿಕೆಯಿರುತ್ತಿತ್ತು. ಈ ದೇಶದ ಉಣ್ಣೆಯ ವ್ಯಾಪಾರದ ಮುಕ್ಕಾಲು ಪಾಲು ಇಲ್ಲಿಯೇ ಆಗುತ್ತಿತ್ತು ಎಂದು ಈ ಊರಿಗೆ ಉಣ್ಣೆಯ ರಾಜಧಾನಿ ಎನ್ನುವ ಬಿರುದು ಬಂತು. ಇಲ್ಲಿ ತಯಾರಾಗುತ್ತಿದ್ದ ಬಟ್ಟೆಯ ಹೆಸರಿನಿಂದಾಗಿ ಇದನ್ನು Worstedopolis ಎಂದು ಕರೆಯಲಾರಂಭಿಸಿದರು. ಈ ಕಟ್ಟಡದೊಳಗೆ ನೂಲು ತಯಾರಾಗುವ ಹಂತಗಳು, ಬಣ್ಣದ ನೂಲುಗಳಿಂದ ಬಟ್ಟೆ ನೇಯುವ ಯಂತ್ರಗಳು, ಇವೆಲ್ಲವನ್ನೂ ಪ್ರದರ್ಶನಕ್ಕೆ ಇಟ್ಟಿದ್ದಾರೆ.

ಇದನ್ನೂ ಓದಿ:ಭೂರಮೆಗೆ ಸಿಂಗಾರ ಎಲ್ಲೆಲ್ಲೂ ಚೆರ್ರಿ ಹೂವುಗಳ ಅಲಂಕಾರ

ಕಪ್ಪು ಮೋಡಗಳು

1800ರಲ್ಲಿ ಬ್ರಾಡ್‌ಫೋರ್ಡ್‌ ಜನಸಂಖ್ಯೆ ಬರೀ 13,000. ಅದು ಬೆಳೆದು 1875ರಲ್ಲಿ ಒಂದೂ ಮುಕ್ಕಾಲು ಲಕ್ಷ ಆಗಿತ್ತು. ಔದ್ಯೋಗಿಕ ಕ್ರಾಂತಿಯ ಅನಂತರ ಹುಟ್ಟಿದ ನೂಲಿನ ಕಾರ್ಖಾನೆಗಳ (Mills) ಸಂಖ್ಯೆ ಒಂದು ನೂರನ್ನು ದಾಟಿತ್ತು. ಊರಿನ ಸಂಪತ್ತು ಹೆಚ್ಚಿತು. ಊರು ಸಿಕ್ಕಾಪಟ್ಟೆ ವಿಸ್ತಾರವಾಯಿತು. ಆಗ ಊರ ತುಂಬ 200ಕ್ಕೂ ಹೆಚ್ಚು ಕಪ್ಪು ಚಿಮಣಿಗಳು ಆ್ಯಸಿಡ್‌ ವಿಷವಾಯು, ಹೊಗೆ, ಕಲ್ಲಿದ್ದಲು ಹುಡಿ ಮಿಶ್ರಿತ ಸಲ್‌ ಫ್ಯೂರಿಕ್‌ ಆಮ್ಲಗಳನ್ನು ಕಾರಲಿಕ್ಕೆ ಹತ್ತಿದ್ದವು. ಆಗ ಆಕಾಶವೆಲ್ಲ ಯಾವಾಗಲೂ ಕಪ್ಪುಗಟ್ಟಿರುತ್ತಿತ್ತಂತೆ! ಚಳಿಗಾಲದಲ್ಲಿ ಯಾವಾಗಲೂ ಕಣ್ಣು ಕಟ್ಟುವ ಮಂಜು (fog) ಆವರಿಸುತ್ತಿತ್ತು. ಆಗಿನ್ನೂ “ಸ್ವಚ್ಛ ಹವೆಯ’ ಕಾರ್ಖಾನೆ ಕಾನೂನು (1950) ಜಾರಿಗೆ ಬಂದಿರಲಿಲ್ಲ.

ಕಾರ್ಮಿಕರು ತಮ್ಮ ಮನೆತನದ ಆದಾಯ ಹೆಚ್ಚಿಸಲು ಒಂಬತ್ತು ವರ್ಷದ ಮಕ್ಕಳನ್ನು ಸಹ ನೂಲಿನ ಮಿಲ್‌ನ ಕೆಲಸಕ್ಕೆ ಹಚ್ಚಿದ್ದರಿಂದ ಮಿಲ್‌ನ ಹತ್ತರಲ್ಲಿ ಆರು ಕೆಲಸಗಾರರು ಮಕ್ಕಳೇ ಆಗಿದ್ದರು!

1901ರಲ್ಲಿ ವರ್ಷ ಮಿತಿಯನ್ನು ಕಡ್ಡಾಯವಾಗಿ ಹನ್ನೆರಡಕ್ಕೆ ಏರಿಸಿದರೂ ದಿನಕ್ಕೆ ಹನ್ನೆರಡು ತಾಸು ಅವರು ಕೆಲಸ ಮಾಡುತ್ತಿದ್ದರು. ತಲೆಯ ಮೇಲೆ ಗಡಚಿಕ್ಕುವ ಶಬ್ದಗಳೊಂದಿಗೆ ನೂಲಿನ ಮಗ್ಗದ ಯಂತ್ರಗಳು ತಿರುಗುತ್ತಿದ್ದರೂ ನೂಲಿನ ಹಾಸಿನ ಅಡಿಯಲ್ಲಿ ಅವರು ಅತ್ತಿಂದಿತ್ತ ತಲೆ ಬಗ್ಗಿಸಿ ಓಡಾಡುತ್ತ ಸದಾ ಕೆಲಸದಲ್ಲಿರುತ್ತಿದ್ದರು. ಹರಿದ ನೂಲನ್ನು ಕ್ಷಣದಲ್ಲಿ ಜೋಡಿಸಿ, ಹರಿದು ಬಿದ್ದ ನೂಲಿನ ತುಂಡುಗಳನ್ನು ಒಂದುಗೂಡಿಸಿ ಮನೆಗೆ ಮರಳುವುದರಲ್ಲಿ ಪ್ರತಿದಿನ 20 ಮೈಲುಗಳಷ್ಟು ಓಡಿರುತ್ತಿದ್ದರು. ಇಂಥ ಪರಿಸ್ಥಿತಿಯಲ್ಲಿ ಅವರ ಆರೋಗ್ಯ ಹದಗೆಡಲಾರಂಭಿಸಿದ್ದರಲ್ಲಿ ಆಶ್ಚರ್ಯವಿಲ್ಲ.

ಕಾರ್ಮಿಕರ ಮಕ್ಕಳಲ್ಲಿ ಮೂರರಲ್ಲಿ ಒಂದು ಮಗುವಷ್ಟೇ ಹದಿನೈದನೇ ವರ್ಷದ ಹುಟ್ಟಿನ ದಿನವನ್ನು ಕಾಣುತ್ತಿತ್ತು! ಇದು ಜಗತ್ತಿನ ಬೇರೆ ದೇಶಗಳಲ್ಲೂ ಇದ್ದ ಸಮಸ್ಯೆಯೇ. ಮಹಾನಗರಕ್ಕೆ ಅವನತಿ ಬರಲು ತಡವಾಗಲಿಲ್ಲ. ಕಾಲ ಬದಲಾದಂತೆ ಕಾನೂನಿನ ಸುಧಾರಣೆಗಳಿಂದ ಜೀವನ ಬದಲಾಯಿತು. ನೂಲಿನ ಮಿಲ್‌ಗ‌ಳೆಲ್ಲ ಈಗ ವೆಸ್ಟ್ ಇಂಡೀಸ್‌ ಮತ್ತು ಅವಿಭಕ್ತ ಭಾರತದಿಂದ ಕಾರ್ಮಿಕರನ್ನು ಆಮದು ಮಾಡಿ 1950ರ ಅನಂತರದ ಅರ್ಧ ಶತಮಾನದಲ್ಲಿ ನಗರದ ಭೌಗೋಳಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ನಕ್ಷೆಯೇ ಬದಲಾಗಿದೆ. ಪ್ರಜೆಗಳಲ್ಲಿ ಮೂರಲ್ಲಿ ಒಬ್ಬರ ಮೂಲ ಪರದೇಶದಲ್ಲಿ. ಉಣ್ಣೆಯ ನೂಲಿನ ತೇರಿನ ಯಾತ್ರೆ ಸ್ಥಗಿತವಾದಂತಿದೆ!

-ಶ್ರೀವತ್ಸ ದೇಸಾಯಿ, ಡೋಂಕಾಸ್ಟರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next