ಕೋವಿಡ್ ಲಾಕ್‌ಡೌನ್ ನಿಯಮಾವಳಿಗಳಲ್ಲಿ ಈಗಾಗಲೇ ಭಾರೀ ಸಡಿಲಿಕೆಗಳನ್ನು ಮಾಡಿದ್ದು ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ನಾವೂ ವಿವಿಧ ಕೆಲಸಕಾರ್ಯಗಳಿಗಾಗಿ ಮನೆಯಿಂದ ಹೊರಬರ ಲಾರಂಭಿಸಿದ್ದೇವೆ. ಆದರೆ ಈ ಹಿಂದಿನಂತೆ ರಾಜಾರೋಷವಾಗಿ ಗಲ್ಲಿಗಲ್ಲಿ ತಿರುಗಾಡಿದರೆ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಯಾವುದೇ ಉದ್ಯೋಗ ಅಥವಾ ತಮ್ಮ ದೈನಂದಿನ ವ್ಯವಹಾರಕ್ಕಾಗಿ ಹೊರಹೋಗುವಾಗ ಕೆಲವೊಂದು ನಿಯಮಗಳನ್ನು ಪಾಲಿಸುವುದು ನಮ್ಮ ಹಿತದೃಷ್ಟಿಯಿಂದ ಒಳಿತು. ಅದರಲ್ಲೂ ದಿನಸಿ ಮತ್ತು ತರಕಾರಿ ಖರೀದಿಗಾಗಿ ಅಂಗಡಿ ಯಾ ಮಾರುಕಟ್ಟೆಗೆ ತೆರಳುವ ಸಂದರ್ಭದಲ್ಲಿ ಅತೀ ಹೆಚ್ಚಿನ ಮುನ್ನೆಚ್ಚರಿಕೆಯನ್ನು ವಹಿಸುವ ಅಗತ್ಯವಿದೆ. ಇಲ್ಲಿಗೆ ಎಲ್ಲ ವರ್ಗದ ಜನರು ಬರುವುದರಿಂದ ಪ್ರತಿಯೋರ್ವರು ತಮ್ಮ ಆರೋಗ್ಯದತ್ತ ಹೆಚ್ಚಿನ ನಿಗಾ ಇರಿಸುವುದು ಸೂಕ್ತ. ನಾವು ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಅಂಗಡಿ, ಮಾರುಕಟ್ಟೆಯತ್ತ ಹೆಜ್ಜೆ ಇರಿಸಿದಲ್ಲಿ ಅದು ಕೇವಲ ನಮ್ಮ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ ಸ್ವಸ್ಥ ಸಮಾಜಕ್ಕೂ ಪೂರಕ.
ದಿನಸಿ ಸಾಮಗ್ರಿ, ಹಣ್ಣು-ತರಕಾರಿಗಳು ನಮ್ಮ ದೈನಂದಿನ ಆಹಾರ ಕ್ರಮದ ಪ್ರಮುಖ ವಸ್ತುಗಳಾಗಿವೆ. ಇವುಗಳನ್ನು ಖರೀದಿಸಲೆಂದು ಅಂಗಡಿ ಯಾ ಮಾರುಕಟ್ಟೆಗೆ ಹೋಗಲೇಬೇಕು. ಈ ಸಂದರ್ಭ ಯಾವ ಮುನ್ನೆಚ್ಚರಿಕೆ ವಹಿಸಬೇಕು. ಮಾಹಿತಿ ಇಲ್ಲಿದೆ.
ತರಕಾರಿ ಅಥವಾ ದಿನಸಿ ಸಾಮಗ್ರಿಗಳ ಖರೀದಿಗಾಗಿ ನಾವು ಅಂಗಡಿ ಅಥವಾ ಮಾರುಕಟ್ಟೆಗೆ ತೆರಳುವ ಮುನ್ನ ಮಾಸ್ಕ್, ಗ್ಲೌಸ್ ಧರಿಸುವುದು ಅತ್ಯಗತ್ಯ. ಜತೆಯಲ್ಲಿ ಮನೆಯಿಂದ ಕೈಚೀಲ ಕೊಂಡೊಯ್ಯುವುದನ್ನು ಮರೆಯದಿರಿ.
ಮಾರುಕಟ್ಟೆಗೆ ಹೋಗುವ ಮುನ್ನ ಅಗತ್ಯವಿರುವ ವಸ್ತುಗಳ ಪಟ್ಟಿಯನ್ನು ಮಾಡಿಕೊಳ್ಳಿ. ಇದರಿಂದ ಪದೇ ಪದೆ ಗಿರಕಿ ಹೊಡೆಯುವುದು ತಪ್ಪುತ್ತದೆ. ಈ ರೀತಿ ಮಾಡಿ ನೀವು ಚೀಟಿಯನ್ನು ಕೊಟ್ಟು ದೂರ ನಿಂತು ಮತ್ತೆ ಸಾಮಗ್ರಿಗಳನ್ನು ಪಡೆಯಲು ಸಾಧ್ಯ.
ನಗರದಲ್ಲಿ ಶಾಪಿಂಗ್‌ಗೆ ಹೋಗುವುದು ಎಂದರೆ ಮನೆ ಮಂದಿಯೆಲ್ಲ ಒಟ್ಟಾಗಿ ಹೋಗುವವರೇ ಹೆಚ್ಚು. ಆದರೆ ಈಗ ಪರಿಸ್ಥಿತಿ ಸರಿಯಾಗಿಲ್ಲ. ಮಕ್ಕಳು, ಹಿರಿಯ ನಾಗರಿಕರು ಸಾಧ್ಯವಾದಷ್ಟು ಈ ಕಾರ್ಯದಿಂದ ದೂರ ಉಳಿಯುವುದು ಒಳಿತು.
ನೀವು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುತ್ತೀರಿ ಎಂದಾದರೆ ನಿಮ್ಮ ಸುರಕ್ಷತೆಯ ಬಗೆಗೆ ಎಚ್ಚರ ಇರಲಿ. ಜನದಟ್ಟಣೆ ಇದ್ದರೆ ಒಂದಷ್ಟು ಸಮಯದ ಬಳಿಕ ಹೋಗಿ. ಸ್ನೇಹಿತರೊಂದಿಗೆ ಉಭಯಕುಶಲೋಪರಿಗೆ ಕಡಿವಾಣ ಹಾಕಿ.
ಯಾವುದೇ ವಸ್ತುಗಳನ್ನು ನೀವಾಗಿ ಸ್ಪರ್ಶಿಸಬೇಡಿ. ಗ್ಲೌಸ್ ಧರಿಸದೇ ಇದ್ದ ಸಂದರ್ಭ ಅನಿವಾರ್ಯವಾಗಿ ಸ್ಪರ್ಶಿಸಿದ್ದೇ ಆದಲ್ಲಿ ತತ್‌ಕ್ಷಣ ಸ್ಯಾನಿಟೈಸರ್ ಬಳಸಿ ಕೈಗಳನ್ನು ಉಜ್ಜಿಕೊಳ್ಳಿ. ಅಷ್ಟೇ ಅಲ್ಲದೆ ಅಲ್ಲಿನ ಇತರ ಯಾವುದೇ ವಸ್ತುಗಳನ್ನು ಅನಗತ್ಯವಾಗಿ ಮುಟ್ಟದಿರಿ.
ಅಂಗಡಿ/ಮಾರುಕಟ್ಟೆಯಿಂದ ಹಿಂದಿರುಗಿದಾಕ್ಷಣ ನಿಮ್ಮ ಸ್ವಚ್ಛತೆಯತ್ತ ಗಮನ ಹರಿಸಿ. ಸ್ನಾನ ಮಾಡಿ ಬಟ್ಟೆಗಳನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿ. ತರಕಾರಿಗಳನ್ನು ನೀರಿನಲ್ಲಿ ಅದರಲ್ಲೂ ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳೆದು ಆ ಬಳಿಕ ಅಡುಗೆಗೆ ಬಳಸಿ.