ಮಂಗಳೂರು/ಕಾಸರಗೋಡು: ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ನೆರೆಯ ಕಾಸರಗೋಡು ಮತ್ತು ದ.ಕ. ಜಿಲ್ಲೆಯ ನಡುವೆ ಉದ್ಯೋಗಸ್ಥರು ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕಾಗಿ ನಿತ್ಯ ಪಾಸ್ ವಿತರಣೆಗೆ ಉಭಯ ಜಿಲ್ಲಾಡಳಿತ ಮಹತ್ವದ ಕ್ರಮ ಕೈಗೊಂಡಿದೆ.
ಈ ಮೂಲಕ ಎರಡೂವರೆ ತಿಂಗಳಿನಿಂದ ಬಂದ್ ಆಗಿರುವ ತಲಪಾಡಿ ಗಡಿಯು ಕೆಲವು ಷರತ್ತುಗಳೊಂದಿಗೆ ಸೀಮಿತ ಪ್ರಯಾಣಿಕರಿಗೆ ತೆರೆದುಕೊಳ್ಳಲು ಅಣಿಯಾಗಿದೆ.
ಕಾಸರಗೋಡು ಪ್ರವೇಶಕ್ಕೆ ಅವಕಾಶ ನೀಡಿ ಜಿಲ್ಲಾಧಿಕಾರಿ ಡಾ| ಸಜಿತ್‌ಬಾಬು ಅವರು ಮಂಗಳವಾರ ಆದೇಶ ಹೊರಡಿಸಿದ ಬೆನ್ನಿಗೆ, ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರು ಬುಧವಾರ ಆದೇಶ ಹೊರಡಿಸಿ ದ.ಕ. ಪ್ರವೇಶಕ್ಕೆ ಮಾರ್ಗಸೂಚಿ ಪ್ರಕಟಿಸಿದ್ದಾರೆ.
ಕಾಸರಗೋಡಿನಿಂದ ಮಂಗಳೂರಿಗೆ ಆಗಮಿಸಲು ಹಾಗೂ ಮಂಗಳೂರಿನಿಂದ ಕಾಸರಗೋಡಿಗೆ ತೆರಳಲು ಆಯಾ ಜಿಲ್ಲಾಡಳಿತದ ಪಾಸ್ ಹೊಂದಬೇಕಾಗಿರುವುದು ಕಡ್ಡಾಯ. ಖಾಸಗಿ ಉದ್ಯೋಗಿಗಳು, ವಿದ್ಯಾರ್ಥಿಗಳು, ಆರೋಗ್ಯ ಸೇವಕರು ಮತ್ತು ಸರಕಾರಿ ನೌಕರರಿಗಷ್ಟೇ ಈಗ ಆಗಮನ – ನಿರ್ಗಮನಕ್ಕೆ ಅವಕಾಶ ನೀಡಲಾಗಿದೆ. ಗಡಿಯಲ್ಲಿ ನಿತ್ಯ ಥರ್ಮಲ್ ಸ್ಕ್ಯಾನ್ ಮತ್ತು ಆರೋಗ್ಯ ತಪಾಸಣೆ ಕಡ್ಡಾಯವಾಗಿರುತ್ತದೆ.
ಕಾಸರಗೋಡಿನಿಂದ ದ.ಕ. ಜಿಲ್ಲೆಗೆ ಆಗಮಿಸಲು ಪಾಸ್ ಮಾಡಿಸಬೇಕಾದರೆ, ಆಧಾರ್ ಕಾರ್ಡ್, ಕೆಲಸ ಮಾಡುವ ಅಥವಾ ಶಾಲೆಗೆ ತೆರಳಬೇಕಾದ ಜಾಗವನ್ನು ನಮೂದಿಸಿ, ಐಡಿ ಕಾರ್ಡ್ ದಾಖಲೆ ಸಲ್ಲಿಸಿ ಪರವಾನಿಗೆ ಪಡೆಯಬೇಕು. ಅರ್ಜಿಯನ್ನು
https://bit.ly/dkdpermit ಮೂಲಕ ಸಲ್ಲಿಸಬಹುದು. ಸಹಾಯಕ ಕಮಿಷನರ್ ಅವರು ನಿತ್ಯ ಸಂಚಾರದ ಪಾಸ್ ನೀಡುತ್ತಾರೆ. ಆದರೆ ಚೆಕ್ ಪೋಸ್ಟ್‌ನಲ್ಲಿ ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಗೊಳ್ಳಬೇಕು. ಈ ಪಾಸ್‌ಗಳ ಅವಧಿ ಜೂ.30ರ ವರೆಗೆ ಮಾತ್ರ ಇರುತ್ತದೆ. ಉದ್ಯೋಗ ಹೊರತು ಅನ್ಯ ಕಾರ್ಯಕ್ಕೆ ಪಾಸ್ ಬಳಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ಕಾಸರಗೋಡಿನವರಿಗೆ
ದಕ್ಷಿಣ ಕನ್ನಡದಿಂದ ಕಾಸರಗೋಡಿಗೆ ಪ್ರವೇಶಿಸಲು ಬಯಸುವವರು ಕಾಸರಗೋಡಿನ “ಕೋವಿಡ್ 19 ಜಾಗೃತಾ ಪೋರ್ಟಲ್’ನಲ್ಲಿ ಎಮರ್ಜೆನ್ಸಿ ಪಾಸ್‌ಗಾಗಿ ನೋಂದಣಿ ಮಾಡಬೇಕು. ಅಲ್ಲಿ “ಇಂಟರ್‌ಸ್ಟೇಟ್ ಟ್ರಾವೆಲ್ ಆನ್ ಡೈಲಿ ಬೇಸಿಸ್’ ಎಂಬ ಕಾರಣ ನೀಡಬೇಕು ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ| ಸಜಿತ್‌ಬಾಬು ತಿಳಿಸಿದ್ದಾರೆ.
ತಲಪಾಡಿ ಮೂಲಕ ಮಾತ್ರ ಅವಕಾಶ
ತಲಪಾಡಿ ಚೆಕ್‌ಪೋಸ್ಟ್ ಮೂಲಕವೇ ದ.ಕ. ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಾಸರಗೋಡು ಜಿಲ್ಲೆಯ ಉಳಿ ದೆಲ್ಲ ಗಡಿಗಳನ್ನು ಬಂದ್ ಮಾಡಲಾಗುತ್ತದೆ ಎಂದು ದ.ಕ. ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ತಿಳಿಸಿದ್ದಾರೆ.
ಕಾಸರಗೋಡು-ಕಣ್ಣೂರು ಬಸ್ ಸಂಚಾರ ಆರಂಭ
ಕಾಸರಗೋಡು – ಕಣ್ಣೂರು ನಡುವೆ ಸರಕಾರಿ ಹಾಗೂ ಖಾಸಗಿ ಬಸ್ ಸಂಚಾರ ಆರಂಭಗೊಂಡಿದೆ. ಬುಧವಾರ ಬೆಳಗ್ಗೆ ಕಾಸರಗೋಡು ಡಿಪ್ಪೋದಿಂದ ಮೊದಲ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಅನುಸರಿಸಿ ಬಸ್‌ಗಳ ಸಂಖ್ಯೆ ಹೆಚ್ಚಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರು ಸಾನಿಟೈಸರ್ ಕೈಯಲ್ಲಿರಿಸಿಕೊಳ್ಳಬೇಕು. ಮಾಸ್ಕ್ ಧರಿಸಬೇಕೆಂದು ತಿಳಿಸಲಾಗಿದೆ.