Advertisement

ಸಿಎಂಗೆ ಕೋವಿಡ್ ಪಾಸಿಟಿವ್: ರಾಜ್ಯಪಾಲರನ್ನೂ ಭೇಟಿಯಾಗಿದ್ದರು ಸಿಎಂ ಬಿಎಸ್ ವೈ!

03:32 PM Aug 03, 2020 | keerthan |

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಇತ್ತೀಚೆಗೆ ಬಿಎಸ್ ವೈ ಸಂಪರ್ಕಕ್ಕೆ ಬಂದ ರಾಜ್ಯ ನಾಯಕರಿಗೆ ಆತಂಕ ಎದುರಾಗಿದೆ. ಸ್ವತಃ ಸಿಎಂ ಬಿಎಸ್ ವೈ ಅವರಿಗೆ ಕೋವಿಡ್ ಪರೀಕ್ಷೆ ಮಾಡಿಸುವಂತೆ ಸೂಚಿಸಿದ್ದಾರೆ.

Advertisement

ಕಳೆದ ಕೆಲವು ದಿನಗಳಿಂದ ಸಿಎಂ ಯಡಿಯೂರಪ್ಪ ಅವರು ಎಲ್ಲಿಗೆಲ್ಲಾ ಭೇಟಿ ನೀಡಿದ್ದರು, ಯಾರನ್ನೆಲ್ಲಾ ಭೇಟಿಯಾಗಿದ್ದರು ಎನ್ನುವದರ ಮಾಹಿತಿ ಇಲ್ಲಿದೆ.

ಕಳೆದ ಶುಕ್ರವಾರ ಸಿಎಂ ಯಡಿಯೂರಪ್ಪ ಅವರು ರಾಜ್ಯಪಾಲ ವಜುಭಾಯಿ ವಾಲ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಈ ವೇಳೆ ಬಿಎಸ್ ವೈ ಅವರೊಂದಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡಾ ರಾಜಭವನಕ್ಕೆ ತೆರಳಿದ್ದರು. ಅದೇ ದಿನ ಡಿಸಿಎಂ ಅಶ್ವಥ್ ನಾರಾಯಣ ಅವರನ್ನೂ ಭೇಟಿಯಾಗಿದ್ದರು.

ಇದನ್ನೂ ಓದಿ: ಸಿಎಂ ಯಡಿಯೂರಪ್ಪಗೆ ಕೋವಿಡ್ ಸೋಂಕು ದೃಢ: ಶೀಘ್ರ ಚೇತರಿಕೆಗೆ ಹಾರೈಸಿದ ರಾಜ್ಯ ನಾಯಕರು

ಅದೇ ದಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಎಸ್ ವೈ ಭಾಗವಹಿಸಿದ್ದರು. ಕಿಯೋನಿಕ್ಸ್ ವೇರ್ ಹೌಸಿಂಗ್ , ಇನ್ ಕ್ಯೂಬೇಷನ್ ಮತ್ತು ಸ್ಟಾರ್ಟಪ್ ಸಂಸ್ಥೆಗಳ ಸೌಲಭ್ಯಕ್ಕಾಗಿ ನಿರ್ಮಿಸಲಾದ ನೂತನ ಕಟ್ಟಡವನ್ನು ಅವರು ಉದ್ಘಾಟನೆ ಮಾಡಿದ್ದರು.

Advertisement

ಅದೇ ದಿನ ವರಮಹಾಲಕ್ಷ್ಮೀ ಪೂಜೆ ಪ್ರಯುಕ್ತ ಪುತ್ರ ವಿಜಯೇಂದ್ರ ಮನೆಗೆ ಭೇಟಿ ನೀಡಿದ್ದ ಅವರು ಹಬ್ಬದ ಊಟ ಮಾಡಿದ್ದರು. ಸಂಜೆ ಕಸ್ತೂರಿ ರಂಗನ್ ಅವರನ್ನು ಭೇಟಿಯಾಗಿ ಸನ್ಮಾನಿಸಿದ್ದರು. ಆದರೆ ಶನಿವಾರ ಮತ್ತು ಭಾನುವಾರ ಎರಡೂ ದಿನವೂ ಬಿಎಸ್ ವೈ ಮನೆಯಲ್ಲಿಯೇ ಉಳಿದುಕೊಂಡಿದ್ದರು.

ಇದನ್ನೂ ಓದಿ: ಬಿಎಸ್ ವೈ ಪುತ್ರಿ ಪದ್ಮಾವತಿಯವರಿಗೂ ಕೋವಿಡ್ ಪಾಸಿಟಿವ್: ಪುತ್ರ ವಿಜಯೇಂದ್ರ ವರದಿ ನೆಗೆಟಿವ್

ನಿನ್ನೆ ರಾತ್ರಿ ಸಿಎಂ ಬಿಎಸ್ ವೈ ಟ್ವಿಟ್ ಮಾಡಿ ತಮಗೆ ಕೋವಿಡ್ ಸೋಂಕು ತಾಗಿರುವ ಕುರಿತು ಹೇಳಿಕೊಂಡಿದ್ದರು. ಯಾವುದೇ ಸೋಂಕು ಲಕ್ಷಣಗಳು ಇಲ್ಲದೇ ಇದ್ದರೂ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ ಎಂದಿದ್ದರು.

ರವಿವಾರ ಸಿಎಂ ನಿವಾಸದಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಬಿಎಸ್ ವೈ ಮತ್ತು ಓರ್ವ ಪುತ್ರಿಗೆ ಸೋಂಕು ದೃಢವಾಗಿತ್ತು. ಮಗ ವಿಜಯೇಂದ್ರ, ಅವರ ಆಪ್ತ ಸಹಾಯಕ ಮತ್ತು ಸಿಎಂ ಒಎಸ್ ಡಿ ಮಹಾಂತೇಶ ಅವರ ವರದಿ ನೆಗೆಟಿವ್ ಆಗಿದೆ. ಸಿಎಂ ಮತ್ತು ಪುತ್ರಿ ಪದ್ಮಾವತಿ ಅವರಿಗೆ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯೇಂದ್ರ ಒಂದು ವಾರ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next