ವಿಧಾನಸಭೆ: ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ತೇಜೋವಧೆ ನಡೆಯುತ್ತಿದೆ ಎಂಬುದಾಗಿ ಜೆಡಿಎಸ್‌ನ ಶಿವಲಿಂಗೇಗೌಡ ಪ್ರಸ್ತಾಪಿಸಿದ ವಿಚಾರದ ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ, ತಮ್ಮ ಮಾನಹರಣ ಮಾಡುತ್ತಿದ್ದು, ತಮಗಾದಂತೆ ಬೇರೆ ಯಾರಿಗೂ ಆಗುವುದು ಬೇಡ ಎಂದು ಗದ್ಗದಿತರಾದ ಪ್ರಸಂಗ ಸೋಮವಾರ ನಡೆಯಿತು.
ಜೆಡಿಎಸ್‌ನ ಎ.ಟಿ.ರಾಮಸ್ವಾಮಿ, ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪರಹಣವಾಯಿತು. ಇದೀಗ ಪ್ರಜಾಪ್ರಭುತ್ವವನ್ನು ಬೆತ್ತಲೆ ಮಾಡುತ್ತಾ ಬಂದಿದ್ದು, ಅದರ ರಕ್ಷಣೆಗೆ ಬರುವವರು ಯಾರು ಎಂದು ಪ್ರಶ್ನಿಸಿದರು. ಆಗ ಜೆಡಿಎಸ್‌ನ ಶಿವಲಿಂಗೇಗೌಡ, ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪರಹರಣವಾಯಿತು. ಇದೀಗ ಶಾಸಕರ ವಸ್ತ್ರಾಪಹರಣ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಶಾಸಕ ಅರವಿಂದ ಲಿಂಬಾವಳಿಯವರಿಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋ ಹರಿದಾಡುತ್ತಿದ್ದು, ಶಾಸಕರ ತೇಜೋವಧೆಯಾಗುತ್ತಿದೆ ಎಂದರು.
ಆಗ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ದಯಮಾಡಿ ಅನಗತ್ಯ ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸುವುದು ಬೇಡ. ದುರುದ್ದೇಶದಿಂದ ಯಾರೋ ಏನೋ ಮಾಡಿದ್ದನ್ನು ಪ್ರಸ್ತಾಪಿಸಿ ಅಪಹಾಸ್ಯಕ್ಕೆ ಒಳಗಾಗುವುದು ಬೇಡ ಎಂದು ಮನವಿ ಮಾಡಿದರು. ಬಳಿಕ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಇದರಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ಕಡೆಯ ಕೆಲವರ ಕೈವಾಡವಿದೆ. ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ನೋವು ಅನುಭವಿಸಿದ್ದೇನೆ ಎಂದು ಭಾವುಕರಾದರು.
ಆಡಳಿತ ನಡೆಸುವವರು ಶಾಸಕರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ವಾಮಮಾರ್ಗ ಹಿಡಿಯಲು ಮುಂದಾಗುವುದು ಸರಿಹೋಗದು. ಇದನ್ನು ಯಾವುದಾದರೂ ತನಿಖೆಗೆ ವಹಿಸಬೇಕು. ಇಂದು ನನಗೆ ಉಂಟಾಗಿದ್ದು, ನಾಳೆ ಇನ್ನೊಬ್ಬರಿಗೆ ಆಗಬಹುದು. ಇಂತಹ ಬೆಳವಣಿಗೆಯಿಂದ ರಾಜಕೀಯದಲ್ಲಿರಬೇಕೆ, ಬೇಡವೇ ಎಂದು ಯೋಚಿಸುವಂತಾಗಿದೆ. ಈ ಕೃತ್ಯದಲ್ಲಿ ಆ ಕಡೆಯವರೊಂದಿಗೆ (ಆಡಳಿತ ಪಕ್ಷ) ಈ ಕಡೆಯ (ಪ್ರತಿಪಕ್ಷ) ಕೆಲವರು ಕೈಜೋಡಿಸಿರಬಹುದು ಎಂದು ಗದ್ಗದಿತರಾದರು.
ಕೂಡಲೇ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್, ನಾನು ನೋವು ಅನುಭವಿಸಿರುವುದರಿಂದ ನಿಮ್ಮ ವೈಯಕ್ತಿಕ ನೋವು ಅರ್ಥವಾಗುತ್ತದೆ. ನೀವು ಧೃತಿಗೆಡಬೇಕಿಲ್ಲ ಎಂದು ಸಮಾಧಾನ ಮಾಡಿದರು. ಕಾಂಗ್ರೆಸ್‌ನ ತನ್ವೀರ್ ಸೇಠ್, ವಿಡಿಯೋ ಜತೆಗೆ ಧ್ವನಿಸುರುಳಿಯೊಂದು ಬಿಡುಗಡೆಯಾಗಿದ್ದು, ಅದರಲ್ಲಿ ಗಾಂಜಾ, ಮಾದಕ ವಸ್ತುವಿನ ಪ್ರಸ್ತಾಪವೆಲ್ಲಾ ಆಗಿದೆ. ಇದರಲ್ಲಿ ಚಾರಿತ್ರ್ಯ ವಧೆಗೆ ಕೈಹಾಕಬಾರದು.
ಆದರೆ ಇದರಲ್ಲಿ ನಾನಾ ಅಂಶಗಳಿರುವುದನ್ನು ಹಗುರವಾಗಿ ತೆಗೆದುಕೊಳ್ಳಲಾಗದು ಎಂದರು. ಮತ್ತೆ ಮಾತು ಮುಂದುವರಿಸಿದ ರಮೇಶ್ ಕುಮಾರ್, ಇಂತಹ ವಿಚಾರಗಳ ಬಗ್ಗೆ ತನಿಖೆ, ಚರ್ಚೆ ಬೇಡ. ನೀವು (ಅರವಿಂದ ಲಿಂಬಾವಳಿ)ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ ಎಂದು ಸಮಾಧಾನ ಮಾಡಿದರು.ಬಳಿಕ ಇದನ್ನು ಕಡತದಿಂದ ತೆಗೆದುಹಾಕುವಂತೆ ಸೂಚನೆ ನೀಡಿದರು.