Advertisement

ತ್ರಾಸಿ ಜಂಕ್ಷನ್‌: ಹೆದ್ದಾರಿ ಕಾಮಗಾರಿಯಿಂದ ಹತ್ತಾರು ಸಮಸ್ಯೆ

09:35 PM Oct 28, 2020 | mahesh |

ಕುಂದಾಪುರ: ಬೈಂದೂರು- ಕುಂದಾಪುರ ಹೆದ್ದಾರಿ ಕಾಮಗಾರಿ ಆರಂಭವಾದ ಬಳಿಕ ತ್ರಾಸಿ ಜಂಕ್ಷನ್‌ನಲ್ಲಿ ಅನೇಕ ಸಮಸ್ಯೆ ಉದ್ಭವ ವಾಗಿದ್ದು, ಕಾಮಗಾರಿ ಮುಗಿದು, ಸಂಚಾರಕ್ಕೆ ತೆರೆದುಕೊಂಡರೂ ಸಮಸ್ಯೆಗಳು ಮಾತ್ರ ಇನ್ನೂ ಬಗೆಹರಿದಿಲ್ಲ. ಡಿವೈಡರ್‌, ಬಸ್‌ ಬೇ, ಸರ್ವಿಸ್‌ ರಸ್ತೆ ಹೀಗೆ ಹಲವು ಬೇಡಿಕೆಗಳಿದ್ದರೂ, ಯಾವುದೂ ಈಡೇರದಿರುವುದರಿಂದ ವಾಹನ ಸವಾರರು, ಸಾರ್ವಜನಿಕರು ಬಹಳಷ್ಟು ತೊಂದರೆ ಅನುಭವಿಸು ವಂತಾಗಿದೆ.

Advertisement

ಪ್ರಮುಖ ಜಂಕ್ಷನ್‌
ಹೊಸಾಡು ಹಾಗೂ ಮರವಂತೆಯ ಮಧ್ಯೆ ಬರುವ ತ್ರಾಸಿ ಪ್ರಮುಖ ಜಂಕ್ಷನ್‌ಗಳಲ್ಲಿ ಒಂದಾಗಿದೆ. ಒಂದು ಕಡೆಯಿಂದ ಕುಂದಾಪುರ, ಉಡುಪಿಗೆ, ಮತ್ತೂಂದು ಕಡೆಯಿಂದ ಉಪ್ಪುಂದ, ಬೈಂದೂರಿಗೆ, ಇನ್ನೊಂದು ಕಡೆಯಿಂದ ಗಂಗೊಳ್ಳಿ, ಗುಜ್ಜಾಡಿಗೆ ಹಾಗೂ ಮೋವಾಡಿ ಕಡೆಗೂ ಸಂಪರ್ಕಿಸುವ ಜಂಕ್ಷನ್‌ ಇದಾಗಿದೆ. ಗಂಗೊಳ್ಳಿ, ಮರವಂತೆ ಬಂದರಿಗೆ ಸಂಚರಿಸುವ ಅನೇಕ ಮೀನಿನ ಲಾರಿಗಳು, ಬೈಂದೂರು, ಭಟ್ಕಳ, ಕುಂದಾಪುರ, ಉಡುಪಿ ಕಡೆಗೆ ಸಂಚರಿಸುವ ಎಕ್ಸ್‌ಪ್ರೆಸ್‌ ಬಸ್‌ಗಳು, ಗಂಗೊಳ್ಳಿ, ನಾಡ, ಪಡುಕೋಣೆ ಕಡೆಗೆ ಸಂಚರಿಸುವ ಸ್ಥಳೀಯ ಬಸ್‌ಗಳು ಹೀಗೆ ನಿತ್ಯ ಸಾವಿರಾರು ವಾಹನಗಳು ಹಾದು ಹೋಗುತ್ತವೆ. ಆದರೆ ಇಲ್ಲಿನ ಸಂಚಾರ ಅವ್ಯವಸ್ಥೆಯಿಂದಾಗಿ ಈ ಜಂಕ್ಷನ್‌ ಅಪಾಯಕಾರಿ ಯಾಗಿ ಮಾರ್ಪಟ್ಟಿದೆ.

ಅವೈಜ್ಞಾನಿಕ ಡಿವೈಡರ್‌
ತ್ರಾಸಿಯಿಂದ ಕುಂದಾಪುರ ಕಡೆಗೆ ಯೂಟರ್ನ್ ಅಥವಾ ಬೈಂದೂರು ಕಡೆಯಿಂದ ಬಂದು ಗಂಗೊಳ್ಳಿ ಕಡೆಗೆ ಸಂಚರಿಸಬೇಕಾದರೆ ಇಲ್ಲಿನ ಡಿವೈಡರ್‌ ದಾಟಬೇಕು. ಆದರೆ ಇಲ್ಲಿ ಬಸ್‌ ಅಥವಾ ಮೀನಿನ ಲಾರಿಗಳು ಡಿವೈಡರ್‌ ಕ್ರಾಸಿಂಗ್‌ ಬಳಿ ನಿಂತು ರಸ್ತೆ ದಾಟುವುದು ಅಸಾಧ್ಯ. ಯಾಕೆಂದರೆ ಡಿವೈಡರ್‌ ಹೆಚ್ಚು ಅಗಲವಿಲ್ಲ. ಇದರಿಂದ ಬಸ್‌ ಅಥವಾ ಲಾರಿ ಈ ಡಿವೈಡರ್‌ ಮಧ್ಯೆ ನಿಂತರೆ ಒಂದು ಕಡೆಯ ಹೆದ್ದಾರಿಗೆ
ಪೂರ್ತಿ ಅಡ್ಡಲಾಗಿ ನಿಲ್ಲಬೇಕಾಗುತ್ತದೆ. ಈ ಅವೈಜ್ಞಾನಿಕ ಡಿವೈಡರ್‌ನಿಂದಾಗಿ ಇಲ್ಲಿ ಕನಿಷ್ಠ ಒಂದು ರಿಕ್ಷಾ ಕೂಡ ನಿಲ್ಲುವುದು ಕಷ್ಟ ಎನ್ನುತ್ತಾರೆ ಸ್ಥಳೀಯರು.

ಹೆದ್ದಾರಿಯಲ್ಲೇ ಬಸ್‌ ನಿಲುಗಡೆ
ಸಾಮಾನ್ಯವಾಗಿ ಪ್ರಮುಖ ಜಂಕ್ಷನ್‌ಗಳಲ್ಲಿ ಬಸ್‌ ಬೇ ನಿರ್ಮಾಣ ಮಾಡಲಾಗುತ್ತದೆ. ಆದರೆ ತ್ರಾಸಿ ಸಹ ಒಂದು ಪ್ರಮುಖ ಜಂಕ್ಷನ್‌ ಆಗಿದ್ದರೂ
ಕುಂದಾಪುರದಿಂದ ಬೈಂದೂರಿಗೆ ಸಂಚರಿಸುವ ಮಾರ್ಗದಲ್ಲಿ ಬಸ್‌ ಬೇಯನ್ನೇ ನಿರ್ಮಿಸಿಲ್ಲ. ಇದರಿಂದ ಬಸ್‌ಗಳು ಹೆದ್ದಾರಿಯಲ್ಲೇ ನಿಲ್ಲುವಂತಾಗಿದೆ. ಬಸ್‌ಗಳು ಡಿವೈಡರ್‌ ಕ್ರಾಸಿಂಗ್‌ ಬಳಿಯೇ ನಿಲ್ಲುತ್ತಿರುವುದರಿಂದ ಇತರ ವಾಹನಗಳ ಸವಾರರಿಗೆ ಗೊಂದಲ ಮೂಡಿಸುವ ಜತೆಗೆ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಬೀದಿ ದೀಪವೂ ಸಹ ಇಲ್ಲದಿರುವುದ ರಿಂದ ರಾತ್ರಿ ವೇಳೆ ಅಪಾಯಕಾರಿಯಾಗಿದೆ.

ಸರ್ವಿಸ್‌ ರಸ್ತೆಯೂ ಇಲ್ಲ
ತ್ರಾಸಿ ಪೇಟೆಯ ಅಣ್ಣಪ್ಪಯ್ಯ ಸಭಾ ಭವನದಿಂದ ತ್ರಾಸಿ ಬೀಚ್‌ವರೆಗಿನ ಹೆದ್ದಾರಿ ಇಕ್ಕೆಲಗಳಲ್ಲಿ ಸರ್ವಿಸ್‌ ರಸ್ತೆ ನಿರ್ಮಿಸಬೇಕು ಎನ್ನುವುದು ಕಾಮಗಾರಿ ಆರಂಭವಾದಾಗಲೇ ಸ್ಥಳೀಯರ ಬೇಡಿಕೆಯಾಗಿತ್ತು. ಆದರೆ ಈವರೆಗೆ ಅದಕ್ಕೆ ಬೇಕಾದ ಜಾಗ ಒತ್ತುವರಿ ಅಥವಾ ಯಾವುದೇ ಬೆಳವಣಿಗೆ ಕೂಡ ನಡೆದಿಲ್ಲ. ಇಲ್ಲಿ ಸರ್ವಿಸ್‌ ರಸ್ತೆ ನಿರ್ಮಿಸಿ, ಆಟೋ, ಟ್ಯಾಕ್ಸಿ ಚಾಲಕರಿಗೆ ನಿಲ್ದಾಣ ನಿರ್ಮಿಸಿ, ಪಾದಚಾರಿಗಳಿಗೆ ಸಂಚರಿಸಲು ಫೂಟ್‌ ಬ್ರಿಡ್ಜ್ ನಿರ್ಮಿಸಬೇಕು. ಈ ಬಗ್ಗೆ ಶಾಸಕರು, ಸಂಸದರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನಹರಿಸಲಿ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

Advertisement

ಸಮಸ್ಯೆಗಳ ಸರಮಾಲೆ
ಡಿವೈಡರ್‌ ಅಪಾಯಕಾರಿಯಾಗಿದ್ದರೆ, ಬಸ್‌ ಬೇ ನಿರ್ಮಾಣವಾಗದೇ ಹೆದ್ದಾರಿ ಯಲ್ಲೇ ಬಸ್‌ಗಳನ್ನು ನಿಲ್ಲಿಸುವಂತಾಗಿದೆ. ಸರ್ವಿಸ್‌ ರಸ್ತೆಯಂತೂ ಆಗುವ ಲಕ್ಷಣವೇ ಕಾಣುತ್ತಿಲ್ಲ. ಬೀದಿ ದೀಪ ಕೂಡ ಇಲ್ಲ. ಹೀಗೆ ಸಾಗುತ್ತದೆ ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ತ್ರಾಸಿ ಜಂಕ್ಷನ್‌ನ ಸಮಸ್ಯೆಗಳ ಸರಮಾಲೆ.

ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ
ತ್ರಾಸಿ ಜಂಕ್ಷನ್‌ನಲ್ಲಿನ ಸಮಸ್ಯೆ ಕುರಿತಂತೆ ಅದನ್ನು ಸರಿಪಡಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಡಿವೈಡರ್‌ ಸಮಸ್ಯೆ, ಸರ್ವಿಸ್‌ ರಸ್ತೆ ಇತ್ಯಾದಿ ಬೇಡಿಕೆ ಬಗ್ಗೆ ಮತ್ತೂಮ್ಮೆ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು.
-ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

ಸರ್ವಿಸ್‌ ರಸ್ತೆಯೂ ಇಲ್ಲ
ಡಿವೈಡರ್‌ ಮಧ್ಯೆ ಬಸ್‌, ಲಾರಿ ಬಿಡಿ ಕನಿಷ್ಠ ರಿಕ್ಷಾ ನಿಲ್ಲಿಸುವುದು ಕೂಡ ಅಪಾಯಕಾರಿ. ಬೀದಿ ದೀಪ, ಸರ್ವಿಸ್‌ ರಸ್ತೆ ಯೂ ಇಲ್ಲಿಲ್ಲ. ಸರ್ವಿಸ್‌ರಸ್ತೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಬಸ್‌ಗಳು ಸಹ ಹೆದ್ದಾರಿಯಲ್ಲೇ ನಿಲ್ಲುತ್ತಿವೆ.
-ಸಂತೋಷ್‌ ಪೂಜಾರಿ ತ್ರಾಸಿ, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next