ವಾಷಿಂಗ್ಟನ್: ಕೋವಿಡ್ ನಿಯಂತ್ರಣಕ್ಕೆ ಹಲವು ಕಂಪೆನಿಗಳು ಲಸಿಕೆ ಸಂಶೋಧನೆಯ ಹಾದಿಯಲ್ಲಿದ್ದು, ಶೀಘ್ರವೇ ಲಭ್ಯವಾಗುವ ಸಾಧ್ಯತೆಗಳಿವೆ. ಬಲು ಸವಾಲಿನ ಕೆಲಸವೆಂದರೆ, ಲಸಿಕೆಯನ್ನು ಜಗತ್ತಿನ ಮೂಲೆ ಮೂಲೆಗೆ ಶೀತಲ ಸ್ಥಿತಿಯಲ್ಲಿ ಸುರಕ್ಷಿತವಾಗಿ ಸಾಗಿಸಿ ಕೊನೆಯ ವ್ಯಕ್ತಿಯವರೆಗೆ ತಲುಪಿಸುವುದು. ಅದಕ್ಕಾಗಿ ಜಗತ್ತಿನ ಪ್ರಮುಖ ವೈಮಾನಿಕ ಸಂಸ್ಥೆಗಳು “ಶತಮಾನದ ಮಿಷನ್’ಗೆ ಸಿದ್ಧತೆ ನಡೆಸುತ್ತಿವೆ.
ಜಗತ್ತಿನ ಪ್ರಮುಖ ವಿಮಾನ ಕಂಪೆನಿ ಯಾಗಿರುವ ಲುಫ್ತಾನ್ಸಾ ಲಸಿಕೆ ಸಾಗಣೆ ಬಗ್ಗೆ ಸಿದ್ಧತೆ ನಡೆಸಿದೆ. ಅದಕ್ಕಾಗಿ 20 ಸದಸ್ಯರ ಸಮಿತಿ ರಚನೆ ಮಾಡಿದೆ. ಅದು ತನ್ನ 15 ಬೋಯಿಂಗ್ 777, ಎಂಡಿ -11 ವಿಮಾನ ಗಳಲ್ಲಿ ಅಗತ್ಯ ಬದಲಾವಣೆ ಮಾಡುವ ಬಗ್ಗೆ ಪರಿಶೀಲನೆ ನಡೆಸಲಿದೆ. ವಿಮಾನ ಯಾನ ಆರಂಭವಾಗಿದ್ದರೂ ಒಟ್ಟು ಆಸನಗಳಲ್ಲಿ ಶೇ.25ರಷ್ಟು ಭರ್ತಿ ಮಾಡಿಕೊಂಡು ಸಂಚರಿಸಲು ಅನುವು ಮಾಡಿಕೊಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಲುಫ್ತಾನ್ಸಾದ ಹಿರಿಯ ಅಧಿಕಾರಿ ಥೋರ್ಸ್‌ಟನ್ ಬ್ರೌನ್, ಲಸಿಕೆಯನ್ನು ಹೇಗೆ ಸಾಗಣೆ ಮಾಡುವುದು ಎಂಬುದೇ ನಮ್ಮ ಮುಂದಿರುವ ಸವಾಲು ಎಂದು ಹೇಳಿದ್ದಾರೆ. ಸೋಂಕಿನ ಹೊಡೆತಕ್ಕೆ ಜಗತ್ತಿನ ವಿಮಾನ ಸಂಚಾರ ಶೇ. 61ರಷ್ಟು ರದ್ದಾಗಿದೆ. ಹೀಗಾಗಿ ಲಸಿಕೆ ಸಾಗಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಾದ ಅನಿ ವಾರ್ಯ ಸಂಸ್ಥೆಗಳಿಗೂ ಇದೆ. ಅಂತಾ ರಾಷ್ಟ್ರೀಯ ವಿಮಾನ ಸಾರಿಗೆ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲೆಕ್ಸಾಂಡರ್ ಡೆ ಜ್ಯುನಿಯಾಕ್ ಅವ ರು, ವಿಮಾನ ಸಂಸ್ಥೆಗಳು ಇದುವರೆಗೆ ಇಷ್ಟು ದೊಡ್ಡ ಪ್ರಮಾಣ ಮತ್ತು ಸವಾಲಿನ ಸ್ಥಿತಿಯಲ್ಲಿ ಸರಕುಗಳನ್ನು ಸಾಗಣೆ ಮಾಡಿದ್ದಿಲ್ಲ. ಜಗತ್ತು ನಮ್ಮಿಂದ ಭಾರೀ ನಿರೀಕ್ಷೆ ಇರಿಸಿಕೊಂಡಿದೆ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ವಿಮಾನ ಸಾರಿಗೆ ಒಕ್ಕೂಟ (ಐಎಟಿಎ)ದ ಅಂದಾಜು ಪ್ರಕಾರ 110 ಟನ್ ತೂಕ ಹೊರುವ ಸಾಮರ್ಥ್ಯದ ಬೋಯಿಂಗ್ 747 ವಿಮಾನದಲ್ಲಿ 14 ಶತಕೋಟಿ ಡೋಸ್ ಲಸಿಕೆಯನ್ನು ರವಾನಿಸುವ ಸವಾಲು ಇದೆ. ಪ್ರತಿಯೊಬ್ಬರಿಗೆ ಎರಡು ಡೋಸ್ ಲಸಿಕೆಯನ್ನು ನೀಡಬೇಕಾಗುತ್ತದೆ.
2 ಸಾವಿರ ವಿಮಾನಗಳು
ಸದ್ಯ ಜಗತ್ತಿನಾದ್ಯಂತ ಸರಕು ಸಾಗಣೆಯ 2 ಸಾವಿರ ಮತ್ತು 22 ಸಾವಿರ ಪ್ರಯಾಣಿಕರ ವಿಮಾನಗಳಿವೆ. ಸದ್ಯದ ಸ್ಥಿತಿಯ ಹಿನ್ನೆಲೆಯಲ್ಲಿ ವಿಮಾನ ಯಾನ ಸಂಸ್ಥೆಗಳು 2,500 ಪ್ರಯಾಣಿಕರ ವಿಮಾನಗಳನ್ನು ಸರಕು ಸಾಗಣೆಯ ಅಗತ್ಯಕ್ಕೆ ತಕ್ಕಂತೆ ಪರಿವರ್ತನೆ ಮಾಡುವುದಕ್ಕೆ ಮುಂದಾಗಿವೆ. ಕೊರೊನಾ ಪೂರ್ವದಂತೆ ವಿಮಾನ ಸಂಚಾರವಿದ್ದಿದ್ದರೆ ಸುಲಲಿತವಾಗಿ ಲಸಿಕೆಯನ್ನು ಜಗತ್ತಿನ ಮೂಲೆ ಮೂಲೆಗಳಿಗೆ ತಲುಪಿಸಲು ಸಾಧ್ಯವಿದೆ ಎನ್ನುತ್ತಾರೆ ವೈಮಾನಿಕ ಸಂಸ್ಥೆಯ ಅಧಿಕಾರಿಗಳು.