Advertisement

ಕಲಿಯಬೇಕೆನ್ನುವ ವಿದ್ಯಾರ್ಥಿಗಳಿಗೆ ಸಾರಿಗೆಯದ್ದೇ ಸಮಸ್ಯೆ

06:24 PM May 31, 2022 | Team Udayavani |

ಹಿರೇಬಾಗೇವಾಡಿ: ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದರೂ ಕೂಡ ಗ್ರಾಮಾಂತರ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳು ನಾನಾ ರೀತಿಯ ತೊಂದರೆಗಳನ್ನು ಅನುಭವಿಸುತ್ತಲೇ ಇದ್ದಾರೆ. ಅದರಲ್ಲಿ ಇಲ್ಲಿನ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳ ಸಾರಿಗೆ ಅನಾನುಕೂಲತೆಯೂ ಒಂದು. ಹೌದು ! ಇಲ್ಲಿನ ಸರ್ಕಾರಿ ಪ್ರೌಢಶಾಲೆಯುವರ್ಷದಿಂದ ವರ್ಷಕ್ಕೆ ಈ ಹಿಂದಿನ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುತ್ತಲೇ ಶೈಕ್ಷಣಿಕ ಪ್ರಗತಿಯುತ್ತ ದಾಪುಗಾಲು ಹಾಕುತ್ತಿದೆ. ಶಾಲಾ ಕಟ್ಟಡ, ನುರಿತ ಶಿಕ್ಷಕ ವೃಂದ ಹಾಗೂ ಮೂಲ ಸೌಕರ್ಯಗಳ ಜೊತೆಗೆ ಕಟ್ಟುನಿಟ್ಟಿನ ಆಡಳಿತ ಮತ್ತು ಎಸ್‌ಎಸ್‌ಎಲ್‌ಸಿ ಯಲ್ಲಿ ಉತ್ತಮ ಫಲಿತಾಂಶವನ್ನೂ ಸಹ ನೀಡಿದೆ.

Advertisement

ಹಾಗಾಗಿ ಇಲ್ಲಿ ದಾಖಲಾತಿಯೆ ಪ್ರಮಾಣವೂ ಸಹ ಗಣನೀಯವಾಗಿ ಏರಿಕೆಯಾಗುತ್ತಿದೆ. ಸುತ್ತ-ಮುತ್ತಲಿನ ಗ್ರಾಮಗಳ ವಿಧ್ಯಾರ್ಥಿಗಳೂ ಸಹ ಅಧಿಕ ಪ್ರಮಾಣದಲ್ಲಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಆದರೆ ಸಮಸ್ಯೆ ಶುರುವಾಗುವುದೇ ಇಲ್ಲಿ!

ಸುವರ್ಣ ಸೌಧದ ಸನಿಹದಲ್ಲಿರುವ ಗ್ರಾಮಗಳಾದ ಹಲಗಾ, ಕೊಂಡಸಕೊಪ್ಪ , ಕಮಕಾರಹಟ್ಟಿ ಹಾಗೂ ಗಿರಿಯಾಲ ಗ್ರಾಮಗಳಿಂದ 121 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆದಿದ್ದಾರೆ. ಅದರಲ್ಲಿ ವಿದ್ಯಾರ್ಥಿನಿಯರದ್ದೇ ಸಿಂಹ ಪಾಲು. ಶಾಲೆಗೆ ಬಂದು ಹೋಗಲು ಇವರೆಲ್ಲಾ ರಾಜ್ಯ ರಸ್ತೆ ಸಾರಿಗೆಯ ಬಸ್‌ ಗಳನ್ನು ಅವಲಂಬಿಸಿದವರು. ಆದರೆ ಇವರಿಗೆ ಸಾರಿಗೆ ಸೌಲಭ್ಯ ಮರೀಚಿಕೆಯಾಗುತ್ತಿದೆ.

ಕಾರಣ ಬೆಳಗಾವಿ-ಗಿರಿಯಾಲ ಬಸ್‌ ಬೆಳಗ್ಗೆ 8 ಗಂಟೆಗೆ ಬರುತ್ತದೆ. ಅಲ್ಲದೆ ತಿಗಡಿ ಹಾಗೂ ಗಣಿಕೊಪ್ಪ ಬಸ್‌ಗಳು ಇದ್ದರೂ ಸಹ ಶಾಲಾ ಸಮಯಕ್ಕೆ ಹೊಂದಾಣಿಕೆ ಆಗುತ್ತಿಲ್ಲ. ಅಲ್ಲದೆ ಹಲಗಾ ಹಾಗೂ ಕೊಂಡಸಕೊಪ್ಪ ಗ್ರಾಮಗಳು ಸುವರ್ಣ ಸೌಧದ ಮುಂಭಾಗದಲ್ಲಿವೆ. ಇಲ್ಲಿನ ವಿದ್ಯಾರ್ಥಿಗಳು ಬೆಳಿಗ್ಗೆ ಶಾಲೆಗೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಇನ್ನೊಂದು ಬದಿಗೆ ಹೋಗುವುದು ಅಪಾಯಕ್ಕೆ ಆಹ್ವಾನ ನೀಡುವಂತಾಗುತ್ತಿದೆ. ಆದ್ದರಿಂದ ಬಸ್ತವಾಡ ಸರ್ವಿಸ್‌ ಬಲಗಡೆ ರಸ್ತೆಯಿಂದ ಹಾಗೂ ಕಮಕಾರಹಟ್ಟಿ ಎಡಗಡೆಯಿಂದ ಬಸ್‌ ಗಳು ಸಂಚರಿಸುವಂತಾಗಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಆಗ್ರಹಿಸುತ್ತಿದ್ದಾರೆ.

ಬಡವನಾದರೂ ದುಡ್ಡು ಕೊಟ್ಟು ಬರಬೇಕು
ಸರಕಾರದ ಈಗಿನ ನಿಯಮದ ಪ್ರಕಾರ 9 ಹಾಗು 10 ನೇಯ ತರಗತಿಯ ವಿಧ್ಯಾರ್ಥಿಗಳಿಗೆ ಮಾತ್ರ ಹಳೆ ಪಾಸ್‌ಗಳ ಮೂಲಕ ಸಂಚರಿಸಲು ಅವಕಾಶವಿದೆ. ಹಾಗಾದರೆ 8 ನೆಯ ವರ್ಗದ ಮಕ್ಕಳ ಪಾಡೇನು? ಅವರು ದಿನಕ್ಕೆ ಎರಡು ಬದಿಯ ಪ್ರಯಾಣಕ್ಕೆ ಕನಿಷ್ಠ 30ರೂ. ಖರ್ಚು ಮಾಡಬೇಕಾಗಿದೆ. ಈ ಗ್ರಾಮಗಳಲ್ಲಿನ ಮಕ್ಕಳ ಪಾಲಕರು ಸ್ಥಿತಿವಂತರಲ್ಲ, ಕೂಲಿ ಕಾರ್ಮಿಕರಾಗಿಯೇ ಬಹಳಷ್ಟು ಜನ ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಅಧಿ ಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ.

Advertisement

ನಮ್ಮ ತಂದೆ ತಾಯಿ ತಮ್ಮ ಕಡಿಮೆ ಆದಾಯದಲ್ಲಿಯೇ ನಮ್ಮನ್ನು ಓದಿಸಲು ಹರಸಾಹಸ ಪಡುತ್ತಿದ್ದಾರೆ, ಸಾರಿಗೆ ಸಮಸ್ಯೆಯಿಂದ ನಮಗೆ ತೊಂದರೆ ಆಗುತ್ತಿದ್ದು ಆದಷ್ಟು ಬೇಗ ಪರಿಹಾರ ಸಿಗಬೇಕು.
ಸಂಜನಾ ಮಲ್ಲತವಾಡ,
ವಿದ್ಯಾರ್ಥಿನಿ

ಬೇರೆ ಗ್ರಾಮಗಳಿಂದ ಹಿರೇಬಾಗೇವಾಡಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳ ಸಾರಿಗೆ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿದ್ದು, ಈ ಬಗ್ಗೆ ಅ ಧಿಕಾರಿಗಳೊಂದಿಗೆ ಶೀಘ್ರ ಚರ್ಚಿಸಿ, ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ.
ಪ್ರಕಾಶ ಹುಕ್ಕೇರಿ, ಎಮ್‌.ಎಲ್‌.ಸಿ
ಶಿಕ್ಷಕ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ

ವಿದ್ಯಾರ್ಥಿಗಳೇ ಈ ದೇಶದ ಆಸ್ತಿ. ಹಾಗಾಗಿ ಅವರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ. ಸಮಸ್ಯೆ ಬಗ್ಗೆ ಅರಿವಿದ್ದು, ಶೀಘ್ರವೇ ಪರಿಹಾರಕ್ಕಾಗಿ ಶ್ರಮಿಸುತ್ತೇನೆ.
ಅರುಣ ಶಹಾಪೂರ,
ಎಮ್‌.ಎಲ್‌.ಸಿ ಶಿಕ್ಷಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಶಿವಾನಂದ ಮೇಟಿ

Advertisement

Udayavani is now on Telegram. Click here to join our channel and stay updated with the latest news.

Next