ಮಂಗಳೂರು: ಸಾರಿಗೆ ಉದ್ಯಮಕ್ಕೆ ಜಿಎಸ್‌ಟಿಯ ಪರಿಣಾಮ ಅಷ್ಟೇನೂ ಇರದು. ಆದರೆ ಕಟ್ಟಡ ನಿರ್ಮಾಣ ಕೆಲಸದ ಮೇಲೆ ಹೊಡೆತ ಬಿದ್ದಲ್ಲಿ ಸಾರಿಗೆ ಉದ್ಯಮಕ್ಕೂ ತಟ್ಟುವ ಸಾಧ್ಯತೆಯಿದೆ.
ಮಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬಹುತೇಕ ಕಾರ್ಮಿಕರು ಧಾರವಾಡ, ವಿಜಾಪುರ ಮುಂತಾದ ಜಿಲ್ಲೆಯವರು. ಸಿಟಿ ಬಸ್ ಅವಲಂಬಿಸಿರುವ ಹೆಚ್ಚಿನ ಪ್ರಯಾಣಿಕರೂ ಈ ನಿರ್ಮಾಣ ಕ್ಷೇತ್ರದ ಕಾರ್ಮಿಕರು.
ಒಂದು ವೇಳೆ ಜಿಎಸ್‌ಟಿಯಿಂದ ಕಟ್ಟಡ ನಿರ್ಮಾಣ ಉದ್ಯಮಕ್ಕೆ ಹೊಡೆತ ಬಿದ್ದರೆ ಅಂತಹ ಕಾರ್ಮಿಕರಿಗೆ ಕೆಲಸ ಕಡಿಮೆಯಾಗುವುದರಿಂದ ಅವರು ಉದ್ಯೋಗ ಹುಡುಕಿ ಬೇರೆ ಊರುಗಳಿಗೆ ತೆರಳಬಹುದು. ಆಗ ಸಹಜವಾಗಿ ಸಿಟಿ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತದೆ. ಅಲ್ಲದೆ ಖಾಸಗಿ ಸಾರಿಗೆ ಉದ್ಯಮದಲ್ಲಿ ಕಲೆಕ್ಷನ್ ಕಡಿಮೆಯಾಗಿ ಉದ್ಯಮಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ ಎನ್ನುತ್ತಾರೆ ದ.ಕ. ಬಸ್ ಮಾಲಕರ ಸಂಘದ ಮುಖಂಡ ಅಝೀಝ್ ಪರ್ತಿಪ್ಪಾಡಿ.
ಖಾಸಗಿ ಸಾರಿಗೆ ಉದ್ಯಮದ ಮೇಲೆ ಜಿಎಸ್‌ಟಿಯಿಂದ ಯಾವುದೇ ನೇರ ಪರಿಣಾಮ ಇಲ್ಲ. ನಿರ್ಮಾಣ ಉದ್ಯಮದ ಮೇಲೆ ಪರಿಣಾಮವಾದರೆ ಮತ್ತು ವಾಹನದ ಬಿಡಿಭಾಗಗಳು, ಆಯಿಲ್ ಇತ್ಯಾದಿ ಬೆಲೆ ಹೆಚ್ಚಳವಾದರೆ ಸ್ವಲ್ಪ ಪ್ರಮಾಣದ ಸಮಸ್ಯೆ ಉಂಟಾದೀತು ಎನ್ನುತ್ತಾರೆ ಅವರು.
ನೋಂದಣಿ ಮಾಹಿತಿ ಇಲ್ಲ
ಜಿಎಸ್‌ಟಿ ಜಾರಿಗೊಂಡ ಬಳಿಕ ಯಾವೆಲ್ಲ ವಸ್ತುಗಳು ತುಟ್ಟಿಯಾಗುತ್ತವೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಸಂಘವು ಇದಕ್ಕೆ ನೋಂದಣಿ ಮಾಡಿಕೊಳ್ಳಬೇಕೇ ಬೇಡವೇ ಎಂಬುದರ ಬಗ್ಗೆಯೂ ತಿಳಿದಿಲ್ಲ. ಈ ಬಗ್ಗೆ ಮಾಹಿತಿ ಪಡೆಯಲಾಗುವುದು ಎನ್ನುತ್ತಾರೆ ಅಝೀಝ್ ಪರ್ತಿಪಾಡಿ.
– ಧನ್ಯಾ ಬಾಳೆಕಜೆ