Advertisement

Sand ಉಳಿಯತ್ತಡ್ಕ ಹೊಳೆಯಿಂದ ಮರಳು ಸಾಗಾಟ: ಆತಂಕ

11:34 PM Dec 04, 2023 | Team Udayavani |

ವಿಟ್ಲ: ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಉಳಿಯತ್ತಡ್ಕ ಹೊಳೆಯಿಂದ ಮರಳು ಸಾಗಾಟ ನಡೆಸಲಾಗುತ್ತಿದ್ದು, ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

1968ರಲ್ಲಿ ಉಳಿಯತ್ತಡ್ಕ ಹೊಳೆಗೆ ಕಿಂಡಿ ಅಣೆಕಟ್ಟು ಮತ್ತು ಸ್ಥಳೀಯರಿಗೆ ಸಂಪರ್ಕ ಸೇತುವೆ ನಿರ್ಮಿಸಲಾಗಿತ್ತು. ಇದು ಈ ಭಾಗದ ಕೃಷಿಕರ ತೋಟಕ್ಕೆ ನೀರುಣಿಸುತ್ತಿತ್ತು. ಅಲ್ಲದೇ ಸ್ಥಳೀಯ ಕೃಷಿಕರ ಜಲಮೂಲವೂ ಆಗಿತ್ತು. ಈ ಹೊಳೆಯಲ್ಲಿ ನೀರು ಇರುವ ತನಕ ಈ ಭಾಗದ ಕೃಷಿಕರಿಗೆ ನೀರಿನ ಬರವಿರಲಿಲ್ಲ. ಈ ಕಿಂಡಿ ಅಣೆಕಟ್ಟಿನ ಮೇಲೆ ಸ್ಥಳೀಯ ದೈವದ ಪೈಚಿಲ್‌ ನೇಮಕ್ಕೆ ಭಂಡಾರ ಸಾಗುತ್ತದೆ. ಕಿಂಡಿ ಅಣೆಕಟ್ಟೆ ಮೇಲೆ ಕೃಷಿಕರು ಹೊಳೆ ದಾಟುತ್ತಾರೆ ಮತ್ತು ಸಾಮಗ್ರಿಗಳನ್ನು ಒಯ್ಯುತ್ತಾರೆ. ಅತ್ಯಂತ ಉಪಯುಕ್ತ ಕಿರು ಸೇತುವೆಯೂ, ನೀರಿನ ಆಶ್ರಯವನ್ನೂ ಹೊಂದಿರುವ ಹೊಳೆಯ ಮರಳನ್ನು ಕಿತ್ತು ಜನಜೀವನ ಅಸ್ತವ್ಯಸ್ತಗೊಳಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ದೂರಲಾಗಿದೆ.

ಸ್ಥಳೀಯರಿಗೆ ಆತಂಕ ಏನು?
ಈ ಕಿಂಡಿ ಅಣೆಕಟ್ಟೆಯ ಬಳಿ ಅಂದರೆ 100 ಮೀಟರ್‌ ದೂರದಲ್ಲಿ ಜೆಸಿಬಿಯಲ್ಲಿ ಮರಳು ಎತ್ತಲಾಗುತ್ತಿದೆ. ಪ್ರತೀದಿನ ಲಾರಿಗಳಲ್ಲಿ 50 ಲೋಡ್‌ ಮರಳನ್ನು ಕೇರಳಕ್ಕೆ ಸಾಗಾಟ ಮಾಡಲಾಗುತ್ತಿದೆ. ಕರ್ನಾಟಕ-ಕೇರಳ ಗಡಿಭಾಗದಲ್ಲಿ ಈ ಕೃತ್ಯವನ್ನು ಅವ್ಯಾಹತವಾಗಿ ಮಾಡಲಾಗುತ್ತಿದ್ದು, ಅಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿದರೂ ಫಲ ಸಿಕ್ಕಿಲ್ಲ. ಅಧಿಕಾರಿ ಗಳು ಸ್ಥಳಕ್ಕೆ ಭೇಟಿ ನೀಡುವ ವೇಳೆ ಜೆಸಿಬಿ, ಲಾರಿಗಳಿರುವುದಿಲ್ಲ ಎಂದು ಹೇಳಲಾಗುತ್ತಿದ್ದು, ಇದು ಪೂರ್ವನಿಯೋಜಿತ ವ್ಯವಸ್ಥೆ ಎಂದು ಟೀಕಿಸುತ್ತಿದ್ದಾರೆ.

ಭಾರೀ ಅನಾಹುತ ಸಾಧ್ಯತೆ
ಸುಮಾರು ಎರಡು ತಿಂಗಳ ಹಿಂದೆ ಈ ಕಾರ್ಯ ಆರಂಭವಾಗಿದ್ದು, ಹೊಳೆಯ ದಡದಲ್ಲಿರುವ ಕೃಷಿಕರಿಗೆ ಆಪತ್ತನ್ನುಂಟು ಮಾಡಿದೆ. ಇದನ್ನು ಅಧಿಕಾರಿಗಳು ಅಥವಾ ಜನಪ್ರತಿನಿಧಿ ಗಳು ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ ಭಾರೀ ಅನಾಹುತ ಉಂಟಾಗಲಿದೆ. ಹತ್ತಿರದಲ್ಲೇ ಮರಳನ್ನು ತೆಗೆಯುವ ಪರಿಣಾಮ ಕಿಂಡಿ ಅಣೆಕಟ್ಟು ಕೊಚ್ಚಿಹೋಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ಚಿಂತಿತರಾಗಿದ್ದಾರೆ. ಕೃಷಿಕರ ಜೀವನಕ್ಕೆ ಅಡ್ಡಿಯಾಗುವ ಮರಳು ಸಾಗಾಟವನ್ನು ನಿಲ್ಲಿಸಲು ಸಂಬಂಧ ಪಟ್ಟ ಇಲಾಖಾಧಿಕಾರಿಗಳು, ಜನಪ್ರತಿ ನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಮನವಿಗೆ ಸ್ಪಂದಿಸದೇ ಇದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕೃಷಿಕರು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next