Advertisement

ಆರ್‌ಟಿಓ ಕಚೇರಿಗಳಲ್ಲಿ ನೇರ ನೇಮಕಾತಿಗೆ ಚಿಂತನೆ

06:00 AM Jul 19, 2018 | Team Udayavani |

ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಆರ್‌ಟಿಓ ಮತ್ತು ಮೋಟಾರು ವಾಹನ ಇನ್ಸ್‌ಪೆಕ್ಟರ್‌ ಹುದ್ದೆಗಳು ಸಾಕಷ್ಟು ಪ್ರಮಾಣದಲ್ಲಿ ಖಾಲಿ ಇರುವುದರಿಂದ ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಗೊಳಿಸಲು ಕಾನೂನು ತಿದ್ದುಪಡಿ ಮಾಡುವ ಚಿಂತನೆ ನಡೆಸಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಟಿಓ ಮತ್ತು ಮೋಟಾರು ವಾಹನ ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿರುವುದರಿಂದ ಸಾಕಷ್ಟು ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ತಿದ್ದುಪಡಿ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ಇಲಾಖೆಯಲ್ಲಿ ಒಟ್ಟು 676 ಆರ್‌ಟಿಓ ಮತ್ತು ಮೋಟಾರು ವಾಹನ ಇನ್ಸ್‌ಪೆಕ್ಟರ್‌ ಹುದ್ದೆಗಳಿದ್ದು, ಈ ಪೈಕಿ 260 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. 400ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವು ದರಿಂದ ಒಬ್ಬ ಆರ್‌ಟಿಓ, ಇನ್ಸ್‌ಪೆಕ್ಟರ್‌ 2-3 ಕಚೇರಿಗಳ ಉಸ್ತುವಾರಿ ನೋಡಿಕೊಳ್ಳಬೇಕಾದ ಪರಿಸ್ಥಿತಿಯಿದೆ ಎಂದರು.

ಇನ್ನೊಂದೆಡೆ 139 ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪೈಕಿ 100 ಹುದ್ದೆಗಳ ನೇಮಕಾತಿ ಆಗಿದೆ ಎಂಬ ಮಾಹಿತಿ ಇದೆಯಾದರೂ ಅಧಿಕೃತವಾಗಿ ಮಾಹಿತಿ ಬಂದಿಲ್ಲ.

ಈ ಎಲ್ಲ ಕಾರಣಗಳಿಂದ ಕಾನೂನು ತಿದ್ದುಪಡಿ ಮಾಡುವ ಬಗ್ಗೆ ಇನ್ನೊಂದು ತಿಂಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಾಡಿಗೆ ಮೂಲಕ ಆದಾಯ ಸಂಗ್ರಹ: ಸಾರಿಗೆ ನಿಗಮಗಳ ಆದಾಯ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ರಾಜ್ಯಾದ್ಯಂತ ಎಲ್ಲಾ ಬಸ್‌ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಿ ಮೇಲಿನ ಮಹಡಿಗಳನ್ನು ಬಾಡಿಗೆಗೆ ನೀಡುವ ಬಗ್ಗೆ ಈಗಾಗಲೇ ಯೋಚಿಸಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಖಾಸಗಿ ಕಟ್ಟಡಗಳಲ್ಲಿ ಬಾಡಿಗೆಗೆ ಇರುವ ಸರ್ಕಾರಿ ಕಚೇರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕಳುಹಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು. 

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರಿಗೆ ಸೆಸ್‌ ಸಂಗ್ರಹಿಸುವ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಆರೋಗ್ಯ, ಶಿಕ್ಷಣ ಸೆಸ್‌ ಸಂಗ್ರಹಿಸುವಂತೆ ಬಿಬಿಎಂಪಿ ಸೇರಿ ಮಹಾನಗರಗಳಲ್ಲಿ ಸಾರಿಗೆ ಸೆಸ್‌ ಸಂಗ್ರಹಿಸಿ ಇಲಾಖೆಗೆ ನೀಡಿದರೆ ಸಮೂಹ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಎಂಬ ಉದ್ದೇಶದಿಂದ ಮಾಧ್ಯಮಗಳ ಮೂಲಕ ಪ್ರಸ್ತಾಪಿಸಿದ್ದೇನೆ.ಇದುವರೆಗೂ ಪ್ರಸ್ತಾವನೆ ಸಿದ್ಧಪಡಿಸಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next