Advertisement

ಸಾರಿಗೆ ನಿಗಮಗಳ ವಿಲೀನ? ಸಂಸ್ಥೆಗಳ ನಷ್ಟ ಸರಿದೂಗಿಸಲು ಈ ಸೂತ್ರ: ಸಚಿವ ಶ್ರೀರಾಮುಲು

09:00 PM Oct 17, 2022 | Team Udayavani |

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಷ್ಟ ಸರಿದೂಗಿಸಿ ಸರಿದಾರಿಗೆ ತರಲು ನಾಲ್ಕು ನಿಗಮಗಳನ್ನು ವಿಲೀನಗೊಳಿಸುವುದಾಗಿ ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದ್ದರೂ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ. ನಷ್ಟ ತುಂಬಲು ಪರ್ಯಾಯ ಮಾರ್ಗಗಳನ್ನು ಇಲಾಖೆ ಕೈಗೆತ್ತಿಕೊಂಡಿದೆ ಎಂದೂ ಹೇಳಿದರು.

ಕೋವಿಡ್‌ ಕಾರಣದಿಂದ ನಾಲ್ಕು ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿವೆ. ಈ ನಷ್ಟ ಭರಿಸಲು ರಾಜ್ಯ ಸರ್ಕಾರ 6 ಸಾವಿರ ಕೋಟಿ ರೂ.ಗಳನ್ನು ನೀಡಿದೆ. ರಾಜ್ಯ ಸರ್ಕಾರದಿಂದ ನೆರವು ಪಡೆಯುವುದರ ಜೊತೆಗೆ ಸಂಸ್ಥೆ ಸ್ವಂತ ಕಾಲಮೇಲೆ ನಿಂತುಕೊಳ್ಳಬೇಕೆಂಬ ಉದ್ದೇಶದಿಂದ ಹಿರಿಯ ಅಧಿಕಾರಿ ಶ್ರೀನಿವಾಸ ಮೂರ್ತಿ ನೀಡಿರುವ ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ನಿಗಮಗಳಲ್ಲಿ ಆನೆಗಳಂತೆ ಭಾರವಾಗಿರುವ ಅಧಿಕಾರಿ ವೃಂದವನ್ನು ಕಡಿತಗೊಳಿಸಿ, ಕೆಳ ಹಂತದ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ನಾಲ್ಕು ನಿಗಮಗಳನ್ನು ಒಂದು ಮಾಡಿದರೆ ಶೇ.50ರಷ್ಟು ನಷ್ಟ ಕಡಿಮೆಯಾಗುತ್ತದೆ ಎಂದು ಹೇಳಿದರು.

ಹಳೇ ಬಸ್ಸುಗಳಿಗೆ ಮರುಜೀವ:
ಹೊಸದಾಗಿ ನಾಲ್ಕು ಸಾವಿರ ಬಸ್‌ಗಳನ್ನು ಖರೀದಿಸುವುದರ ಜೊತೆಗೆ ಹಳೆಯ ಬಸ್‌ಗಳಿಗೆ ಹೊಸ ಇಂಜಿನ್‌ ಮತ್ತು ಟೈರ್‌ಗಳನ್ನು ಅಳವಡಿಸಿ, ಅವುಗಳಿಗೆ ಮರುಜೀವ ತುಂಬಿ ರಸ್ತೆಗೆ ಬಿಡಲಾಗುವುದು ಎಂದು ತಿಳಿಸಿದರು. ಈಗಾಗಲೇ ನಾಲ್ಕು ನಿಗಮಗಳಲ್ಲಿ ಪ್ರಾಯೋಗಿಕವಾಗಿ ತಲಾ ಹತ್ತು ಬಸ್‌ಗಳನ್ನು ಕೈಗೆತ್ತಿಕೊಂಡು ಇಂತಹ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ಎಲ್ಲ ನಿಗಮಗಳಿಗೂ ಅಧ್ಯಕ್ಷರು, ಪ್ರಧಾನ ವ್ಯವಸ್ಥಾಪಕರು, ಮುಖ್ಯ ಇಂಜಿನಿಯರ್‌ ಎಂಬಂತೆ ಹಿರಿಯ ಅಧಿಕಾರಿಗಳ ತಂಡವೇ ಇದೆ. ಒಂದು ನಿಗಮ ಮಾಡಿದರೆ ಈ ಸಿಬ್ಬಂದಿ ಪ್ರಮಾಣ ಶೇ.25 ಕ್ಕೆ ಇಳಿಯಲಿದೆ ಎಂದರು.

Advertisement

ದೊಡ್ಡ ದೊಡ್ಡ ರೂಟ್‌ಗಳಲ್ಲಿ ಇಬ್ಬರು-ಮೂವರು ಪ್ರಯಾಣಿಕರಿದ್ದರೂ ಬಸ್‌ ಓಡಿಸಲಾಗುತ್ತಿದೆ. ಅದಕ್ಕೆ ಇತಿಶ್ರೀ ಹಾಡಿ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇದ್ದರೆ ಆ ಪ್ರಯಾಣಿಕರನ್ನು ಬೇರೆ ಬಸ್‌ಗೆ ವರ್ಗಾವಣೆ ಮಾಡಲಾಗುವುದು. ಇದರಿಂದ ನಿಗಮಗಳಿಗೆ ನಷ್ಟ ಕಡಿಮೆಯಾಗಲಿದೆ ಎಂದು ತಿಳಿಸಿದರು. 10 ರಿಂದ 12 ಲಕ್ಷ ಕಿ.ಮೀ ಸಂಚರಿಸಿರುವ ಬಸ್‌ಗಳನ್ನು ಬದಲಿಸಬೇಕಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next