Advertisement

ಪಾಸ್‌ ಬಾಕಿ ಪಾವತಿಗೆ ಸಾರಿಗೆ ಸಚಿವರ ಮನವಿ

12:57 AM Jun 19, 2019 | Team Udayavani |

ಬೆಂಗಳೂರು: ವಿದ್ಯಾರ್ಥಿಗಳ ರಿಯಾಯ್ತಿ ಬಸ್‌ ಪಾಸಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಸಾರಿಗೆ ನಿಗಮಗಳಿಗೆ 350 ಕೋಟಿ ರೂ. ಬರಬೇಕಾಗಿದ್ದು, ಕೂಡಲೇ ಬಿಡುಗಡೆ ಮಾಡುವಂತೆ ಸೂಚಿಸಬೇಕು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್‌ ಭಾಸ್ಕರ್‌ ಅವರಿಗೆ ಮನವಿ ಮಾಡಿದರು.

Advertisement

ವಿಧಾನಸೌಧದಲ್ಲಿ ಗುರುವಾರ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿಯಾದ ಸಚಿವರು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಾರಿಗೆ ನಿಗಮಗಳು ರಿಯಾಯ್ತಿ ದರದಲ್ಲಿ ಬಸ್‌ ಪಾಸ್‌ ವಿತರಣೆ ಮಾಡಿದೆ. ಇದಕ್ಕೆ ಪ್ರತಿಯಾಗಿ ರಿಯಾಯ್ತಿ ಮೊತ್ತ 350 ಕೋಟಿ ರೂ. ಸರ್ಕಾರದಿಂದ ಬರಬೇಕಾಗಿದೆ.

ಆದಷ್ಟು ಬೇಗ ಈ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ಜನಪ್ರತಿನಿಧಿಗಳು, ಪ್ರಯಾಣಿಕರಿಂದ ವಿವಿಧೆಡೆ ಬಸ್‌ ನಿಲ್ದಾಣ ಮತ್ತು ಡಿಪೋ ನಿರ್ಮಾಣಕ್ಕೆ ಬೇಡಿಕೆಗಳು ಬರುತ್ತಿವೆ. ಇದಕ್ಕಾಗಿ ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ. ಈ ಬಗ್ಗೆಯೂ ಆರ್ಥಿಕ ಇಲಾಖೆಗೆ ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ದೇವರಾಜ ಅರಸು ಟ್ರಕ್‌ ಟರ್ಮಿನಲ್‌ (ಡಿಡಿಯುಟಿಟಿಎಲ್‌)ನಲ್ಲಿ ಮೂಲಸೌಲಭ್ಯ ಕಲ್ಪಿಸುವ ಕುರಿತು ಚರ್ಚೆ ನಡೆಸಿದ ಸಚಿವ ತಮ್ಮಣ್ಣ, ಟರ್ಮಿನಲ್‌ ಅನ್ನು ಈಗಾಗಲೇ ಬಿಬಿಎಂಪಿ ವ್ಯಾಪ್ತಿಗೆ ಒಳಪಡಿಸಲಾಗಿದೆ. ಅದರಲ್ಲಿನ ಕಸ ವಿಲೇವಾರಿ, ಶೌಚಾಲಯ ನಿರ್ಮಾಣ, ಬೀದಿ ದೀಪ ಮತ್ತಿತರ ಸೌಲಭ್ಯ ಒದಗಿಸುವಂತೆ ಬಿಬಿಎಂಪಿಗೆ ಸೂಚಿಸಬೇಕು ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಹೇಳಿದರು.

ದಾಸನಪುರ ಟ್ರಕ್‌ ಟರ್ಮಿನಲ್‌ಗೆ ಸಂಬಂಧಿಸಿದಂತೆ ರಸ್ತೆ ಸಮಸ್ಯೆ ಇದ್ದು, 60 ಅಡಿ ವಿಸ್ತೀರ್ಣದಲ್ಲಿ ರಸ್ತೆ ನಿರ್ಮಿಸಬೇಕು. ಡಿಡಿಯುಟಿಟಿಎಲ್‌ ಯಶವಂತಪುರ ಆವರಣದ ಸುತ್ತ ಕಾಂಪೌಂಡ್‌ ನಿರ್ಮಾಣಕ್ಕೆ ಎರಡೂವರೆ ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಹೊಸಪೇಟೆ ಸೇರಿದಂತೆ ವಿವಿಧೆಡೆ ಪ್ರಗತಿಯಲ್ಲಿರುವ ಟ್ರಕ್‌ ಟರ್ಮಿನಲ್‌ಗ‌ಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next