Advertisement

ದೇಶ-ಭಾಷೆಗಳ ಎಲ್ಲೆ ವಿಸ್ತರಿಸುವ ಅನುವಾದ

01:45 AM Jul 09, 2017 | Harsha Rao |

ಅನುವಾದ ಎಂದರೆ….  ಥೇಮ್ಸ…, ನೈಲ…, ಅಮೆಝಾನ್‌ ನದಿಯ ನೀರುಗಳನ್ನು ನಮ್ಮ ಬೊಗಸೆಗೆ ದಕ್ಕಿದಷ್ಟು ತೆಗೆದುಕೊಂಡು ಬಂದು ಇಲ್ಲಿಯ ತುಂಗಾ, ಕಾವೇರಿ, ನೇತ್ರಾವತಿಗಳಲ್ಲಿ ಕಲಸುವುದು; ಅದೇ ರೀತಿ ನಮ್ಮ ನದಿಯ ನೀರುಗಳನ್ನು ತೆಗೆದುಕೊಂಡು ಹೋಗಿ ಮತ್ತೂಂದು ಸಂಸ್ಕೃತಿಯ ನದಿಗಳಲ್ಲಿ ಕಲಸುವುದು.

Advertisement

ನಮ್ಮ ಬಳ್ಳಾರಿ ಜಿÇÉೆಯಲ್ಲಿ ಒಂದು ವಿಶೇಷ ಪದ್ಧತಿಯಿದೆ. ಕಾಶಿಗೆ ಹೋಗಬೇಕೆಂದು ನಿರ್ಧರಿಸಿದವರು ಮೊದಲು ಹಂಪಿಯ ಪಂಪಾಪತಿಯ ದರ್ಶನಕ್ಕೆ ಹೋಗುತ್ತಾರೆ. ಒಂದು ತಿರುಗಣ ತಂಬಿಗೆಯಲ್ಲಿ (ರೈಲು ಚೆಂಬು) ತುಂಗಭಧಾÅ ನದಿಯ ನೀರನ್ನು ತುಂಬಿಸಿಕೊಂಡು ಬರುತ್ತಾರೆ. ಕಾಶಿಯ ಗಂಗಾ ನದಿಯಲ್ಲಿ ಈ ತಂಬಿಗೆಯಲ್ಲಿರುವ ತುಂಗೆಯ ನೀರನ್ನು ಕಲಸುತ್ತಾರೆ. ಅಲ್ಲಿಂದ ಬರುವಾಗ ಗಂಗಾ ನದಿಯ ನೀರನ್ನು ಅದೇ ತಂಬಿಗೆಯಲ್ಲಿ ತೆಗೆದುಕೊಂಡು ಬಂದು, ಮತ್ತೂಮ್ಮೆ ಪಂಪಾಪತಿಯ ದರ್ಶನ ಮಾಡಿ, ಆ ನೀರನ್ನು ತುಂಗೆಯಲ್ಲಿ ಕಲಸುತ್ತಾರೆ. ಅಲ್ಲಿಗೆ ಯಾತ್ರೆ ಸಂಪೂರ್ಣವಾಯೆ¤ಂದು ಭಾವಿಸುತ್ತಾರೆ. ಇದೊಂದು ಬಹಳ ಪುಣ್ಯದ ಕಾರ್ಯ ಎಂಬ ಭಾವನೆ ಅಲ್ಲಿದೆ. ಈ ಪದ್ಧತಿಗೆ ಒಂದು ಕಾರಣವನ್ನೂ ಕೊಡುತ್ತಾರೆ. “ತುಂಗಾ ಪಾನ, ಗಂಗಾ ಸ್ನಾನ’ ಎನ್ನುವ ಜನಪ್ರಿಯ ಗಾದೆಮಾತು ಇದೆಯಲ್ಲವೆ? ಕಾಶಿಯ ವಿಶ್ವೇಶ್ವರನಿಗೆ ತುಂಗೆಯ ಸಿಹಿನೀರು ಲಭ್ಯವಿಲ್ಲ. ಆದ್ದರಿಂದ ಅವನಿಗೆ ತುಂಗಾ ನೀರನ್ನು ಕುಡಿಯಲು ಕೊಟ್ಟು, ಹಂಪಿಯ ಪಂಪಾಪತಿಗೆ ಒಂದಿಷ್ಟು ಪುಣ್ಯ ದಕ್ಕಲಿ ಎಂದು ಗಂಗೆಯ ನೀರನ್ನು ಅರ್ಪಿಸಬೇಕಂತೆ! ಪಂಪಾಪತಿ ಮತ್ತು ವಿಶ್ವನಾಥರಿಬ್ಬರೂ ಗಂಗೆಯನ್ನು ಧರಿಸಿದ ಈಶ್ವರನೇ ಎಂಬ ಸತ್ಯ ಗೊತ್ತಿಲ್ಲದ ಜನರೇನೂ ಅವರಲ್ಲ.

ನನ್ನ ಪ್ರಕಾರ ಅನುವಾದವೂ ಇಂತಹದೇ ಒಂದು ಸಂಪ್ರದಾಯ. ಥೇಮ್ಸ…, ನೈಲ…, ಅಮೆಝಾನ್‌ ನದಿಯ ನೀರುಗಳನ್ನು ನಮ್ಮ ಬೊಗಸೆಗೆ ದಕ್ಕಿದಷ್ಟು ತೆಗೆದುಕೊಂಡು ಬಂದು ಇಲ್ಲಿಯ ತುಂಗಾ, ಕಾವೇರಿ, ನೇತ್ರಾವತಿಗಳಲ್ಲಿ ಕಲಸುವುದು. ಅದೇ ರೀತಿ ನಮ್ಮ ನದಿಯ ನೀರುಗಳನ್ನು ತೆಗೆದುಕೊಂಡು ಹೋಗಿ ಮತ್ತೂಂದು ಸಂಸ್ಕೃತಿಯ ನದಿಗಳಲ್ಲಿ ಕಲಸುವುದು. ಓದುಗರಿಗೆ ಬೇರೆಬೇರೆ ನದಿಯ ನೀರಿನ ರುಚಿಯನ್ನು ತೋರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ನಿಸ್ಸಂಶಯವಾಗಿ ಇದೊಂದು ಪುಣ್ಯಕಾರ್ಯ.

ಬಾಲ್ಯದಲ್ಲಿ ಬ್ರೂ ಇನ್ಸ$rಂಟ್‌ ಕಾಫಿ ಪುಡಿಯ ಒಂದು ಜಾಹೀರಾತು ಬಹು ಜನಪ್ರಿಯವಾಗಿತ್ತು. ಫಿಲ್ಟರ್‌ ಕಾಫಿಯ ರುಚಿಗೆ ಅತ್ಯಂತ ಸನಿಹವಾದದ್ದು ಎಂದು ಅವರು ತಮ್ಮ ಸರಕನ್ನು ಬಣ್ಣಿಸಿಕೊಳ್ಳುತ್ತಿದ್ದರು. ಫಿಲ್ಟರ್‌ ಕಾಫಿಯ ರುಚಿಗೆ ಸಮಾನವಾದದ್ದು ಎಂದೋ ಅಥವಾ ಅದಕ್ಕೂ ಹೆಚ್ಚಿನದು ಎಂದೋ ಹೇಳುವ ಭಂಡತನ ತೋರದೆ ಪ್ರಾಮಾಣಿಕವಾಗಿ ತಮ್ಮ ಸರಕಿನ ಪರಿಧಿಯನ್ನು ಹೇಳಿದ್ದರು. ಬಹುಶಃ ಈ ಮಾತು ಅನುವಾದಕ್ಕೂ ಒಪ್ಪುತ್ತದೆ. ಮೂಲದ ಸ್ವಾದ ನೀವು ಏನೇ ಮಾಡಿದರೂ ಅನುವಾದಕ್ಕೆ ದಕ್ಕುವುದಿಲ್ಲ. ಅದನ್ನು ನಿರೀಕ್ಷಿಸುವುದು ಸಾಧುವೂ ಅಲ್ಲ. ತಿರುಗಣ ತಂಬಿಗೆಯಷ್ಟು ನೀರನ್ನು ಒಯ್ದು ವಿಶ್ವನಾಥನಿಗೆ ತಲುಪಿಸಬಹುದೇ ಹೊರತು, ಇಡೀ ನದಿಯನ್ನೇ ಹೊತ್ತೂಯ್ದು ಕೊಡಲಾಗುವುದಿಲ್ಲ. ಇಲ್ಲಿ ಇನ್ನೂ ಒಂದು ಮಾತನ್ನು ಹೇಳಿಬಿಡುವುದು ಸೂಕ್ತವೆನ್ನಿಸುತ್ತದೆ. ಈ “ಸನಿಹದ ರುಚಿ’ ಎನ್ನುವುದು ಏನಿದ್ದರೂ ಗದ್ಯದ ಅನುವಾದಕ್ಕೆ ಅನ್ವಯಿಸುತ್ತದೆ. ಪದ್ಯದ ವಿಷಯಕ್ಕೆ ಬಂದಾಗ ಫಿಲ್ಟರ್‌ ಕಾಫಿಯು ಕಷಾಯವಾಗಿ ಮಾರ್ಪಟ್ಟಿರುವ ಸಾಧ್ಯತೆಗಳೇ ಹೆಚ್ಚು. ಇದಕ್ಕಂಜಿಯೇ ಮೂಲದ ರೂಪುರೇಷೆಗಳನ್ನು ಬಿಟ್ಟು, ಹೊಸದೇ ಮರುಸೃಷ್ಟಿ ಮಾಡುವ ಸಾಹಸಗಳೂ ನಮ್ಮ ಕಣ್ಣ ಮುಂದಿವೆ.

ಮೂರು ಬಗೆಯ ಅನುಭವಗಳು
ಒಂದು ಪುಸ್ತಕದ ಓದಿನ ಅನುಭವವು ಮೂರು ಬಗೆಯಲ್ಲಿ ದಕ್ಕುತ್ತದೆ. ಅದನ್ನೊಂದು ಉಪಮೆಯ ಮೂಲಕ ಹೇಳಬಹುದು. ಒಂದು ಸ್ಕೂಟರ್‌ ಅನ್ನು ತೆಗೆದುಕೊಳ್ಳಿ. ಸ್ಕೂಟರ್‌ ಓಡಿಸಲು ಬಲ್ಲವನು ಅದನ್ನು ಖರೀದಿಸಿ, ಓಡಿಸಿ, ತನಗೆ ಸ್ಕೂಟರ್‌ ಚೆನ್ನಾಗಿ ಗೊತ್ತು ಎಂದು ಹೇಳುವುದು ಒಂದು ಅನುಭವ. ಇದು ಸಾಮಾನ್ಯವಾಗಿ ಪುಸ್ತಕ ಓದುಗರ ಅನುಭವ ಎಂದು ಹೇಳಬಹುದು. ಆದರೆ ಒಬ್ಬ ಮೆಕ್ಯಾನಿಕ್ನನ್ನು ತೆಗೆದುಕೊಳ್ಳಿ. ಅವನು ಸ್ಕೂಟರ್‌ನ ಪ್ರತಿಯೊಂದು ಭಾಗವನ್ನೂ ಬಿಚ್ಚಿ, ಎಲ್ಲವನ್ನೂ ಎಣ್ಣೆಯಲ್ಲದ್ದಿ ಸ್ವತ್ಛಗೊಳಿಸಿ, ಅನಂತರ ಪುನಃ ಜೋಡಿಸಿ, ಅದನ್ನು ಓಡಿಸುವಾಗ ತನಗೆ ಸ್ಕೂಟರ್‌ ಚೆನ್ನಾಗಿ ಗೊತ್ತು ಎಂದು ಹೇಳುವ ಅನುಭವದ ಸಂಕೀರ್ಣತೆ ಬೇರೆಯದು. ಇದು ಅನುವಾದಕನ ಅನುಭವ ಎಂದು ಪರಿಗಣಿಸಬಹುದು. ಆದರೆ ಇನ್ನೂ ಒಂದು ಶ್ರೇಷ್ಠ ಅನುಭವವಿದೆ. ಸ್ಕೂಟರಿನ ಪ್ರತಿಯೊಂದು ಭಾಗವೂ ಯಾವ ರೂಪದಲ್ಲಿರಬೇಕು, ಯಾವ ಲೋಹ¨ªಾಗಿರಬೇಕು, ಅದರ ಶಕ್ತಿಯೇನಿರಬೇಕು ಎಂದು ಮೊದಲು ಧ್ಯಾನಿಸಬೇಕು.

Advertisement

ಅದಕ್ಕೆ ತಕ್ಕಂತೆಯೇ ಅದನ್ನು ರಚಿಸಿ, ಕಾರ್ಖಾನೆಯಲ್ಲಿ ಆ ಭಾಗಗಳನ್ನು ತಯಾರಿಸಬೇಕು. ಅನಂತರ ಆ ಎÇÉಾ ಭಾಗಗಳನ್ನು ಜೋಡಿಸಿ, ಮೊಟ್ಟ ಮೊದಲ ಬಾರಿಗೆ ಆ ಸ್ಕೂಟರನ್ನು ಓಡಿಸಬೇಕು. ಅಂತಹ ವ್ಯಕ್ತಿ ಸ್ಕೂಟರ್‌ ತನಗೆ ಚೆನ್ನಾಗಿ ಗೊತ್ತು ಎಂದು ಹೇಳುವಾಗ ಅದರ ಅರ್ಥವಿಸ್ತಾರವೇ ಬೇರೆ. ಅದು ಮೂಲ ಲೇಖಕನ ಅನುಭವವಾಗಿರುತ್ತದೆ.
ಪ್ರತಿಯೊಂದು ಕಾರ್ಯಕ್ಕೂ “ಸ್ವಾಮಿಕಾರ್ಯ’ ಮತ್ತು “ಸ್ವಕಾರ್ಯ’ ಎಂದಿರುತ್ತದಲ್ಲವೆ? ಅನುವಾದವೆನ್ನುವುದು ಪುಣ್ಯದ ಕೆಲಸ ಎಂದು ಹೇಳುವುದರ ಮೂಲಕ “ಸ್ವಾಮಿ ಕಾರ್ಯ’ದ ಉದ್ದೇಶವನ್ನು ಸಮರ್ಥಿಸಿಕೊಂಡಾಯ್ತು. ಆದರೆ “ಸ್ವಕಾರ್ಯ’ವೂ ಸಾಕಷ್ಟು ಇರುತ್ತದೆ. ಈವರೆಗೆ ಎರಡು ಪುಸ್ತಕಗಳನ್ನು ಅನುವಾದಿಸಿದ ಸೀಮಿತ ಅನುಭವ ನನ್ನದು. ಶ್ರೀರಮಣರ ತೆಲುಗು ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ ಮತ್ತು ಜಾನ್‌ ಕ್ರಾಕೌನರ್‌ ಎವರೆಸ್ಟ್‌ ಎನ್ನುವ ಪರ್ವತಾರೋಹಣದ ಕೃತಿಯನ್ನು ಕನ್ನಡಕ್ಕೆ ತಂದಿದ್ದೇನೆ. ಈ ಅನುಭವದ ಹಿನ್ನಲೆಯಲ್ಲಿ ಅನುವಾದಕರಿಗಾಗುವ ಮೂರು ಬಹುಮುಖ್ಯ ಲಾಭಗಳನ್ನು ಗುರುತಿಸಬÇÉೆ. ಸಾಕಷ್ಟು ವೈಯಕ್ತಿಕ ನೆಲೆಯಲ್ಲಿ ನಾನಿವನ್ನು ಕಂಡುಕೊಂಡಿದ್ದರೂ, ಬಹುತೇಕ ಅನುವಾದಕರಿಗೆ ಇವು ಸರಿ ಹೊಂದುತ್ತವೆ ಎನ್ನುವ ಊಹೆ ನನ್ನದು.

ಕ್ಲಾಸಿಕ್‌ ಪುಸ್ತಕಗಳಿಗೆ ಒಂದು ವಿಶೇಷ ಗುಣವಿರುತ್ತದೆ. ಒಂದೆರಡು ಓದಿಗೆ ಅವು ದಕ್ಕುವುದಿಲ್ಲ. ಮೂರು-ನಾಲ್ಕು ಬಾರಿ ಓದಿ ಸಂಪೂರ್ಣ ದಕ್ಕಿತು ಎಂದುಕೊಂಡರೂ ಅದು ಕೇವಲ ನಮ್ಮ ಓದಿನ ಅಹಂಕಾರವಾಗಿರುತ್ತದೆ. ಅಂತಹ ಪುಸ್ತಕವನ್ನು ಅನುವಾದಕ್ಕೆ ಎತ್ತಿಕೊಂಡಾಗಲೇ ನಮಗೆ ನಮ್ಮ ಸೀಮಿತ ಗ್ರಹಿಕೆಯ ಅನುಭವವಾಗುತ್ತದೆ. ನಮ್ಮ ಓದಿನ ಅಹಂಕಾರ ತಲೆಬಾಗಿಸಿ ಸೋಲನ್ನು ಒಪ್ಪಿಕೊಳ್ಳುತ್ತದೆ. ಯಾವುದೋ ವಾಕ್ಯ, ಮತ್ತೆ ಯಾವುದೋ ಪದ, ಸೂಕ್ಷ್ಮತೆಯ ಸನ್ನಿವೇಶ, ಜಾಣತನದ ಮಾತು- ನಮ್ಮ ಈ ಹಿಂದಿನ ಓದಿನಲ್ಲಿ ದಕ್ಕದ ಎಷ್ಟೆÇÉಾ ಸಂಗತಿಗಳು ಅನುವಾದಿಸುವಾಗ ಒಂದೊಂದಾಗಿ ಕಾಣಿಸುತ್ತ ಹೋಗುತ್ತವೆ. ಓದಿನ ಅಹಂಕಾರದ ಮರ್ಧನವೇ ಅನುವಾದಕರಿಗೆ ಆಗುವ ಅತ್ಯಂತ ದೊಡ್ಡ ಲಾಭವೆಂದು ನಾನು ಭಾವಿಸುತ್ತೇನೆ. ಆದರೆ ಅನುವಾದಕ್ಕೆ ಆಯ್ದುಕೊಳ್ಳುವ ಪುಸ್ತಕದ ಬಗ್ಗೆ ನಾವು ಜಾಗ್ರತೆ ವಹಿಸಬೇಕು. ಸಾಮಾನ್ಯ ಬರವಣಿಗೆಯ ಪುಸ್ತಕಗಳಿಗೆ ಈ ಶಕ್ತಿ ಇರುವುದಿಲ್ಲ. ಜಗಳವಾಡಿದರೂ ಗಂಧದ ಜೊತೆ ಗು¨ªಾಡಬೇಕು ಎನ್ನುತ್ತಾರಲ್ಲವೆ, ಹಾಗೆ ನಮ್ಮ ಆಯ್ಕೆ ಇರಬೇಕು.

ಮತ್ತೂಂದಂತೂ ಭಾಷೆಯ ಕಲಿಕೆಗೆ ಸಂಬಂಧಿಸಿದ್ದು. ಕನ್ನಡ ಮಾಧ್ಯಮದಲ್ಲಿ ಓದಿದ ನನಗೆ ಯಾವತ್ತೂ ನನ್ನ ಇಂಗ್ಲಿಷ್‌ ಭಾಷೆಯ ಪರಿಣತಿಯ ಬಗ್ಗೆ ಸಂಕೋಚ ಇದ್ದೇ ಇದೆ. ಅದು ಎಂದಿಗೂ ಮಾತೃಭಾಷೆಯಷ್ಟು ಸಶಕ್ತವಾಗಿರಲು ಸಾಧ್ಯವಿಲ್ಲ ಎನ್ನುವುದು ಗೊತ್ತು. ಆದರೆ, ಈ ಹೊತ್ತಿನಲ್ಲಿ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಚಲಾವಣೆಯಲ್ಲಿರುವ ಇಂಗ್ಲಿಷ್‌ ಭಾಷೆಯಲ್ಲಿ ಪ್ರಾವೀಣ್ಯವನ್ನು ಗಳಿಸುವ ಆಸೆಯಂತೂ ಇದ್ದೇ ಇದೆ. ಆ ಆಸೆಯನ್ನು ಪೂರೈಸಿಕೊಳ್ಳಲು ಅನುವಾದದ ಕೆಲಸ ಸಹಾಯ ಮಾಡುತ್ತದೆ. ಸಾವಿರಾರು ಪದಗಳ ಬಗ್ಗೆ, ನುಡಿಗಟ್ಟುಗಳ ಬಗ್ಗೆ, ವಾಕ್ಯ ರಚನೆಯ ಬಗ್ಗೆ ಮತ್ತೆ ಮತ್ತೆ ನಿಘಂಟಿನಲ್ಲಿಯೂ ಮತ್ತೂ ಅಂತರ್ಜಾಲದಲ್ಲಿಯೂ ನೋಡಿ ಅರ್ಥವನ್ನು ಅರಗಿಸಿಕೊಳ್ಳದೆ ಅನುವಾದವನ್ನು ತೃಪ್ತಿಕರವಾಗಿ ಮಾಡಲು ಸಾಧ್ಯವಿಲ್ಲ. ಒಂದು ದೊಡ್ಡ ಪುಸ್ತಕವನ್ನು ಅನುವಾದಿಸಿ ಮುಗಿಸಿದಾಗ ಖಂಡಿತವಾಗಿಯೂ ಎರಡೂ ಭಾಷೆಯ ಶಬ್ದಭಂಡಾರ ಮತ್ತು ಪ್ರಾವೀಣ್ಯತೆ ನಮ್ಮಲ್ಲಿ ಹೆಚ್ಚಾಗಿರುತ್ತದೆ. ಅನುವಾದವು ಸಾಕಷ್ಟು ಶ್ರಮವನ್ನು ಬೇಡುವಂತಹ ಕೆಲಸ. ಒಂದೆರಡು ಸಾವಿರ ಪದಗಳ ಸ್ವರಚಿತ ಕತೆಯನ್ನು ನಾನು ನಾಲ್ಕು ತಾಸಿನಲ್ಲಿ ಬರೆದು ಮುಗಿಸಬÇÉೆ. ಆದರೆ ಅಷ್ಟೇ ಗಾತ್ರದ ಇಂಗ್ಲಿಷ್‌ ಕತೆಯನ್ನು ಕನ್ನಡಕ್ಕೆ ಅನುವಾದಿಸಲು ಅದರ ಎರಡು ಮೂರು ಪಟ್ಟು ಹೆಚ್ಚಿನ ಸಮಯ ಬೇಕಾಗುತ್ತದೆ; ಸಮಯಕ್ಕಿಂತಲೂ ಹೆಚ್ಚಾಗಿ ಸಂಯಮವನ್ನು ಬೇಡುತ್ತದೆ.

ಇÇÉೊಂದು ಮಹತ್ವದ ಅಂಶವನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಅನುವಾದ ಮಾಡಲು ನಿಮಗೆ ಮೂಲಭಾಷೆಯಲ್ಲಿ ಅದ್ಭುತ ಪ್ರಾವೀಣ್ಯ ಇರಬೇಕಾದ ಆವಶ್ಯಕತೆಯೇನೂ ಇಲ್ಲ. ಸ್ವಲ್ಪಮಟ್ಟಿಗೆ ಗೊತ್ತಿದ್ದರೆ ಸಾಕು. ಅರ್ಥವಾಗದ ವಾಕ್ಯ, ಪದ, ಸನ್ನಿವೇಶಗಳನ್ನು ತಿಳಿದುಕೊಳ್ಳಲು ಮತ್ತೂಬ್ಬರ ಸಹಾಯವನ್ನೋ, ಅಂತರ್ಜಾಲದ ನೆರವನ್ನೋ ಪಡೆದುಕೊಳ್ಳಬಹುದು. ಆದರೆ ಅನುವಾದಗೊಳ್ಳುತ್ತಿರುವ ಭಾಷೆಯ ಮೇಲೆ ಪ್ರಭುತ್ವ ಇರಲೇಬೇಕಾಗುತ್ತದೆ. ಉದಾಹರಣೆಗೆ ನನಗೆ ತೆಲುಗು ಭಾಷೆ ತುಂಬಾ ಚೆನ್ನಾಗಿಯೇನೂ ಬರುವುದಿಲ್ಲ. ಆದ್ದರಿಂದ ಮಿಥುನ ಕೃತಿಯನ್ನು ಕನ್ನಡಕ್ಕೆ ಅನುವಾದಿಸುವಾಗ ಸಾಕಷ್ಟು ತೆಲುಗು ಜನರ ಸಹಾಯವನ್ನು ತೆಗೆದುಕೊಂಡಿದ್ದೇನೆ. ಆದರೆ, ಕನ್ನಡ ಭಾಷೆಯ ಮೇಲಿರುವ ಹಿಡಿತದ ಬಗ್ಗೆ ನನಗೆ ನಂಬಿಕೆ ಇದೆ. ಆ ಕಾರಣಕ್ಕಾಗಿಯೇ ಕನ್ನಡದ ಅನುವಾದದಲ್ಲಿ ಅಂತಹ ದೋಷಗಳೇನೂ ಓದುಗರಿಗೆ ಕಂಡು ಬರಲಿಲ್ಲ. ಆರೇಳು ಮುದ್ರಣಗಳನ್ನು ಕಂಡ ಈ ಕೃತಿ ಇನ್ನೂ ಓದುಗರ ಪ್ರೀತಿಯನ್ನು ಗಳಿಸುತ್ತಲೇ ಇದೆ.

ಅನುವಾದದ ಮತ್ತೂಂದು ಲಾಭವಂತೂ ಅತ್ಯಂತ ವೈಯಕ್ತಿಕವಾದುದು. ಆಗಾಗ ನಾನು ಮಾನಸಿಕ ಖನ್ನತೆಯಿಂದ ಬಳಲುತ್ತೇನೆ. ಆ ಸ್ಥಿತಿ ಮತ್ತೂಬ್ಬರಿಗೆ ತಿಳಿಸಿ ಹೇಳಲು ಸಾಧ್ಯವಾಗದಷ್ಟು ಸಂಕೀರ್ಣವಾದದ್ದು. ಈ ಹೊತ್ತಿನಲ್ಲಿ ಸೃಜನಶೀಲ ಬರವಣಿಗೆಗಿಂತಲೂ, ನಿಯಮಿತವಾಗಿ ದಿನನಿತ್ಯ ಏನಾದರೂ ಬರೆಯುವಂತಹ ಕೆಲಸವನ್ನು ಹಾಕಿಕೊಂಡರೆ ಹೆಚ್ಚು ಅನುಕೂಲವಾಗುತ್ತದೆ. ಅಂತಹ ಸಂಕಷ್ಟದ ದಿನಗಳಲ್ಲಿ ಅನುವಾದದ ಕೆಲಸ ನನ್ನ ಕೈಹಿಡಿದು ಕಾಪಾಡಿದೆ. ಖನ್ನತೆಯಿಂದ ಬಹುಬೇಗನೆ ಹೊರಬರಲು ಸಹಾಯ ಮಾಡಿದೆ. ಮನಸ್ಸಿಗೆ ನೋವು ನೀಡುವ ಸಂಗತಿಗಳನ್ನು ಹೊರಗಿಟ್ಟು, ಸಂಪೂರ್ಣವಾಗಿ ಪುಸ್ತಕದ ಮರುಸೃಷ್ಟಿಯಲ್ಲಿ ತೊಡಗಿಕೊಳ್ಳುವುದು ಅತ್ಯಂತ ಸೂಕ್ತ ವಿಚಾರವಾಗಿದೆ. ಮನಸ್ಸನ್ನು ತಿಳಿಯಾಗಿಸುವಲ್ಲಿ ಇದು ತುಂಬಾ ಸಹಾಯವನ್ನು ಮಾಡುತ್ತದೆ.

ಭಾಷೆಯ ಅನುವಾದ, ಸಂಸ್ಕೃತಿಯ ಅನುವಾದ
ಅನುವಾದದ ಸಮಯದಲ್ಲಿ ನಾವು ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲಿ ಬಹುಮುಖ್ಯವಾದದ್ದು ಸಂಸ್ಕೃತಿಯ ಅನುವಾದವೇ ಆಗಿದೆ. ಭಾಷೆಯ ಅನುವಾದವನ್ನು ಹೇಗೋ ಮಾಡಬಹುದು, ಸಂಸ್ಕೃತಿಯನ್ನು ಚುಟುಕಾಗಿ ಪರಿಚಯಿಸುವುದು ಸುಲಭದ ಸಂಗತಿಯಲ್ಲ. ಆ ಕಾರಣಕ್ಕಾಗಿಯೇ ನೆರೆಸೀಮೆಯ ತೆಲುಗು ಭಾಷೆಯ ಪುಸ್ತಕದ ಅನುವಾದ ಸುಲಭವಾಗಿಯೂ, ಸಮುದ್ರದಾಚೆಯೆ ಇಂಗ್ಲಿಷ್‌ ಭಾಷೆಯ ಅನುವಾದ ಸವಾಲಿನದಾಗಿಯೂ ನನಗೆ ಕಂಡಿವೆ. ಉದಾಹರಣೆಗೆ ನಾನು ಅನುವಾದಿಸಿದ ಪುಸ್ತಕದ ಮೂಲ ಹೆಸರು Into Thin Air ಎಂಬುದಾಗಿದೆ.

ಪರ್ವಾತಾರೋಹಣದಲ್ಲಿ ಸಮುದ್ರಮಟ್ಟಕ್ಕಿಂತಲೂ ಸುಮಾರು 4000 ಮೀ. ಎತ್ತರಕ್ಕೆ ಹೋದಾಗ, ಹವಾಮಾನದಲ್ಲಿನ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ. ಅಂತಹ ಗಾಳಿಯನ್ನು Thin Air ಎಂದು ಕರೆಯುತ್ತಾರೆ. 

ಕನ್ನಡದಲ್ಲಿ ಈ ಪದವಿರಲು ಸಾಧ್ಯವೇ ಇಲ್ಲ. ಯಾಕೆಂದರೆ ಇಡೀ ಕರ್ನಾಟಕದಲ್ಲಿ, ಅಷ್ಟೇ ಏಕೆ, ಇಡೀ ದಕ್ಷಿಣ ಭಾರತದಲ್ಲಿಯೇ ಅಷ್ಟೊಂದು ಎತ್ತರದ ಪರ್ವತಗಳಿಲ್ಲ. ಕೇವಲ ಹಿಮಾಲಯ ಪರ್ವತಗಳು ಮಾತ್ರ ಅಷ್ಟು ಎತ್ತರ ಇವೆ. ಆ ಕಾರಣಕ್ಕಾಗಿ ಹಿಮಾಲಯ ಪರ್ವತಗಳ ಸುತ್ತಮುತ್ತ ಬಳಕೆಯಲ್ಲಿರುವ ಭಾಷೆಗಳಲ್ಲಿ ಮಾತ್ರ ಇದಕ್ಕೆ ಸಮಾನಾರ್ಥಕವಾದ ಪದಗಳಿರುತ್ತವೆ. ನೇಪಾಲಿ, ಶೆರ್ಪಾ, ಟಿಬೇಟಿಯನ್‌ ಭಾಷೆಗಳಲ್ಲಿ ಖಂಡಿತವಾಗಿಯೂ  Thin Air ಗೆ ಸಮಾನಾರ್ಥಕ ಪದಗಳಿವೆ. ಹಾಗೆ ನೋಡಿದರೆ ಗ್ರೇಟ್‌ ಬ್ರಿಟನ್ನಲ್ಲಿಯೂ ಅಷ್ಟೊಂದು ಎತ್ತರದ ಪರ್ವತಗಳಿಲ್ಲ. ಆದರೆ ಒಂದು ಕಾಲದಲ್ಲಿ ಇಡೀ ಪ್ರಪಂಚವನ್ನೇ ವಸಾಹತುಶಾಹಿಯಾಗಿಸಿಕೊಂಡಿದ್ದ ಇಂಗ್ಲಿಷಿನ ಜನ, ನಿಧಾನವಾಗಿ ಹೊಸ ಪದಗಳನ್ನು ತಮ್ಮ ಭಾಷೆಗೆ ಸೇರಿಸಿಕೊಂಡಿ¨ªಾರೆ. ಆದ್ದರಿಂದ ಆ ಭಾಷೆ ಅತ್ಯಂತ ಹೆಚ್ಚು ಪದಗಳನ್ನು ಹೊಂದಿದೆ. ಕನ್ನಡದ ಈ ಸಮಸ್ಯೆಗಳಿಗೆ ನಮ್ಮದೇ ಆದ ಉಪಾಯಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಕನ್ನಡದಲ್ಲಿ ಹೊಸಪದಗಳನ್ನು ಟಂಕಿಸುವ ಜವಾಬ್ದಾರಿ ಅನುವಾದಕರ ಮೇಲಿರುತ್ತದೆ. ಇದಕ್ಕೆ “ತೆಳುಗಾಳಿ’ ಎಂದೋ, “ಸಪೂರಹವಾ’ ಎಂದೋ ಮಾಡಿಕೊಳ್ಳಬೇಕಾಗುತ್ತದೆ. ಅಡಿಟಿಪ್ಪಣಿಯ ಮೂಲಕ ಸನ್ನಿವೇಶವನ್ನು ವಾಚ್ಯವಾಗಿಯೇ ವಿವರಿಸಬೇಕಾಗುತ್ತದೆ.

ಹೊಸ ಪದದ ಸೃಷ್ಟಿಯ ಮೂಲಕ ಸಂದರ್ಭವನ್ನು ಹೇಗೋ ನಿಭಾಯಿಸಬಹುದಾದರೂ, ಮೂಲ ಕೃತಿಯಲ್ಲಿ ರಚಿಸಿದ ಶ್ಲೇಷೆಗಳನ್ನು (ಪನ್‌) ಕನ್ನಡಕ್ಕೆ ತರುವುದು ಸಾಧ್ಯವೇ ಇಲ್ಲ. ಮೇಲಿನ ಉದಾಹರಣೆಯನ್ನೇ ತೆಗೆದುಕೊಳ್ಳಿ. Into Thin Air ಎನ್ನುವ ಪದ ಎರಡು ಅರ್ಥಗಳನ್ನು ಕೊಡುತ್ತದೆ. ಸಾಮಾನ್ಯವಾಗಿ ಯಾರಾದರೂ ಅದೃಶ್ಯವಾಗುವುದನ್ನೋ ಅಥವಾ ಕಣ್ಮರೆಯಾಗುವುದನ್ನೋ He/She vanished into thin air ಎಂದು ಹೇಳುತ್ತಾರೆ. ಅದರ ಜೊತೆಯಲ್ಲಿ “ತೆಳುಗಾಳಿ’ ಎನ್ನುವ ಅರ್ಥವೂ Thin Airಗೆ ಇದೆ. 1996ರಲ್ಲಿ ನಡೆದ ಮೌಂಟ್‌ ಎವರೆಸ್ಟ್‌ ಪರ್ವತಾರೋಹಣದಲ್ಲಿ ಪರ್ವತದ ತುದಿಯಲ್ಲಿನ ತೆಳುಗಾಳಿಯ ಹೊಡೆತಕ್ಕೆ ಸಾಕಷ್ಟು ಜನರು ಸತ್ತುಹೋದ ವಿಷಯವನ್ನು ಕುರಿತ ಪುಸ್ತಕವಿದಾದ್ದರಿಂದ, ಈ ಎರಡೂ ಅರ್ಥಗಳು ಹೊಮ್ಮುವಂತೆ ಲೇಖಕ ಜಾನ್‌ ಕ್ರಾಕೌರ್‌ ಅತ್ಯಂತ ಜಾಣತನದಿಂದ ಈ ಪದವನ್ನು ಪುಸ್ತಕದ ಶೀರ್ಷಿಕೆಯಾಗಿ ಬಳಸಿ¨ªಾನೆ. ಆದರೆ ಈ ಶ್ಲೇಷೆಯನ್ನು ಕನ್ನಡಕ್ಕೆ ತರುವುದು ಹೇಗೆ? ನನಗೆ ಸಾಧ್ಯವಾಗಲಿಲ್ಲ. ಆದ್ದರಿಂದಲೇ ನಾನು, “ಎವರೆಸ್ಟ್‌’ ಎನ್ನುವ ಸಪಾಟಾದ ಹೆಸರನ್ನು ಆಯ್ದುಕೊಂಡೆ. ಆಗಲೇ ಹೇಳಿದೆನಲ್ಲವೆ, ಅನುವಾದವೆಂದರೆ “ಫಿಲ್ಟರ್‌ ಕಾಫಿಯ ರುಚಿಗೆ ಅತ್ಯಂತ ಸನಿಹವಾದದ್ದು…’ ಅಂತ!

ಅಂಕಿತನಾಮಗಳ ಉಚ್ಚಾರ
ಅಂಕಿತನಾಮಗಳನ್ನು ಹೇಗೆ ಉಚ್ಚರಿಸಬೇಕು ಎನ್ನುವುದು ಮತ್ತೂಂದು ದೊಡ್ಡ ಸವಾಲು. ಬರವಣಿಗೆ ಮತ್ತು ಉಚ್ಚಾರಣೆಗೆ ವ್ಯತ್ಯಾಸವಾಗದಂತೆ ತಳುಕು ಹಾಕಿಕೊಂಡ ಕನ್ನಡ ಲಿಪಿ ಶ್ರೀಮಂತವಾದದ್ದು. ಆದರೆ ಕೇವಲ 26 ಅಕ್ಷರಗಳಲ್ಲಿಯೇ ಜಗತ್ತಿನ ಉಚ್ಚಾರಣೆಗಳನ್ನೆಲ್ಲ ಹಿಡಿಯಲು ಪ್ರಯತ್ನಿಸುವ ಇಂಗ್ಲಿಷ್‌ ಭಾಷೆಗೆ ಈ ವೈಭವವಿಲ್ಲ. ಆದ್ದರಿಂದಲೇ ಅವರು ಬರೆಯುವುದೇ ಒಂದು, ಓದುವುದು ಮತ್ತೂಂದು. ಅನುವಾದಕರಿಗೆ ಇದು ಬಹುದೊಡ್ಡ ಸವಾಲಾಗುತ್ತದೆ. ಆದರೆ, ಈ ದಿನಗಳಲ್ಲಿ ಇದಕ್ಕೆ ಸುಲಭದ ಪರಿಹಾರಗಳಿವೆ. ಅಂತರ್ಜಾಲದಲ್ಲಿ ಎÇÉಾ ಸಂಸ್ಕೃತಿಯ ಅಂಕಿತನಾಮಗಳನ್ನು ಹೇಗೆ ಉಚ್ಚರಿಸಬೇಕು ಎನ್ನುವ ಮಾಹಿತಿ ದೊರಕುತ್ತದೆ. ಅದನ್ನು ಬಳಸಿಕೊಂಡು ಸರಿಯಾದ ಉಚ್ಚಾರಣೆಯಲ್ಲಿ ಪದಗಳನ್ನು ಬರೆಯಬೇಕಾಗುತ್ತದೆ. ನಮಗೆ ಪರಿಚಯವೇ ಇಲ್ಲದ ಸಂಸ್ಕೃತಿಯ ಅಂಕಿತನಾಮಗಳನ್ನು ಹೇಗೆ ಬರೆದರೂ ವ್ಯತ್ಯಾಸವಾಗುವುದಿಲ್ಲ ಎನ್ನುವ ವಾದವಿದೆ. ಆದರೆ ಸುಲಭದಲ್ಲಿ ಅಂತರ್ಜಾಲದಲ್ಲಿ ಮಾಹಿತಿ ಸಿಗುತ್ತಿರುವ ಈ ಕಾಲಘಟ್ಟದಲ್ಲಿ ಈ ವಾದ ಸ್ವಲ್ಪ ಮೊಂಡುತನ¨ªಾಗಿ ಕಾಣುತ್ತದೆ. ಜಗತ್ತಿನೆÇÉೆಡೆ ಕನ್ನಡಿಗರು ವಲಸೆ ಹೋಗಿ ನೆಲೆಸುತ್ತಿ¨ªಾರೆ. ಅಂತಹ ಹೊತ್ತಿನಲ್ಲಿ ಕನ್ನಡದ ಪುಸ್ತಕಗಳಲ್ಲಿ ಸರಿಯಾದ ಕ್ರಮದಲ್ಲಿಯೇ ಉಚ್ಚಾರಣೆಯನ್ನು ಓದಿಕೊಂಡಿದ್ದರೆ ಅವರಿಗೆ ಅನುಕೂಲವಾಗುತ್ತದೆ. ಅನಾವಶ್ಯಕ ಮುಜುಗರಗಳು ತಪ್ಪುತ್ತವೆ.

ಅಳತೆಗಳನ್ನು ಯಾವ ಪ್ರಮಾಣಗಳಲ್ಲಿ ಹೇಳಬೇಕು ಎನ್ನುವುದು ಸಂಸ್ಕೃತಿಗೆ ಸಂಬಂಧಿಸಿದ ವಿಷಯ. ಉದಾಹರಣೆಗೆ ಭಾರತದಲ್ಲಿ ಬೆಟ್ಟಗಳನ್ನು ಅಡಿಗಳ ಪ್ರಮಾಣದಲ್ಲಿ ಹೇಳಿದರೆ, ಅಮೆರಿಕನ್ನರು ಮೀಟರ್‌ಗಳ ಲೆಕ್ಕದಲ್ಲಿ ಹೇಳುತ್ತಾರೆ. ನಾವು ದಾರಿಯ ಉದ್ದವನ್ನು ಕಿ.ಮೀ.ಗಳಲ್ಲಿ ಹೇಳಿದರೆ, ಅವರು ಮೈಲುಗಳಲ್ಲಿ ಹೇಳುತ್ತಾರೆ. ವಾತಾವರಣದ ಉಷ್ಣಾಂಶವನ್ನು ನಾವು ಸೆಂಟಿಗ್ರೇಡ್‌ನ‌ಲ್ಲಿ ಹೇಳಿದರೆ, ಅವರು ಫ್ಯಾರನ್‌ಹೀಟ್‌ನಲ್ಲಿ ಹೇಳುತ್ತಾರೆ. ಈ ಎÇÉಾ ಮಾಪನಗಳನ್ನೂ ಕನ್ನಡ ಸಂಸ್ಕೃತಿಗೆ ಅನುವಾದಿಸುವುದು ಅನುವಾದಕನ ಜವಾಬ್ದಾರಿಯಾಗಿರುತ್ತದೆ. ಪ್ರಮಾಣಗಳನ್ನು ಬದಲಾಯಿಸಿಕೊಳ್ಳುವ ಸೂತ್ರಗಳು ಮತ್ತು ಲೆಕ್ಕಾಚಾರ ಅನುವಾದಕನಿಗೆ ಗೊತ್ತಿರಬೇಕು. ಇಲ್ಲದಿದ್ದರೆ ಕನ್ನಡದ ಓದುಗರಿಗೆ ಪ್ರಮಾಣದ ಗಾತ್ರದ ಕಲ್ಪನೆಯೇ ಮೂಡದೆ ಕಿರಿಕಿರಿಯಾಗುತ್ತದೆ.

ಕತೆ, ಪ್ರಬಂಧ ಮತ್ತು ಕಾದಂಬರಿಗಳನ್ನು ನಾನು ಈಗಾಗಲೇ ಬರೆದಿದ್ದೇನೆ. ಆದರೆ ಅನುವಾದವನ್ನು ಮಾಡಬೇಕೆನ್ನುವ ಹಟವೇಕೆ? ಎನ್ನುವ ಪ್ರಶ್ನೆಗೆ ಉತ್ತರ ಅತ್ಯಂತ ಸುಲಭ¨ªಾಗಿದೆ. ನಮ್ಮ ಹಿರಿಯರೆÇÉಾ ಅನುವಾದವನ್ನೋ, ಮರುಸೃಷ್ಟಿಯನ್ನೋ ಮಾಡಿ¨ªಾರೆ. ಪಂಪ, ಕುಮಾರವ್ಯಾಸ, ಕುವೆಂಪು, ಕಾರಂತ, ಮಾಸ್ತಿ – ಎಲ್ಲರೂ ಸಾಕಷ್ಟು ಅನುವಾದವನ್ನು ಮಾಡಿ¨ªಾರೆ. ಅವರು ಹಾಕಿಕೊಟ್ಟ ದಾರಿಯಲ್ಲಿಯೇ ನಡೆಯುವ ನಾನೂ ಆಗೊಮ್ಮೆ ಈಗೊಮ್ಮೆ ಅನುವಾದದ ಕೆಲಸವನ್ನು ಸಂಭ್ರಮದಿಂದ ಮಾಡುತ್ತೇನೆ.

– ವಸುಧೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next