ಭಾಲ್ಕಿ: ಶಿವಾನುಭವಗೋಷ್ಠಿ, ಶರಣ ಸಂಗಮ ಸೇರಿದಂತೆ ವಿವಿಧ ಸತ್ಸಂಗಗಳಲ್ಲಿ ಭಾಗಿಯಾಗುವುದರಿಂದ ಮನುಷ್ಯನ ಮನಸ್ಸು ಪರಿವರ್ತನೆಯಾಗಿ ಸನ್ಮಾರ್ಗದಲ್ಲಿ ತೊಡಗುವರು ಎಂದು ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ನಡೆದ 451ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಬಬ್ಬಿ ಬಾಚಯ್ಯನವರ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬಬ್ಬಿ ಬಾಚಯ್ಯನವರು 12ನೇ ಶತಮಾನದ ಶರಣರಾಗಿದ್ದರು. ಬಾಚಯ್ಯನವರ 102 ವಚನಗಳು ಇದುವರೆಗೆ ಲಭ್ಯವಾಗಿವೆ. ಕಲ್ಯಾಣದ ಸುತ್ತಮುತ್ತ ನಡೆದ ಸಭೆ-ಸಮಾರಂಭಗಳಿಗೆ ಹೋಗಿ, ಅಲ್ಲಿ ಹೆಚ್ಚಾಗಿರುವ ಪ್ರಸಾದ ತೆಗೆದುಕೊಂಡು ಬಡವರಿಗೆ ವಿತರಿಸು ತ್ತಿದ್ದರು. ಸತ್ಸಂಗದಿಂದ ಮನುಷ್ಯ ಪರಿವರ್ತನೆಯಾಗುತ್ತಾನೆ ಎಂದರು.
ಶ್ರೀ ನಿರಂಜನ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶಿಷ್ಟ ಸ್ಥಾನವಿದೆ. ವಿಶೇಷವಾಗಿ ಹೋಳಿಹಬ್ಬ ದುರ್ಗುಣ, ದುಶ್ಚಟಗಳ ದಹಿಸುವ ಮೂಲಕ ಆಚರಿಸುತ್ತೇವೆ. ಮನುಷ್ಯನಲ್ಲಿರುವ ಕಾಮ ದಹಿಸಿದರೆ ಮನುಷ್ಯ ಸುಖೀಯಾಗುತ್ತಾನೆ. ಅದಕ್ಕಾಗಿ ಹಿರಿಯರು ಕಾಮ ದಹನ ಸಂಕೇತವಾಗಿ ಹೋಳಿಹಬ್ಬ ಆಚರಿಸುತ್ತ ಬಂದಿದ್ದಾರೆ. ಕಾಮ ದಹನದ ನಂತರ ಜೀವನದಲ್ಲಿ ಹೊಸ ಉತ್ಸಾಹ, ಚೈತನ್ಯ ಸಂಚರಿಸುತ್ತದೆ. ಅದಕ್ಕಾಗಿ ಬಣ್ಣ ಹಚ್ಚುವ ಮೂಲಕ ಆನಂದ ಹೆಚ್ಚಿಸುತ್ತೇವೆ ಎಂದರು.
ಬೆಳಗಾವಿಯ ಶ್ರೀ ಮಹಾದೇವ ಕುಂಬಾರ ಅನುಭಾವ ನೀಡಿದರು. ಗೀತಾ ಮೇತ್ರೆ ಬಸವ ಗುರುಪೂಜೆ ನೆರವೇರಿಸಿದರು. ಮಠದ ಪ್ರಸಾದ ನಿಲಯದ ಮಕ್ಕಳಿಂದ ವಚನ ಪ್ರಾರ್ಥನೆ ನಡೆಯಿತು. ರಾಜು ಜುಬರೆ ನಿರೂಪಿಸಿದರು.