Advertisement

ವಿದ್ಯುತ್‌ ಸಂಪರ್ಕಕ್ಕಾಗಿ ಸವಿಕಿರಣ ಸೇವೆ

01:00 PM Feb 08, 2018 | Team Udayavani |

ಬೆಂಗಳೂರು: ವಿದ್ಯುತ್‌ ಸಂಪರ್ಕ ಪಡೆಯಲು ಇನ್ನು ಮುಂದೆ ಕಚೇರಿಗಳಿಗೆ ಅಲೆಯಬೇಕಿಲ್ಲ, ಮಧ್ಯವರ್ತಿಗಳಿಗೆ ಹಣ ನೀಡಬೇಕಿಲ್ಲ, ಮನೆಯಲ್ಲಿಯೇ ಕುಳಿತು ಆನ್‌ಲೈನ್‌ನಲ್ಲಿ ಬೆಸ್ಕಾಂಗೆ ಅರ್ಜಿ ಸಲ್ಲಿಸಿದ 24 ಗಂಟೆಗಳಲ್ಲಿ ಸಂಪರ್ಕ ಪಡೆಯಬಹುದು.

Advertisement

ಹೌದು, ಗ್ರಾಹಕರಿಗೆ ವೇಗವಾಗಿ ಸೇವೆಗಳನ್ನು ಒದಗಿಸುವ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರಲು ಬೆಸ್ಕಾಂ, ಜನರಿಗೆ ಆನ್‌ಲೈನ್‌ ಮೂಲಕವೇ ಹಲವು ಸೇವೆಗಳನ್ನು ನೀಡಲು “ಸವಿ ಕಿರಣ’ (ಫಾಸ್ಟ್‌ಟ್ರ್ಯಾಕ್‌) ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಿದ್ದು, ಬುಧವಾರ ಬೆಂಗಳೂರಿನಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದ ಎಸ್ಕಾಂ ಕಂಪೆನಿಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು, ರಾಜ್ಯದ ಶೇ.50ರಷ್ಟು ಭಾಗಕ್ಕೆ ಬೆಸ್ಕಾಂ ವಿದ್ಯುತ್‌ ನೀಡುತ್ತಿದೆ. ಆ ಹಿನ್ನೆಲೆಯಲ್ಲಿ ಬೆಸ್ಕಾಂ ಗ್ರಾಹಕರಿಗೆ ಶೀಘ್ರ ಹಾಗೂ ಸುಲಭವಾಗಿ ವಿದ್ಯುತ್‌ ಸಂಪರ್ಕ ದೊರೆಯಲು ಸವಿ ಕಿರಣ ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಬೆಸ್ಕಾಂನ ಎಲ್ಲ 48 ಉಪವಿಭಾಗಗಳಲ್ಲಿ ಬುಧವಾರದಿಂದಲೇ ಸವಿ ಕಿರಣ ವ್ಯವಸ್ಥೆ ಜಾರಿಗೊಂಡಿದ್ದು, ಇದರಿಂದ 5ಲಕ್ಷ ಗ್ರಾಹಕರಿಗೆ ಅನುಕೂಲವಾಗಲಿದೆ. ಅರ್ಜಿ ಸಲ್ಲಿಸಿದ 24 ಗಂಟೆಯಗಳಲ್ಲಿ 7.5 ಕಿಲೋ ವ್ಯಾಟ್‌ವರೆಗಿನ ಗೃಹ ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ವಿದ್ಯುತ್‌ ಸಂಪರ್ಕ ನೀಡಲಾಗುವುದು. ಆದರೆ, ಗ್ರಾಹಕರು ಆನ್‌ಲೈನ್‌ ಮೂಲಕ ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ಅರ್ಜಿ ಸಲ್ಲಿಸಿ, ವಿದ್ಯುತ್‌ ಪ್ರಮಾಣಕ್ಕೆ ನಿಗದಿಪಡಿದಷ್ಟು ಶುಲ್ಕ ಪಾವತಿಸಬೇಕು. ಆನಂತರದಲ್ಲಿ ಬೆಸ್ಕಾಂ ಸಿಬ್ಬಂದಿಯೇ ಮೀಟರ್‌ ಹಾಗೂ ಕಿಟ್‌ನೊಂದಿಗೆ ಬಂದು ವಿದ್ಯುತ್‌ ಸಂಪರ್ಕ ನೀಡಲಿದ್ದಾರೆ ಎಂದರು. ಈ ವೇಳೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಇತರರು ಇದ್ದರು.

ಬೆಸಾಂನಿಂದ ಚಾರ್ಜಿಂಗ್‌ ಸೆಷನ್‌
ಬೆಂಗಳೂರು: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬಳಕೆಯನ್ನು ಉತ್ತೇಜಿಸಲು 11 ಕಡೆಗಳಲ್ಲಿ “ಎಲೆಕ್ಟ್ರಿಕ್‌ ವೆಹಿಕಲ್‌ ಚಾರ್ಜಿಂಗ್‌ ಸ್ಟೇಷನ್‌’ ನಿರ್ಮಿಸಲು ಬೆಸ್ಕಾಂ ಮುಂದಾಗಿದ್ದು, ಫೆ.15ರಂದು ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಮೊದಲ ಸ್ಟೇಷನ್‌ಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಚಾಲನೆ ನೀಡಲಿದ್ದಾರೆ. 

Advertisement

ರಾಜ್ಯ ಸರ್ಕಾರದ ವತಿಯಿಂದ ಎಲೆಕ್ಟ್ರಿಕ್‌ ವಾಹನ ನಿಯಮ ಜಾರಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಅನುಕೂಲವಾಗುವಂತೆ ಸ್ಟೇಷನ್‌ಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿಯೊಂದು ಸ್ಟೇಷನ್‌ನಲ್ಲಿ ಶೀಘ್ರ ಚಾರ್ಜ್‌ ಮಾಡುವ ಡಿಸಿ ಹಾಗೂ ಹೆಚ್ಚು ಸಮಯ ತೆಗೆದುಕೊಳ್ಳುವ ಎಸಿ ಚಾರ್ಜಿಂಗ್‌ ಪಾಯಿಂಟ್‌ಗಳನ್ನು ನಿರ್ಮಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಎಲೆಕ್ಟ್ರಿಕ್‌ ಬೈಕ್‌ ಹಾಗೂ ಕಾರುಗಳ ಬಳಕೆ ಹೆಚ್ಚುತ್ತಿದ್ದು, ನಗರದ ಪ್ರಮುಖ 11 ಪ್ರಮುಖ ಭಾಗಗಳಲ್ಲಿ ಚಾರ್ಜಿಂಗ್‌ ಸ್ಟೇಷನ್‌ ನಿರ್ಮಿಸುವ ಮೂಲಕ ವಾಹನಗಳಿಗೆ ಅನುಕೂಲ ಮಾಡಿಕೊಡಲು ಬೆಸ್ಕಾಂ ಮುಂದಾಗಿದೆ.

ಈಗಾಗಲೇ ನಗರದ ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಒಂದು ಸ್ಟೇಷನ್‌ ಸಿದ್ಧವಾಗಿದ್ದು, 420 ವೋಟ್ಸ್‌ ಸಾಮರ್ಥಯದ ಸ್ಟೆಷನ್‌ನಲ್ಲಿ ದಿನಕ್ಕೆ 100 ವಾಹನಗಳ ಚಾರ್ಚ್‌ ಮಾಡಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ ಪಾಯಿಂಟ್‌ನಲ್ಲಿ ಸಾರ್ವಜನಿಕರಿಗೆ ವಿಧಿಸಬೇಕಾದ ದರವನ್ನು ನಿಗದಿಪಡಿಸುವಂತೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗವನ್ನು ಕೋರಲಾಗಿದೆ.
 ಡಿ.ಕೆ.ಶಿವಕುಮಾರ್‌, ಇಂಧನ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next