Advertisement

ದಂಡ ವಸೂಲಿಗಿಂತ ರಹದಾರಿ ರದ್ದು ಪಡಿಸಿ

12:57 PM Apr 07, 2017 | Team Udayavani |

ದಾವಣಗೆರೆ: ಕೆಎಸ್‌ಆರ್‌ಟಿಸಿ ಸರ್ಕಾರದ ಒಂದು ಅಂಗವಾಗಿದ್ದು, ರಾಜ್ಯದಲ್ಲಿ ಇನ್ನೂ 20 ಸಾವಿರ ಬಸ್‌ಗಳನ್ನು ಸಂಚಾರಕ್ಕೆ ಬಿಡುವ ಮತ್ತು 40 ಸಾವಿರ ಜನರಿಗೆ ಉದ್ಯೋಗಾವಕಾಶ ನೀಡುವ  ಉದ್ದೇಶ ಸರ್ಕಾರಕ್ಕಿದೆ ಎಂದುರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ  ಗೋಪಾಲ್‌ ಪೂಜಾರಿ ಹೇಳಿದ್ದಾರೆ. 

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸಾರಿಗೆ ನಿಗಮದಲ್ಲಿ 1 ಲಕ್ಷದ 25 ಸಾವಿರ ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿಗಮದಿಂದ ರಾಜ್ಯದ ಎಲ್ಲಾ ಹಳ್ಳಿಗಳಿಗೆ ಬಸ್‌ ಸೇವೆ ಒದಗಿಸುವ ಉದ್ದೇಶವಿದೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮತ್ತು ಕೆಎಸ್‌ಆರ್‌ಟಿಸಿ ಸಮನ್ವಯದಿಂದ ಕೆಲಸ ಮಾಡಬೇಕು.

ಹಳ್ಳಿ ಹಳ್ಳಿಗೆ ಕೆಎಸ್‌ಆರ್‌ಟಿಸಿ ಸೇವೆ ಅವಶ್ಯಕತೆ ಇದ್ದು, ಆರ್‌ಟಿಓ ಸಹಕಾರ ಅತಿ ಮುಖ್ಯವಾಗಿದೆ ಎಂದರು. ಅನಧಿಕೃತ ಪರವಾನಗಿ ವಿರುದ್ಧ ದಂಡ ವಸೂಲಿ ಮುಖ್ಯವಲ್ಲ. ಬದಲಾಗಿ ಅಂತಹವರಿಗೆ ಮೂರು ನೋಟಿಸ್‌ ನೀಡಿ ರಹದಾರಿ ರದ್ದು ಮಾಡಬೇಕು. ಜಿಲ್ಲಾಧಿಕಾರಿಗೆ ಈ ಕುರಿತು ವರದಿ ನೀಡಬೇಕು. 

ದಾವಣಗೆರೆ ವಿಭಾಗದಿಂದ ಸರ್ಕಾರಕ್ಕೆ 8 ಕೋಟಿ ನಷ್ಟ ಆಗಿದೆ. ಅಧಿಕಾರಿಗಳು ಖಾಸಗಿ ವಾಹನಗಳ ಮೇಲೆ ನಿಗಾ ಇಡಬೇಕು. ಅನಧಿಕೃತ ವಾಹನ ಸಂಚಾರಕ್ಕೆ ಕಡಿವಾಣ ಹಾಕಬೇಕೆಂದರು. ಡಿಸಿ ಡಿ.ಎಸ್‌. ರಮೇಶ್‌ ಮಾತನಾಡಿ, ಅನಧಿಕೃತ ಕಾರ್ಯಾಚರಣೆ ಮತ್ತು ಪರವಾನಗಿ ಪರಿವೀಕ್ಷಣೆಗೆ ಸಮೀಕ್ಷೆ ನಡೆಸಿ ಕ್ರಿಯಾ ಯೋಜನೆ ತಯಾರಿಸಬೇಕು.

ವಾರಕ್ಕೊಮ್ಮೆ ಸ್ಕ್ವಾಡ್‌ನೊಂದಿಗೆ ವಾಹನ ಕಾರ್ಯಾಚರಣೆ ಮತ್ತು ಪರವಾನಗಿ ಪರಿವೀಕ್ಷಣೆ ಮಾಡಬೇಕೆಂದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಚಂದ್ರಶೇಖರ್‌ ಇದಕ್ಕೆ ಪ್ರತಿಕ್ರಿಯಿಸಿ,  ಸಾರಿಗೆ ಪ್ರಾಧಿಕಾರದಿಂದ ನಿಯಮಾನುಸಾರ ಎಲ್ಲ ಕ್ರಮ ವಹಿಸಲಾಗುತ್ತಿದೆ. ಕೆಎಸ್‌ಆರ್‌ ಟಿಸಿಯೊಂದಿಗೆ ಸಮನ್ವಯದಿಂದ ಕೆಲಸ ಮಾಡಲಾಗುತ್ತಿದೆ.

Advertisement

ಆದರೆ ಸ್ಕ್ವಾಡ್‌ ಭೇಟಿಗೆ ಸಿಬ್ಬಂದಿ ಕೊರತೆ ಇದೆ ಎಂದಾಗ, ಕೆಎಸ್‌ಆರ್‌ ಟಿಸಿ ಮತ್ತು ಆರ್‌ಟಿಓ ಇಬ್ಬರ ಸಹಯೋಗದಲ್ಲಿ ಪರಿವೀಕ್ಷಣೆ ನಡೆಸಲು ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು ಸಲಹೆ ನೀಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಭೀಮಾಶಂಕರ್‌ ಗುಳೇದ್‌ ಮಾತನಾಡಿ, ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸೇರಿದಂತೆ ವ್ಯವಸ್ಥೆಯನ್ನು ಸ್ಮಾರ್ಟ್‌ ಆಗಿಸಬಹುದು. 

ಆದರೆ ಕಟ್ಟಡ ಕಟ್ಟಲು ಅವಕಾಶವಿಲ್ಲವೆಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಕೆಎಸ್‌ಆರ್‌ಟಿಸಿ ಡಿಸಿ ಶ್ರೀನಿವಾಸ್‌, ಡಿಟಿಓ ಎಸ್‌. ಎನ್‌. ಅರುಣ್‌, ವಿಭಾಗೀಯ ಮೆಕ್ಯಾನಿಕಲ್‌ ಇಂಜಿನಿಯರ್‌ ಸಿದ್ದೇಶ್ವರ್‌ ಎನ್‌. ಹೆಬ್ಟಾರ್‌, ಮುಖ್ಯ ಕಾನೂನು ಅಧಿಕಾರಿ ರಾಜೇಶ್‌, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಪರಮೇಶ್ವರಪ್ಪ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next