ಕೊಟ್ಟಾಯಂ: ಶಬರಿ ಮಲೆ ದೇಗುಲ ಪ್ರವೇಶಿಸದಂತೆ ನಾಲ್ವರು ಮಂಗಳಮುಖಿಯರಿಗೆ ಪೊಲೀಸರು ತಡೆ ಹಾಕಿದ ಘಟನೆ ಭಾನುವಾರ ನಡೆದಿದೆ.
ನಾಲ್ವರು ಮಂಗಳಮುಖಿಯರ ಪೈಕಿ ಅನನ್ಯ ಎಂಬ ಒಬ್ಟಾಕೆ ಮಾತನಾಡಿ ನಮಗೆ ಪೊಲೀಸರು ಅವಮಾನ ಮಾಡಿ, ಹೆದರಿಸಿದರು. ದೇವಾಲಯದ ಮೂಲ ಶಿಬಿರವಾದ ಎರುಮಲೈನಿಂದ ನಮ್ಮನ್ನು ಹಿಂದಕ್ಕೆ ಕಳುಹಿಸಿದರು ಎಂದು ಹೇಳಿಕೊಂಡಿದ್ದಾರೆ.
ಎರ್ನಾಕುಲಂನಿಂದ ನಾವು ನಮ್ಮ ಯಾತ್ರೆ ಆರಂಭಿಸಿದ್ದೆವು. ವಿಶೇಷ ಪೊಲೀಸ್ ಸಿಬಂದಿಗಳು ನಮ್ಮ ಪ್ರಾರ್ಥನೆ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ಗಮನಿಸಿದ್ದರು. ಆದರೆ ನಾವು ಎರುಮಲೈ ತಲುಪಿದಾಗ ಪೊಲೀಸರು ಒರಟಾಗಿ ವರ್ತಿಸಿದರು. ಮಹಿಳಾ ಅಧಕಾರಿಗಳೂ ನಮ್ಮೊಂದಿಗೆ ಹಾಗೆಯೇ ವರ್ತಿಸಿದರು ಎಂದು ಅನನ್ಯ ಹೇಳಿಕೊಂಡಿದ್ದಾರೆ.
ಮೊದಲು ಅವರು ಮಹಿಳೆಯರ ವಸ್ತ್ರಗಳಲ್ಲಿ ನಿಮ್ಮನ್ನು ನಾವು ದೇವಾಲಯ ಪ್ರವೇಶಿಸಲು ಬಿಡುವುದಿಲ್ಲ , ಪುರುಷರಂತೆ ವಸ್ತ್ರ ಧರಿಸಿ ಎಂದರು. ಮೊದಲು ನಾವು ಸಾಧ್ಯವಿಲ್ಲ ಎಂದೆವಾದರೂ ಬಳಿಕ ಮನಸ್ಸು ಬದಲಿಸಿ ವಸ್ತ್ರ ಬದಲಾಯಿಸಿಕೊಳ್ಳಲು ಒಪ್ಪಿದೆವಾದರೂ ಪೊಲೀಸರು ಮಾತ್ರ ನಮಗೆ ದೇವಾಲಯ ಪ್ರವೇಶಿಸಿಲು ಅವಕಾಶ ನೀಡಲಿಲ್ಲ ಎಂದಿದ್ದಾರೆ.
ಸೆಪ್ಟಂಬರ್ 28 ರ ಬಳಿಕ ದೇವಾಲಯದ ಪ್ರಾಂಗಣದಲ್ಲಿ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ಸುಪ್ರೀಂ ಕೋರ್ಟ್ ಎಲ್ಲಾ ವಯಸ್ಸಿನ ಮಹಿಳೆಯರು ದೇವಾಲಯ ಪ್ರವೇಶಿಸಬಹುದು ಎಂದು ತೀರ್ಪು ನೀಡಿತ್ತು. ಬಿಜೆಪಿ ಕೂಡ ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ.