ಮೈಸೂರು: ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವ ದೃಷ್ಟಿಯಿಂದ ಗುಂಡ್ಲುಪೇಟೆಯಲ್ಲಿ ಶಾಂತಿಯುತವಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿಪ್ರಹಾರ ಮಾಡಲು ಆದೇಶ ನೀಡಿ ಕಾಂಗ್ರೆಸ್ ಏಜೆಂಟರಂತೆ ವರ್ತಿಸಿರುವ ಅಲ್ಲಿನ ವೃತ್ತ ನಿರೀಕ್ಷರ ಹಾಗೂ ಆರಕ್ಷಕ ನಿರೀಕ್ಷಕರನ್ನು ಹಾಗೂ ಈಗಾಗಲೇ ದೂರು ನೀಡಲಾಗಿರುವ ಮೈಸೂರಿನ ನಾಲ್ವರು ಅಧಿಕಾರಿಗಳನ್ನು ಚುನಾವಣಾ ಆಯೋಗ ಕೂಡಲೇ ವರ್ಗಾವಣೆ ಮಾಡಬೇಕು ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಂತಿಯುತವಾಗಿ ಮೆರವಣಿಗೆ ಯಲ್ಲಿ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಬೀಸಿರುವುದನ್ನು ಬಲವಾಗಿ ಖಂಡಿಸಿದ ಅವರು, ಸೋಲಿನ ಭೀತಿಯಿಂದ ಹತಾಶರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ, ಪೊಲೀಸರು ಅವರ ಶಿಷ್ಯರಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಸೋಲಿನ ಭಯದಿಂದ ಬಿಜೆಪಿ ಕಾರ್ಯ ಕರ್ತರನ್ನು ಗುರಿಯಾಗಿಸಬೇಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಚುನಾವಣೆ ನಡೆಯಲಿ ಜನತೆಯ ತೀರ್ಪನ್ನು ಗೌರವಿಸೋಣ. ನಿಸ್ಪಕ್ಷಪಾತ ಚುನಾವಣೆ ನಡೆದರೆ ಸೋಲುವ ಭಯದಿಂದ ನಾಮಪತ್ರ ಸಲ್ಲಿಕೆಯ ದಿನದಿಂದಲೇ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ರಾಜ್ಯ ಮುಖ್ಯಚುನಾವಣಾಧಿಕಾರಿಗೆ ದೂರು ನೀಡಿ, ಅರೆ ಸೇನಾಪಡೆ ಕರೆಸಲು ಹಾಗೂ ಕೇಂದ್ರದಿಂದ ಚುನಾವಣಾ ವೀಕ್ಷಕರನ್ನು ನೇಮಕ ಮಾಡುವಂತೆ ಮನವಿ ಮಾಡಲಿದ್ದೇವೆ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿಯ ಮೆರವಣಿಗೆಗೆ ಪ್ರತ್ಯೇಕ ಮಾರ್ಗ ನಿಗದಿ ಮಾಡಿದ್ದಾಗ, ಬಿಜೆಪಿಯ ಮೆರವಣಿಗೆಯ ಮೇಲೆ ಕಲ್ಲು ತೂರಿದ್ದಾರೆ ಎಂದರೆ, ಗಲಭೆ ಉಂಟುಮಾಡುವುದೇ ಅವರ ಉದ್ದೇಶವಾಗಿತ್ತು. ಉಪ ಚುನಾವಣೆಯಲ್ಲೇ ಈ ರೀತಿ ವರ್ತಿಸುವವರು ಇನ್ನು ಸಾರ್ವತ್ರಿಕ ಚುನಾವಣೆಯಲ್ಲಿ ಯಾವ ರೀತಿ ಮಾಡಬಹುದು ಎಂಬುದನ್ನೂ ಊಹಿಸಲೂ ಸಾಧ್ಯವಿಲ್ಲ ಎಂದು ಹೇಳಿದರು.
ಈ ಭಾಗದಲ್ಲಿ ನಾನು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಮಾಡಿದಷ್ಟು ಕೆಲಸವನ್ನು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮಾಡಿಲ್ಲ, ಬರಗಾಲಕ್ಕೆ ಸ್ಪoದಿಸುತ್ತಿಲ್ಲ, ಗೋಶಾಲೆ ತೆರೆದಿಲ್ಲ. ಕುಡಿಯುವ ನೀರು ಕೊಡಲಾಗಿಲ್ಲ. ಮೇವು ಖರೀದಿಯಲ್ಲೂ ಅವ್ಯವಹಾರ ನಡೆದಿದೆ ಎಂಬ ಆರೋಪವಿದೆ ಎಂದು ದೂರಿದರು. ವಿಪ ಮಾಜಿ ಸದಸ್ಯ ತೋಂಟದಾರ್ಯ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಫಣೀಶ್, ನಂದೀಶ್ ಪ್ರೀತಂ, ಎಚ್.ವಿ. ರಾಜೀವ್ ಮೊದಲಾದವರು ಹಾಜರಿದ್ದರು.