Advertisement
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಕರ ನಿಯೋಜನೆ ಸಂಬಂಧ ನನ್ನ ಮೇಲೆಯು ಸಾಕಷ್ಟು ಒತ್ತಡಗಳಿವೆ. ಆದರೆ ಯಾರೇ ಶಿಫಾರಸು ಮಾಡಿದರೂ ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಸೂಚಿಸಿದರು.
Related Articles
Advertisement
ಮುಖ್ಯವಾಗಿ ಗೌರಿಬಿದನೂರು ಮತ್ತು ಬಾಗೇಪಲ್ಲಿ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲ್ಯಾಣಿಗಳು ಸ್ವಚ್ಛವಾಗದಿರುವುದು ಕಂಡು ಬಂದಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಕಲ್ಯಾಣಿ ಸ್ವಚ್ಛತಾ ಕಾರ್ಯಕ್ರಮ ಪೂರ್ಣಗೊಳಿಸಬೇಕು. ಶೀಘ್ರದಲ್ಲಿಯೇ ಜಿಲ್ಲೆಯನ್ನು ಸಂಪೂರ್ಣ ಕಲ್ಯಾಣಿಗಳ ಪುನಶ್ಚೇತನ ಜಿಲ್ಲೆ ಎಂದು ಘೋಷಿಸಲಾಗುವುದು ಎಂದರು.
362 ಗ್ರಾಮಗಳಲ್ಲಿ ನೀರಿನ ಸಮಸ್ಯೆ: ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಶಿವಕುಮಾರ್ ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿಯಿಂದಾಗಿ ಕುಡಿಯುವ ನೀರಿನ ಮೂಲಗಳಾದ ಕೊಳವೆ ಬಾವಿಗಳು ದಿನೇ ದಿನೆ ಬತ್ತಿ ಹೋಗುತ್ತಿದ್ದು, ತಾತ್ಕಾಲಿಕ ಕುಡಿಯವ ನೀರಿಗಾಗಿ 362 ಗ್ರಾಮಗಳಲ್ಲಿ 151 ಗ್ರಾಮಗಳಿಗೆ ಟ್ಯಾಂಕರ್‌ನ ಮೂಲಕ ಹಾಗೂ 211 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಪಂ ಅಧ್ಯಕ್ಷ ಎಚ್.ವಿ.ಮಂಜುನಾಥ, ಅಧಿಕಾರಿಗಳು ಕಡ್ಡಾಯವಾಗಿ ಮಳೆ ಕೊಯ್ಲು ಪದ್ಧತಿ ಅನುಷ್ಠಾನಕ್ಕೆ ಮುಂದಾಗಬೇಕೆಂದರು. ಜಿಲ್ಲೆಯಲ್ಲಿ ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿಯಲ್ಲಿ ಹೆಚ್ಚಿನದಾಗಿ ನೀರಿನ ಸಮಸ್ಯೆ ಇದ್ದು, ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕೆಂದರು. ಸಾರ್ವಜನಿಕ ಆಸ್ಪತ್ರೆಗಳ ಬಗ್ಗೆ ಚರ್ಚೆ ನಡೆದು ಶೌಚಾಲಯಗಳ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಹಾಗೂ ಖಾಲಿ ಇರುವ ತಜ್ಞ ವೈದ್ಯರನ್ನು ಹೊರಗುತ್ತಿಗೆ ಮೂಲಕ ನೇಮಿಸಿಕೊಳ್ಳುವಂತೆ ತಿಳಿಸಿದರು.
ಮಳೆ ಕೊರತೆಗೆ ಆತಂಕ: ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ ಜಿಲ್ಲೆಯಲ್ಲಿ ಶೇ.70 ರಷ್ಟು ಬಿತ್ತನೆ ಆಗಿದ್ದರೂ ಸದ್ಯ ಮಳೆ ಇಲ್ಲದೇ ಬೆಳೆಗಳು ಒಣಗುತ್ತಿವೆ. ಈಗಾಗಲೇ ಮಳೆ ಕೊರತೆಗೆ ಜಿಲ್ಲೆಯಲ್ಲಿ ನೆಲಗಡಲೆ ಹಾಗೂ ತೊಗರಿ ನಿರೀಕ್ಷಿತ ಮಟ್ಟದಲ್ಲಿ ಬಿತ್ತನೆ ಆಗಿಲ್ಲ. ಜಿಲ್ಲೆಯಲ್ಲಿ ಮಳೆಯಾದರೆ ರಾಗಿ ಬಿತ್ತನೆಗೆ ಅವಕಾಶ ಇದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ರೂಪಾ ತಿಳಿಸಿದರು.
ಕೃಷಿ ಅಧಿಕಾರಿಗಳಿಗೆ ತರಾಟೆ: ಮಳೆ ಕೊರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಜಿಪಂ ಅಧ್ಯಕ್ಷರು, ರಾಗಿ ಹಾಗೂ ಸಾವಯುವ ಸಿರಿಧಾನ್ಯಗಳ ಬಿತ್ತನೆಗೆ ಒತ್ತು ಕೊಡುವಂತೆ ಸೂಚಿಸಿ, ಕಳೆದ ವರ್ಷದ ಬೆಳೆ ವಿಮೆ ಹಣ ಪಾವತಿಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಕೃಷಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಉಳಿದಂತೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿದ್ಯಾರ್ಥಿ ವೇತನ, ಭವನಗಳ ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಕೊಳವೆ ಬಾವಿ ಕೊರೆಸುವುದರಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಅಧಿಕಾರಿಗಳನ್ನು ಅಧ್ಯಕ್ಷರು ತರಾಟೆಗೆ ತೆಗೆದುಕೊಂಡರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಶೇಷವಾಗಿ ರೇಷ್ಮೆ, ತೋಟಗಾರಿಕೆ, ಶಿಕ್ಷಣ, ಆರೋಗ್ಯ ಹಾಗೂ ಬೆಸ್ಕಾಂ ಬಗ್ಗೆ ವಿಶೇಷ ಚರ್ಚೆ ನಡೆದು ಅಧಿಕಾರಿಗಳಿಗೆ ಹಲವು ಸಲಹೆ, ಸೂಚನೆ ನೀಡಿದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ನಿರ್ಮಲಾ, ಸಿಇಒ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಯೋಜನಾ ಅಧಿಕಾರಿ ಎನ್.ಮಾಧುರಾವ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರತಿ ತಾಲೂಕಿನಲ್ಲಿ ಪೌಷ್ಟಿಕ ಪುನಶ್ಚೇತನ ಕೇಂದ್ರ ತೆರೆಯಿರಿ: ಜಿಲ್ಲಾಸ್ಪತ್ರೆಯಲ್ಲಿ ಆರಂಭವಾಗಿರುವ ಮಕ್ಕಳ ಪೌಷ್ಟಿಕ ಪುನಶ್ಚೇತನ ಕೇಂದ್ರದ ಕಾರ್ಯ ನಿರ್ವಹಣೆಗೆ ಕೇಂದ್ರ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿದೆ. ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಎಂದು ಜಿಪಂ ಅಧ್ಯಕ್ಷ ಎಚ್.ವಿ.ಮಂಜುನಾಥ ಹೇಳಿದರು.
ಜಿಲ್ಲಾ ಆರೋಗ್ಯ ಇಲಾಖೆ ಜಿಲ್ಲೆಯ ಪ್ರತಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪೌಷ್ಟಿಕ ಪುನಶ್ಚೇತನ ಕೇಂದ್ರ ತೆರೆದು ಮಕ್ಕಳಿಗೆ, ತಾಯಂದಿರಿಗೆ ಚಿಕಿತ್ಸೆ ನೀಡಬೇಕೆಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ಪೌಷ್ಟಿಕ ಪುನಶ್ಚೇತನ ಕೇಂದ್ರವನ್ನು ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿರುವ ವೈದ್ಯರಾದ ಡಾ.ಮಂಜುಳಾ, ಡಾ.ಗಾಯತ್ರಿಗೆ ಅಭಿನಂದನೆ ಸಲ್ಲಿಸಿ ಕೇಂದ್ರದ ಕಾರ್ಯನಿರ್ವಹಣೆ ಬಗ್ಗೆ ಸಭೆಯಲ್ಲಿ ಪ್ರಾತ್ಯಕ್ಷಿಕೆ ತೋರಿಸಲಾಯಿತು.
ಮಳೆಗಾಲ ಮುಗಿಯುತ್ತಾ ಬಂದಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸುಧಾರಣೆಯಾಗುವ ಲಕ್ಷ್ಮಣಗಳು ಕಾಣುತ್ತಿಲ್ಲ. ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಬೇಕು. ಸರ್ಕಾರ ಹೊಸದಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಅವಕಾಶ ನೀಡುತಿಲ್ಲ. ಅಧಿಕಾರಿಗಳು ಕುಡಿವ ನೀರಿನ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. -ಎಚ್.ವಿ.ಮಂಜುನಾಥ, ಜಿಪಂ ಅಧ್ಯಕ್ಷರು