ಬೆಳ್ತಂಗಡಿ: ಭಾರತವು ಮಾಹಿತಿ ತಂತ್ರಜ್ಞಾನ, ಆರ್ಥಿಕತೆಯಲ್ಲಿ ಇತರ ದೇಶಗಳಿಗೆ ಸಮಾನವಾಗಿ ಬೆಳೆದಿದ್ದರೂ ಸ್ವಚ್ಛತೆಯ ನಾಗರಿಕ ಪ್ರಜ್ಞೆಯಲ್ಲಿ ಭಾರತೀಯರು ಇನ್ನೂ ಪ್ರಗತಿ ಸಾಧಿಸಬೇಕಿದೆ. ನಮ್ಮ ಪೂರ್ವಜರಿಂದ ಪಡೆದ ಸ್ವಚ್ಛ ಪರಿಸರ ವನ್ನು ಮುಂದಿನ ಜನಾಂಗಕ್ಕೂ ಹಸ್ತಾಂತರಿಸುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಮಂಗಳವಾರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ತಂಗಡಿ ಸ್ವಚ್ಛತಾ ಜಾಗೃತಿ ವೇದಿಕೆಯ ಸಹಯೋಗದಲ್ಲಿ ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿ ಪ್ರಯುಕ್ತ ಬೆಳ್ತಂಗಡಿ ತಾಲೂಕಿನಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮದ ಮೊದಲ ಹೆಜ್ಜೆಯಾಗಿ ಸ್ವಚ್ಛತಾ ಸೇನಾನಿಗಳಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾರತ ಅಭಿವೃದ್ಧಿ ನಿಟ್ಟಿನಲ್ಲಿ ಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರವಾಗಿದೆ. ಜ್ಞಾನವಿಕಾಸದ ಕಲ್ಪನೆ ಮೂಲಕ ಹೇಮಾವತಿ ಹೆಗ್ಗಡೆ ಮಹಿಳೆಯರಿಗೆ ಸ್ವಾಭಿಮಾನದ ಬದುಕು ನೀಡಿದ್ದಾರೆ. ಸ್ವಚ್ಛತೆ ವಿಚಾರದಲ್ಲಿ ಬೆಳ್ತಂಗಡಿ ತಾ| ರಾಷ್ಟ್ರಮಟ್ಟದಲ್ಲೇ ಹೆಸರು ಗಳಿಸಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿಯವರು ಸ್ವಚ್ಛತಾ ಸೇನಾನಿಗಳ ಟೀಶರ್ಟ್, ಕೈಪಿಡಿ ಬಿಡುಗಡೆಗೊಳಿಸಿ ಸಾಂಕೇತಿಕವಾಗಿ ಸ್ವಚ್ಛತಾ ಪರಿಕರಗಳನ್ನು ವಿತರಿಸಿದರು. ತಾ.ಪಂ. ಇಒ ಕುಸುಮಾಧರ ಬಿ. ಶುಭಾ ಶಂಸನೆಗೈದು, ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಸವಾಲಿನ ಕೆಲಸವಾಗಿದ್ದು, ಈ ನಿಟ್ಟಿನಲ್ಲಿ ಧರ್ಮಸ್ಥಳ ಕ್ಷೇತ್ರದ ಪ್ರಯತ್ನ ಪ್ರಶಂಸನೀಯ ಎಂದರು.
ಶ್ರೀಕ್ಷೇತ್ರದ ಹೇಮಾವತಿ ವಿ. ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಅಂಡಿಂಜೆ ಗ್ರಾ.ಪಂ. ಅಧ್ಯಕ್ಷ ಮೋಹನ ಅಂಡಿಂಜೆ, ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ, ಹೊಸಂಗಡಿ ಗ್ರಾ.ಪಂ. ಅಧ್ಯಕ್ಷೆ ಹೇಮಾ ವಸಂತ್ ಉಪಸ್ಥಿತರಿದ್ದರು.
ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ಸ್ವಾಗತಿಸಿ, ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ ವಂದಿಸಿದರು. ಪ್ರವೀಣ್ ನಿರೂಪಿಸಿದರು.
ಶಾಶ್ವತ ಯೋಜನೆ
70 ವರ್ಷಗಳ ಹಿಂದೆ ತೀರಾ ಹಿಂದುಳಿದಿದ್ದ ಭಾರತವು ಬಳಿಕ ಅತ್ಯದ್ಭುತ ಪ್ರಗತಿ ಕಂಡು ಶ್ರೀಮಂತ ರಾಷ್ಟ್ರಗಳಿಗೆ ಸಮಾನಾಗಿ ಬೆಳೆದಿದೆ. ಆದರೆ ಸ್ವಚ್ಛತೆ ವಿಚಾರದಲ್ಲಿ ಭಾರತ ಸಾಕಷ್ಟು ಹಿಂದೆ ಇದೆ. ಹೀಗಾಗಿ ಗ್ರಾಮೀಣ ಭಾಗದ ಜನಪ್ರತಿನಿಧಿಗಳು ಶಾಶ್ವತ ಸ್ವಚ್ಛತಾ ಯೋಜನೆಗಳಿಗೆ ಮನಸ್ಸು ಮಾಡಬೇಕಿದೆ.
–
ಡಾ| ಡಿ. ವೀರೇಂದ್ರ ಹೆಗ್ಗಡೆ
ಧರ್ಮಾಧಿಕಾರಿ