ಧಾರವಾಡ: ವ್ಯಾಜ್ಯಗಳಲ್ಲಿ ಮಧ್ಯಸ್ಥಿಕೆ ಮೂಲಕ ಪರಿಹಾರ ಎನ್ನುವುದು ಮೊದಲಿನಿಂದಲೂ ನಡೆದು ಬಂದಿದ್ದು, ಇದೀಗ ಇದು ಕಾನೂನು ಸ್ವರೂಪ ಪಡೆಯುತ್ತಿದೆ ಎಂದು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಅಧ್ಯಕ್ಷರಾದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಸ್. ಸುಜಾತಾ ಹೇಳಿದರು.
ಜಿಪಂ ಸಭಾಂಗಣದಲ್ಲಿ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ, ರಾಜ್ಯ-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಧಾರವಾಡ-ಗದಗ ವಕೀಲರ ಸಂಘಗಳ ಆಶ್ರಯದಲ್ಲಿ ಧಾರವಾಡ, ಗದಗ ಜಿಲ್ಲೆಗಳ ಮಧ್ಯಸ್ಥಿಕೆಗಾರರಿಗೆ ಆಯೋಜಿಸಿರುವ ಮಧ್ಯಸ್ಥಿಕೆ ಪುನರ್‌ಮನನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಲಯದಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಮಧ್ಯಸ್ಥಿಕೆಗೆ ಅರ್ಹವಿರುವ ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ನ್ಯಾಯಾಧಿಧೀಶರು ಶಿಫಾರಸು ಮಾಡಬೇಕು. ಇದರಿಂದ ನ್ಯಾಯಾಲಯದ ಕೆಲಸದ ಒತ್ತಡ, ಕಕ್ಷಿದಾರರ ಸಮಯ, ಹಣದ ಉಳಿತಾಯದೊಂದಿಗೆ ಅವರಲ್ಲಿ ನ್ಯಾಯದಾನದ ಬಗ್ಗೆ ಮತ್ತಷ್ಟು ವಿಶ್ವಾಸ, ಆತ್ಮಸ್ಥೈರ್ಯ ಹೆಚ್ಚುತ್ತದೆ. ನ್ಯಾಯದಾನದ ವಿವಿಧ ಕ್ರಮಗಳಲ್ಲಿ ಮಧ್ಯಸ್ಥಿಕೆ ತಂತ್ರವು ಅತ್ಯಂತ ಪರಿಣಾಮಕಾರಿ ತಂತ್ರವಾಗಿದ್ದು, ಇದನ್ನು ಸಮರ್ಪಕವಾಗಿ ಬಳಸಿಕೊಂಡು ವ್ಯಾಜ್ಯ ಪರಿಹಾರ ಮಾಡಲು ಸಹಕರಿಸುವ ಮಧ್ಯಸ್ಥಿಕೆಗಾರರ ಪಾತ್ರ ಬಹುಮುಖ್ಯವಾಗಿದೆ ಎಂದರು.
ಹೈಕೋರ್ಟ್ ನ್ಯಾಯಮೂರ್ತಿ ರವಿ ವಿ. ಹೊಸಮನಿ ಮಾತನಾಡಿ, ಮಧ್ಯಸ್ಥಿಕೆ ಕೇಂದ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಮಧ್ಯಸ್ಥಿಕೆದಾರ ನ್ಯಾಯವಾದಿಗಳು ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಕಕ್ಷಿದಾರರಲ್ಲಿ ನ್ಯಾಯದಾನದ ಭರವಸೆ ಮೂಡಿಸಬೇಕು ಎಂದು ಹೇಳಿದರು.
ಜಿಲ್ಲಾ ನ್ಯಾಯಾಲಯದ 2ನೇ ಅಧಿಕ ಜಿಲ್ಲಾ ನ್ಯಾಯಾಧೀಶ ಕೆ.ಸಿ.ಸದಾನಂದಸ್ವಾಮಿ, 3ನೇ ಅಧಿಕ ಜಿಲ್ಲಾ ನ್ಯಾಯಾಧೀಶ ಸಿ.ಎಂ.ಗಂಗಾಧರ, ಸಿಜೆಎಂ ಹಾಗೂ ಪ್ರಧಾನ ಹಿರಿಯ ನ್ಯಾಯಾಧೀಶ ಸಂಜಯ ಪಿ. ಗುಡಗುಡಿ, 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾ ಧೀಶ ನಿತಿನ ಯಶವಂತರಾವ್, 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ, 3ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧಿಧೀಶ ಮಹೇಶ ಚಂದ್ರಕಾಂತ, 4ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಅಮೊಲ ಹಿರೇಕೊಡಿ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಲತಾ ಜೆ., 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧಿಧೀಶ ದೊಡ್ಡಬಸವರಾಜ ಅಜ್ಜಪ್ಪ ಇನ್ನಿತರರಿದ್ದರು.
ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಉಮೇಶ ಅಡಿಗ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕೌಟುಂಬಿಕ ನ್ಯಾಯಾಲಯ ನ್ಯಾಯಾ ಧೀಶರಾದ ಎಸ್.ನಾಗಶ್ರೀ ನಿರೂಪಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಷ್ಪಲತಾ ಸಿ.ಎಂ ವಂದಿಸಿದರು. ಸೋಮವಾರ ಸಂಜೆ 4 ಗಂಟೆಗೆ ನಡೆಯುವ ಸಮಾರೋಪದಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸೂರಜ ಗೋವಿಂದರಾಜ ಪಾಲ್ಗೊಳ್ಳಲಿದ್ದಾರೆ.
ಮಧ್ಯಸ್ಥಿಕೆಯಿಂದ ನ್ಯಾಯದಾನ ಸುಲಭ ಎನ್ನುವುದು ಮನವರಿಕೆ ಆಗುವಂತೆ ಮಧ್ಯಸ್ಥಿಕೆದಾರ ನ್ಯಾಯವಾದಿಗಳು ಸಂವಹನ ನಡೆಸಬೇಕು. ನ್ಯಾಯಾಂಗದ ಕ್ರಿಯಾಶೀಲತೆಗೆ ಮಧ್ಯಸ್ಥಿಕೆ ಒಂದು ಸಾಧನವಾಗಿದೆ. ಉತ್ತಮ ತರಬೇತಿಗಳಿಂದ ಮಧ್ಯಸ್ಥಿಕೆ ಕೇಂದ್ರಗಳನ್ನು ಯಶಸ್ವಿಯಾಗಿಸಬಹುದು.
ನ್ಯಾ| ಪಿ.ಎನ್. ದೇಸಾಯಿ, ಹೈಕೋರ್ಟ್ ನ್ಯಾಯಮೂರ್ತಿ