ಚಿತ್ರದುರ್ಗ: ಜೀತ ಕಾರ್ಮಿಕ ಪದ್ಧತಿಯಲ್ಲಿ ವ್ಯಕ್ತಿಯ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ. ವ್ಯಕ್ತಿಯು ಹಕ್ಕು ಹಾಗೂ ಸ್ವಾತಂತ್ರ್ಯ ಕಳೆದುಕೊಳ್ಳುವುದೇ ಜೀತಪದ್ಧತಿ ಎಂದು ರಾಜ್ಯ ಜೀತ ಕಾರ್ಮಿಕ ಪದ್ಧತಿ ಉನ್ನತ ಮಟ್ಟದ ಸಮಿತಿ ಸದಸ್ಯ ವಿಲಿಯಂ ಕ್ರಿಸ್ಟೋಫರ್ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಿದ್ದ ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನಾ) ಅಧಿನಿಯಮ-1976ರಅನುಷ್ಠಾನಗೊಳಿಸುವ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಜೀತ ಕಾರ್ಮಿಕ ಪದ್ಧತಿಗೆ ಸಿಲುಕಿಕೊಂಡ ಪ್ರತಿಯೊಬ್ಬರು ಆರ್ಥಿಕ ಹಾಗೂ ದೈಹಿಕ ಶೋಷಣೆಗೆ ಒಳಗಾದ ದುರ್ಬಲ ವರ್ಗದವರಾಗಿದ್ದಾರೆ. ಇವರಲ್ಲಿ ಶೇ.95 ರಷ್ಟು ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರೇ ಜೀತಕ್ಕೆ ಒಳಗಾಗಿದ್ದಾರೆ ಎಂಬುದು ಅಧ್ಯಯನಗಳ ವರದಿಯಿಂದ ಗೊತ್ತಾಗಿದೆ ಎಂದರು. ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನಾ) ಅಧಿನಿಯಮವು ದುರ್ಬಲ ವರ್ಗಗಳ ಜನತೆಯ ಆರ್ಥಿಕ ಮತ್ತು ದೈಹಿಕ ಶೋಷಣೆ ತಡೆಗಟ್ಟುವ ಉದ್ದೇಶದಿಂದ ಜೀತ ಕಾರ್ಮಿಕ ಪದ್ಧತಿಯ ನಿರ್ಮೂಲಕ್ಕೆ ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಅದಕ್ಕೆ ಪ್ರಾಸಂಗಿಕವಾದ ವಿಷಯಗಳಿಗೆ ಉಪಬಂಧವನ್ನು ಕಲ್ಪಿಸುವುದಕ್ಕಾಗಿ ರಚಿಸಿದ ಅಧಿನಿಯಮವಾಗಿದೆ.
ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ 400ಕ್ಕೂ ಹೆಚ್ಚು ಸೌಲಭ್ಯ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಜವಾಬ್ದಾರಿಯಿಂದ ದುರ್ಬಲ ವರ್ಗದವರಿಗೆ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದರೆ ಜೀತಪದ್ಧತಿ ಪತ್ತೆ ಹಚ್ಚುವುದರ ಜತೆಗೆ ಅಂತಹವರನ್ನು ಜೀತಮುಕ್ತಗೊಳಿಸಿ ಪುನರ್ವಸತಿ ಕಲ್ಪಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಫೆ.9ರಂದು ಸಿಎಂ ನಮ್ಮ ರಾಜ್ಯವನ್ನು ಬಂಧಮುಕ್ತ, ಜೀತಮುಕ್ತ ರಾಜ್ಯವನ್ನಾಗಿ ಘೋಷಿಸಿದ್ದಾರೆ. ಇದಕ್ಕಾಗಿ ಎಲ್ಲಾ ಹಂತದ ಸರ್ಕಾರಿ ಅಧಿಕಾರಿಗಳು, ನೌಕರರು ತಳಮಟ್ಟದಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಸಿ.ಸಂಗಪ್ಪ, ಉಪವಿಭಾಗಾಧಿಕಾರಿ ಪ್ರಸನ್ನ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಓಂಕಾರಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ವಿನುತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ ಸೇರಿದಂತೆ ತಹಶೀಲ್ದಾರ್‌ಗಳು, ಉಪತಹಶೀಲ್ದಾರ್‌ಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.