ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ನೂರು ನಿರ್ವಾಹಕರು ಮತ್ತು ನೂರು ಚಾಲಕರಿಗೆ ಬ್ರೆçನ್ಸ್ ಅಂಗ ಸಂಸ್ಥೆಯಾದ “ಗೋಲ್ಡನ್ ಅವರ್’ ತಂಡದಿಂದ ಪ್ರಾಥಮಿಕ ಚಿಕಿತ್ಸೆ ಮೂಲಕ ಜೀವ ಉಳಿಸುವ ಬಗ್ಗೆ ತರಬೇತಿ ನೀಡಲಾಯಿತು. ನಗರದ ಮಾಗಡಿ ರಸ್ತೆಯ ವಡ್ಡರಹಳ್ಳಿಯಲ್ಲಿ ಈಚೆಗೆ ನಡೆದ ಶಿಬಿರದಲ್ಲಿ, ಅಪಘಾತ ಸಂದರ್ಭದಲ್ಲಿ ವ್ಯಕ್ತಿಯ ಜೀವ ಉಳಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ತರಬೇತಿ ನೀಡಲಾಯಿತು.
ಯಾವುದೇ ವಾಹನಗಳ ಅಪಘಾತದ ಸಂದರ್ಭದಲ್ಲಿ ಕೈಗೊಳ್ಳುವ ತುರ್ತು ಕ್ರಮಗಳು ಅತ್ಯಂತ ಪ್ರಮುಖವಾಗಿದ್ದು, ಅಪಘಾತಕ್ಕೀಡಾದ ವ್ಯಕ್ತಿಗೆ ಪ್ರಾಥಮಿಕ ಮತ್ತು ತುರ್ತು ಉಪಚಾರ ಮಾಡುವ ಮೂಲಕ ಚಾಲಕ/ನಿರ್ವಾಹಕರು ಅನೇಕ ಜನರ ಪ್ರಾಣ ಉಳಿಸಬಹುದು. ಆದರೆ, ಅದಕ್ಕೆ ಅಗತ್ಯ ತರಬೇತಿ ಬೇಕಿರುವ ಹಿನ್ನೆಲೆಯಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶೇ.80 ಜನರಿಗೆ ಜೀವದಾನ: ಈ ಸಂದರ್ಭದಲ್ಲಿ ಮಾತನಾಡಿದ ಡಾ.ಎನ್.ಕೆ.ವೆಂಕಟರಮಣ, ಅಪಘಾತ ಸಂಭವಿಸಿದ ಕ್ಷಣದಿಂದ ಮೊದಲ ಒಂದು ಗಂಟೆಯನ್ನು “ಗೋಲ್ಡನ್‌ಅವರ್’ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿದರೆ, ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸಂತ್ರಸ್ತರು ಆಸ್ಪತ್ರೆಯಲ್ಲೇ ಉಳಿಯುವ ಅವಧಿಯೂ ಕಡಿಮೆಯಾಗುತ್ತದೆ. ಆಸ್ಪತ್ರೆ ವೆಚ್ಚ ಕೂಡ ಗಣನೀಯವಾಗಿ ಕಡಿಮೆ ಆಗುತ್ತದೆ.
“ಗೋಲ್ಡನ್‌ಅವರ್’ನಲ್ಲಿ ಕಾರ್ಯನಿರ್ವಸಿದರೆ, ಶೇ.80ರಷ್ಟು ಜನರಿಗೆ ಜೀವದಾನ ಮಾಡಬಹುದು ಎಂದರು. ಶಿಬಿರದಲ್ಲಿ ತರಬೇತಿ ಪಡೆದ ಬಿಎಂಟಿಸಿ ಚಾಲಕ ಬುದ್ದಪ್ಪ ಮಾತನಾಡಿ, “ನಾನು 12 ವರ್ಷಗಳಿಂದ ಐಟಿಪಿಎಲ್ ಮಾರ್ಗದ ಬಸ್ ಚಾಲಕನಾಗಿದ್ದೇನೆ. ಪ್ರಾಥಮಿಕ ಹಂತದಲ್ಲಿ ಉಪಚಾರ ಮಾಡಿ, ಅಪಘಾತಕ್ಕೀಡಾದ ವ್ಯಕ್ತಿಯ ಜೀವ ಉಳಿಸಲು ಸಾಧ್ಯ ಎಂಬುದನ್ನು ತಿಳಿದು ತುಂಬಾ ಖುಷಿ ಆಯಿತು. ತರಬೇತಿ ತುಂಬಾ ಉಪಯುಕ್ತವಾಗಿದೆ’ ಎಂದು ಅನಿಸಿಕೆ ಹಂಚಿಕೊಂಡರು.