Advertisement
ಕಲೆ, ಸಂಸ್ಕೃತಿಗೆ ಹೆಸರಾಗಿರುವ ಮೈಸೂರು ನಗರ ಹಲವು ದಶಕದಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ನೆಲೆಯಾಗಿದೆ. ಹಲವು ವರ್ಷದಿಂದ ಕುಂದನ ಕಲೆಯನ್ನೇ ವೃತ್ತಿಯಾಗಿಸಿಕೊಂಡಿರುವ ಮೈಸೂರಿನ ಅಶೋಕ್ ಕುಮಾರ್ ಅವರು ವಿದೇಶಿಗರು, ಆಸಕ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮರದ ಇನ್ ಲೇ ಕಲೆಯ ತಿಳಿವಳಿಕೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
Related Articles
Advertisement
20 ಮಂದಿಗೆ ತರಬೇತಿ: ಆರಂಭದಲ್ಲಿ ಆಸ್ಟ್ರೇಲಿಯಾ ಮೂಲದ ಸ್ಕಿಲ್ ಟೂರಿಸಂ ಸಂಸ್ಥೆಯೊಂದಿಗೆ ವಿದೇಶಿ ಪ್ರಜೆಗಳಿಗೆ ಮರದ ಇನ್-ಲೇ ಕಲೆಯ ತರಬೇತಿ ನೀಡಲು ಆರಂಭಿಸಿದ್ದರು. ಇದುವರೆಗೂ ಐರ್ಲೆಂಡ್, ಅಮೆರಿಕ, ಬ್ರಿಟನ್ ಮತ್ತಿತರ ರಾಷ್ಟ್ರಗಳ 20ಕ್ಕೂ ಹೆಚ್ಚು ವಿದೇಶಿಗರಿಗೆ ತರಬೇತಿ ನೀಡಿದ್ದಾರೆ.
ಅದರಲ್ಲೂ ಅಮೆರಿಕ ಮೂಲದ ಪ್ರಜೆಗಳಿಗೆ ಹೆಚ್ಚಾಗಿ ತರಬೇತಿಯನ್ನು ನೀಡಿದ್ದು, ಇದರೊಂದಿಗೆ ಸ್ಥಳೀಯ ಆಸಕ್ತ ವಿದ್ಯಾರ್ಥಿಗಳಿಗೂ ಉಚಿತ ತರಬೇತಿ ನೀಡುತ್ತಿದ್ದಾರೆ. ಅಶೋಕ್ ಅವರ ಈ ಕೆಲಸಕ್ಕೆ ಪತ್ನಿ ಹಾಗೂ ತಂದೆ ಶ್ರೀಕಾಂತ್ ಕೂಡ ಕೈಜೋಡಿಸಿದ್ದಾರೆ.
ಪ್ರೋತ್ಸಾಹ ಸಿಗುತ್ತಿಲ್ಲ: ಮರದ ಇನ್-ಲೇ ಕಲೆಯ ಪ್ರೋತ್ಸಾಹ ಮತ್ತು ಬೆಳವಣಿಗೆಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಂಬಂಧಪಟ್ಟವರಿಂದ ನಿರೀಕ್ಷಿತ ಪ್ರೋತ್ಸಾಹ ಸಿಗುತ್ತಿಲ್ಲ. ಹೀಗಾಗಿ ಪ್ರತಿ ವರ್ಷ ಮರದ ಇನ್-ಲೇ ಕಲೆಯಲ್ಲಿ ತೊಡಗಿದ್ದ ಕಲಾವಿದರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.
ಇದರಿಂದ ಒಂದು ಕಾಲದಲ್ಲಿ 17 ಸಾವಿರ ಮಂದಿ ಇದ್ದ ಮರದ ಇನ್-ಲೇ ಕಲಾವಿದರ ಸಂಖ್ಯೆ ಇಂದು 3 ಸಾವಿರ ಮಂದಿಯಷ್ಟೇ ಇದ್ದಾರೆ. ಹಿಂದೆ ಈ ಕಲೆಯಲ್ಲಿ ತೊಡಗಿದ್ದ ಹಲವರು ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದು, ಮರದ ಇನ್-ಲೇ ಕಲಾಕೃತಿಗಳನ್ನು ತಯಾರು ಮಾಡುತ್ತಿದ್ದ ಕಾರ್ಖಾನೆಗಳು ಸಹ ಬಂದ್ ಆಗಿವೆ ಎಂದು ಅಶೋಕ್‌ಕುಮಾರ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
* ಸಿ. ದಿನೇಶ್