ಕಲಬುರಗಿ: ಉದ್ಯೋಗ ಅರಸಿ ವಿದೇಶಕ್ಕೆ ವಲಸೆ ಹೋಗುವವರಿಗೆ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಸೂಕ್ತ ತರಬೇತಿ ಹಾಗೂ ವ್ಯಾಪಕ ಮಾಹಿತಿ ದೊರಕುವಂತೆ ಆಗಬೇಕು ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೌಶಲ್ಯಾಭಿವೃದ್ಧಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದಿಂದ ಐಎಂಸಿಕೆ (ಇಂಟರ್‌ನ್ಯಾಷನಲ್ ಮೈಗ್ರೇಷನ್ ಸೆಂಟರ್ ಕರ್ನಾಟಕ) ಸೂಕ್ತ ತರಬೇತಿ ನೀಡಬೇಕೆಂದು ಕೌಶಲ್ಯಾಭಿವೃದ್ದಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಾನೂನುಬದ್ಧ ಮತ್ತು ಮಾನವೀಯ ವಲಸಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ವಲಸೆ ಹೋಗುವವರ ಸುರಕ್ಷತೆ ಬಗ್ಗೆಯೂ ನಿಗಾ ವಹಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಜಿಲ್ಲೆಯಿಂದ ವಿದೇಶಕ್ಕೆ ವಲಸೆ ಹೋಗುವರು ಐಎಂಸಿಕೆ ಮೂಲಕ ತೆರಳಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.
ವಿದೇಶಕ್ಕೆ ವಲಸೆ ಹೋಗುವವರಿಗೆ ಉದ್ಯೋಗ, ಅಲ್ಲಿನ ಕಂಪನಿ, ಆಚಾರ-ವಿಚಾರ, ವೀಸಾ ಕುರಿತ ಎಲ್ಲ ಮಾಹಿತಿ ನೀಡಲು ಶೀಘ್ರದಲ್ಲಿಯೇ ಜಿಲ್ಲೆಯಲ್ಲಿ ಎಂಆರ್‌ಸಿ (ಮೈಗ್ರೇಷನ್ ರಿಜಿನಲ್ ಸೆಂಟರ್) ತೆರೆಯಲಾಗುತ್ತಿದೆ. ವಲಸೆ ಹೋಗುವರು ಇದರ ಸೌಲಭ್ಯ ಪಡೆದುಕೊಳ್ಳಬೇಕು. ವಿಶೇಷವಾಗಿ ಮಹಿಳಾ ವಲಸಿಗರ ಬಗ್ಗೆ ಸರ್ಕಾರ ವಿಶೇಷ ಕಾಳಜಿ ವಹಿಸುತ್ತಿದೆ ಎಂದು ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಐಎಂಸಿಕೆ ಮೂಲಕ ನೀಡಲಾಗುವ ಈ ಸೇವೆಗಳನ್ನು ಪಡೆಯಲು ಜಿಲ್ಲಾ ಕೌಶಲ್ಯಭಿವೃದ್ಧಿ ಕಚೇರಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು. ಅಂತರ್ಜಾಲದ ವಿಳಾಸ //imck.online/session/signin ಇಲ್ಲಿ ನೋಂದಾಯಿಸಿ ಸೇವೆ ಪಡೆಯಬಹುದು. ದೂರವಾಣಿ ಸಂಖ್ಯೆ: 08472-225569ಕ್ಕೆ ಸಂಪರ್ಕಿಸಬಹುದು ಎಂದು ಸಭೆಯಲ್ಲಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಸಭೆಗೆ ತಿಳಿಸಿದರು.