Advertisement
ಸೆಪ್ಟಂಬರ್ ಆರಂಭದಲ್ಲೇ ಇಬ್ಬರು ಉಗ್ರರಿರುವ ಎರಡು ತಂಡಗಳು ಪಾಕಿಸ್ಥಾನದಿಂದ ಭಾರತ ಪ್ರವೇಶಿಸಿದ್ದು, ಈ ನಾಲ್ವರು ಉಗ್ರರು ಉನ್ನತ ಮಟ್ಟದ ಸ್ನೆ„ಪರ್ ತರಬೇತಿ ಪಡೆದಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಪಾಕಿಸ್ತಾನದ ಐಎಸ್‌ಐ ಈ ಉಗ್ರರಿಗೆ ತರಬೇತಿ ನೀಡಿದ್ದು, ಅಫ್ಘಾನಿಸ್ಥಾನದಲ್ಲಿ ಅಮೆರಿಕ ನೇತೃತ್ವದ ಪಡೆಗಳು ಬಳಸುವಂಥ ಎಂ-4 ಕಾರ್ಬೈನ್‌ಗಳನ್ನೂ ಇವರಿಗೆ ಒದಗಿಸಲಾಗಿದೆ. ಆಘಾನ್‌ನಲ್ಲಿ ತಾಲಿಬಾನ್ ಜತೆಗೆ ಜೈಶ್ ಜಂಟಿಯಾಗಿ ಸೇನಾಪಡೆಗಳ ವಿರುದ್ಧ ಸಮರ ಸಾರಿರುವ ಕಾರಣ, ಅಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ಉಗ್ರರಿಗೆ ತಾಲಿಬಾನ್ ಹಸ್ತಾಂತರಿಸಿರಬಹುದು ಎಂದು ಶಂಕಿಸಲಾಗಿದೆ. ಪಾಕಿಸ್ತಾನದ ವಿಶೇಷ ಪಡೆಯೂ ಇಂಥ ಶಸ್ತ್ರಾಸ್ತ್ರ ಬಳಸುತ್ತಿರುವುದು ಭಾರತದ ನೆಲದಲ್ಲಿ ವಿಧ್ವಂಸಕ ಕೃತ್ಯಕ್ಕೆ ಅಲ್ಲಿನ ಸೇನೆಯೂ ನೆರವಾಗುತ್ತಿದೆಯೇ ಎಂಬ ಶಂಕೆಯನ್ನು ಬಲಗೊಳಿಸಿದೆ.
ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಬ್‌ಇನ್‌ಸ್ಪೆಕ್ಟರ್ ಇಮಿಯಾಜ್ ಅಹ್ಮದ್ ಮಿರ್ ಎಂಬವರನ್ನು ಉಗ್ರರು ಶನಿವಾರ ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಶ್ರೀನಗರದ ಶೀರ್‌ಗಾಡಿಯ ಸಿಐಡಿಯಲ್ಲಿ ನಿಯೋಜಿತರಾಗಿದ್ದ ಮಿರ್ ಅವರು ಪುಲ್ವಾಮಾದಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದಾಗ ಅವರನ್ನು ಕೊಲೆಗೈಯಲಾಗಿದೆ. ಪೊಲೀಸರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಮನೆಗೆ ತೆರಳದಂತೆ ಮೇಲಧಿಕಾರಿಗಳು ಸೂಚಿಸಿದ್ದರು. ಆದರೆ, ಹೆತ್ತವರನ್ನು ನೋಡಬೇಕೆಂದು ಅನಿಸುತ್ತಿದೆ ಎಂದು ಹೇಳಿದ್ದ ಮಿರ್, ಉಗ್ರರಿಗೆ ತಮ್ಮ ಗುರುತು ಪತ್ತೆಯಾಗದಂತೆ ತಮ್ಮ ಗಡ್ಡ-ಮೀಸೆ ಬೋಳಿಸಿಕೊಂಡು, ಖಾಸಗಿ ಕಾರಿನಲ್ಲಿ ಮನೆಯತ್ತ ಪ್ರಯಾಣ ಬೆಳೆಸಿದ್ದರು ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ. ಇದೇ ವೇಳೆ, ಮಿರ್ ಅವರು ಮನೆಗೆ ತೆರಳುತ್ತಿದ್ದ ಮಾಹಿತಿಯನ್ನು ಉಗ್ರರಿಗೆ ನೀಡಿದ್ಯಾರು ಎಂಬ ಪ್ರಶ್ನೆ ಮೂಡಿದ್ದು, ಆ ಬಗ್ಗೆ ತನಿಖೆ ನಡೆಸುವುದಾಗಿ ಅಧಿಕಾರಿ ಗಳು ಹೇಳಿದ್ದಾರೆ.