Advertisement

ಎರಡು-ಮೂರು ತಿಂಗಳಲ್ಲಿ ಶಬರಿಮಲೈಗೆ ರೈಲು; ಕೇಂದ್ರ ಸಚಿವ ಅಶ್ವಿ‌ನಿ ವೈಷ್ಣವ್‌

04:50 PM Oct 12, 2022 | Team Udayavani |

ಹುಬ್ಬಳ್ಳಿ: ಶಬರಿ ಮಲೈ ಶ್ರೀ ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳುವ ರೈಲಿನ ಬೇಡಿಕೆಯಿದ್ದು, ಮುಂದಿನ ಎರಡು-ಮೂರು ತಿಂಗಳಲ್ಲಿ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈಲು ಸಂಚಾರಕ್ಕೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ಸಚಿವ ಅಶ್ವಿ‌ನಿ ವೈಷ್ಣವ್‌ ಹೇಳಿದರು.

Advertisement

ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದ ಮೂರನೇ ಪ್ರವೇಶ ದ್ವಾರ, ಮರು ನಿರ್ಮಾಣಗೊಂಡ ಯಾರ್ಡ್‌ ಹಾಗೂ ಹುಬ್ಬಳ್ಳಿ-ಹಜರತ್‌ ನಿಜಾಮುದ್ದಿನ್‌ ರೈಲಿಗೆ ಚಾಲನೆ ನೀಡಿದ ಮಾತನಾಡಿದ ಅವರು, ರಾಜ್ಯದ ರೈಲು ಯೋಜನೆಗಳ ಅಭಿವೃದ್ಧಿಗೆ ಪ್ರಧಾನಿಗಳು ಸಾಕಷ್ಟು ಹಣ ನೀಡಿದ್ದಾರೆ. ಸುಮಾರು 6 ಸಾವಿರ ಕೋಟಿ ರೂ. ರಾಜ್ಯಕ್ಕೆ ನೀಡಿದ್ದಾರೆ. ರಾಜ್ಯದ ರೈಲು ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನದಲ್ಲಿ ಒಂದು ಪೈಸೆ ಕೂಡ ಕಡಿಮೆ ಮಾಡುವುದಿಲ್ಲ. ಕರ್ನಾಟಕ ದೇಶದ ಭವಿಷ್ಯದ ರಾಜ್ಯವಾಗಿದೆ. ಇಲ್ಲಿನ ರೈಲ್ವೆ ಯೋಜನೆಗೆ ಅಗತ್ಯವಾದ ಅರಣ್ಯ ಪರವಾನಗಿ, ಭೂ ಸ್ವಾಧೀನ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ತ್ವರಿತಗತಿಯಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದರು.

ದಿನಕ್ಕೆ 12 ಕಿಮೀ ರೈಲ್ವೆ ಮಾರ್ಗ ನಿರ್ಮಿಸಲಾಗುತ್ತಿದೆ. 2014ರಲ್ಲಿ ಭಾರತ ಜಿಡಿಪಿಯಲ್ಲಿ 10 ಸ್ಥಾನದಲ್ಲಿತ್ತು. ಈಗ 5 ಸ್ಥಾನಕ್ಕೇರಿದ್ದು, ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ. ವಿಶ್ವದರ್ಜೆ ರೈಲು ನೋಡಲು ಹಿಂದೆ ವಿದೇಶಗಳಿಗೆ ಹೋಗಬೇಕಿತ್ತು. ಹೊರದೇಶದ ಮಾದರಿ ಅನುಕರಿಸದೆ ಭಾರತೀಯ ಎಂಜಿನಿಯರ್‌ಗಳು ಒಳ್ಳೆಯ ಮಾದರಿ ರೈಲು ಸಿದ್ಧಪಡಿಸಿದರು. ಗಂಟೆಗೆ 180 ಕಿಮೀ ವೇಗದ ಮತ್ತೂಂದು ರೈಲು ಸಿದ್ಧಪಡಿಸಲಾಗಿದೆ ಎಂದರು.

ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ತುಮಕೂರು-ದಾವಣಗೆರೆ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ.ಹುಬ್ಬಳ್ಳಿ- ವಾರಣಾಸಿ ವಾರಕ್ಕೆ ಎರಡು ಬಾರಿ ಸಂಚರಿಸಲಿದೆ. 2007-14 ರವರೆಗೆ 4437 ಕಿಮೀ ವಿದ್ಯುದ್ದೀಕರಣ ಮಾಡಲಾಗಿತ್ತು. ಆದರೆ ನಮ್ಮ ಸರಕಾರ ಬಂದ ಮೇಲೆ 2014-21ರವರೆಗೆ 30 ಸಾವಿರ ಕಿಮೀ ವಿದ್ಯುದ್ದೀಕರಣ ಮಾಡಲಾಗಿದೆ. 1.60 ಲಕ್ಷ ಕಿಮೀ ಫೈಬರ್‌ ಕೇಬಲ್‌ ಅಳವಡಿಸಿ ಪ್ರತಿ ಗ್ರಾಮಕ್ಕೆ ಇಂಟರ್‌ನೆಟ್‌ ಕಲ್ಪಿಸಲಾಗಿದೆ. ದೇಶದ ನಾಯಕನಿಗೆ ಕಾಳಜಿಯಿದ್ದರೆ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಪ್ರಧಾನಿ ನರೇಂದ್ರ ತೋರಿಸಿದ್ದಾರೆ ಎಂದರು.

ಮಾಜಿ ಸಿಎಂ ಜಗದೀಶ ಶೆಟ್ಟರ ಮಾತನಾಡಿ, ನರೇಂದ್ರ ಮೋದಿ ಪ್ರಧಾನಿಯಾದ ನಂತರ ರೈಲ್ವೆ ಇಲಾಖೆ ಸಾಕಷ್ಟು ಪ್ರಗತಿ ಕಂಡಿದೆ. ಉತ್ತರ ಕರ್ನಾಟಕದಲ್ಲಿ ಇದೊಂದು ಉತ್ತಮ ರೈಲ್ವೆ ನಿಲ್ದಾಣ. ಈ ಭಾಗದ ಜನರ ಬಹಳ ದಿನದ ಕೂಗಿಗೆ ಸಿದ್ಧಾರೂಢರ ಹೆಸರು ನಾಮಕರಣ ಈಡೇರಿದೆ. ಸುರೇಶ ಅಂಗಡಿ ರಾಜ್ಯದ ರೈಲ್ವೆ ಅಭಿವೃದ್ಧಿಗೆ ಶ್ರಮಿಸಿದರು. ಪ್ಲಾಟ್‌ ಫಾರ್ಮ್ ನಂಬರ್‌ 1ರಲ್ಲಿ ಎಸ್ಕಲೇಟರ್‌ ಅಗತ್ಯವಾಗಿದೆ.

Advertisement

ನಿಲ್ದಾಣದಲ್ಲಿ ಬ್ಯಾಟರಿ ಆಧಾರಿತ ವಾಹನಗಳನ್ನು ಹೆಚ್ಚಿಸುವುದು ಸೇರಿದಂತೆ ಕೆಲ ಬೇಡಿಕೆಗಳನ್ನು ಸಚಿವರಿಗೆ ಸಲ್ಲಿಸಿದರು. ಉಸ್ತುವಾರಿ ಸಚಿವ ಹಾಲಪ್ಪ ಆಚಾರ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ತು ಸದಸ್ಯ ಎಸ್‌.ವಿ.ಸಂಕನೂರ, ಪ್ರದೀಪ ಶೆಟ್ಟರ, ಮಹಾಪೌರ ಈರೇಶ ಅಂಚಟಗೇರಿ, ಉಪ ಮಹಾಪೌರ ಉಮಾ ಮುಕುಂದ, ಸದಸ್ಯರಾದ ರಾಜಣ್ಣ ಕೊರವಿ, ವೀರಣ್ಣ ಸವಡಿ, ಶಿವು ಮೆಣಸಿನಕಾಯಿ, ರೂಪಾ ಶೆಟ್ಟಿ,
ಸಂತೋಷ ಚವ್ಹಾಣ ಇದ್ದರು.

ನಿವಾಸಿಗಳಿಗೆ ಅನುಕೂಲ ಮಾಡಿಕೊಡಿ: ಪ್ರಸಾದ
ಶಾಸಕ ಪ್ರಸಾದ ಅಬ್ಬಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಹೊಸ ರೂಪ ತಂದುಕೊಟ್ಟಿದೆ. ವಿಮಾನ ನಿಲ್ದಾಣಕ್ಕೂ ಕಡಿಮೆಯಿಲ್ಲ. ಮೂರು ಪ್ರವೇಶ ದ್ವಾರ ಉತ್ತಮವಾಗಿದೆ. ಕನ್ಯಾನಗರ ರಾಜಗೋಪಾಲ, ಸುಡುಗಾಡ ಚಾಳ ಈ ಭಾಗದಲ್ಲಿ 70-80 ವರ್ಷದಿಂದ ವಾಸ ಮಾಡುತ್ತಿದ್ದರು. ಇವರಿಗಾಗಿ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗಿದೆ.

ರೈಲ್ವೆ ಇಲಾಖೆ ತಮ್ಮ ಆಸ್ತಿ ಎಂದು ಗೊಂದಲ ಮೂಡಿಸಲಾಗುತ್ತಿದೆ. ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕರೊಂದಿಗೆ ಸಭೆ ಕರೆಯಬೇಕು. ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗ ಆದಷ್ಟು ಬೇಗ ನೆರವೇರಬೇಕು ಎಂದು ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next