Advertisement

ರೈಲಿನಲ್ಲಿ ಅವಘಡಗಳು: ಪ್ರಾಣದ ಜತೆ ಚೆಲ್ಲಾಟ ಬೇಡ 

12:10 PM Nov 07, 2018 | Team Udayavani |

ಮುಂಬಯಿಯ ಲೋಕಲ್‌ ರೈಲುಗಳನ್ನು ಈ ನಗರದ ಜೀವನಾಡಿ ಎನ್ನುತ್ತೇವೆ. ಲೋಕಲ್‌ ರೈಲು ಸೇವೆ ಇಲ್ಲದ ಮುಂಬಯಿಯನ್ನು ಕಲ್ಪಿಸಿಕೊಳ್ಳುವುದು ಕೂಡಾ ಅಸಾಧ್ಯ. ಜನರ ಬದುಕಿನಲ್ಲಿ ಈ ಸಾರಿಗೆ ವ್ಯವಸ್ಥೆ ಆ ರೀತಿ ಬೆಸೆದುಕೊಂಡಿದೆ.ಆದರೆ ಅದೇ ಜೀವನಾಡಿ ಕೆಲವೊಮ್ಮೆ ಜೀವ ಹಂತಕನಾಗುತ್ತಿರುವುದು ಮಾತ್ರ ದುರದೃಷ್ಟಕರ. ಕಳೆದ ಗುರುವಾರ ಖಾಸಗಿ ಕಂಪೆನಿಯೊಂದರಲ್ಲಿ ನೌಕರಿ ಮಾಡುತ್ತಿರುವ ಕನ್ನಡಿಗ ಯುವಕನೊಬ್ಬ ಲೋಕಲ್‌ ರೈಲಿನಿಂದ ಬಿದ್ದು ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿರುವುದು ನಿಜಕ್ಕೂ ದುಃಖದ ಸಂಗತಿ. ಇದು ಸೀತಾರಾಮ್‌ ಪೂಜಾರಿ ಒಬ್ಬರ ನೋವಲ್ಲ. ಈ ರೀತಿ ರೈಲಿನಿಂದ ನಿತ್ಯ ಬಿದ್ದು ಗಾಯಗೊಳ್ಳುವ ಮತ್ತು ಸಾಯುವ ಅನೇಕ ಮಂದಿಯಿದ್ದಾರೆ. ರೈಲುಗಳಲ್ಲಿರುವ ವಿಪರೀತ ನೂಕುನುಗ್ಗಲು ಇಂಥ ಅವಘಡಗಳಿಗೆ ಕಾರಣ ಎನ್ನುವುದು ನಿಜವಾಗಿದ್ದರೂ ಇದೇ ವೇಳೆ ನಾವು ಕೂಡಾ ಅಪಾಯಗಳನ್ನು ಆಹ್ವಾನಿಸಿಕೊಳ್ಳುತ್ತೇವೆ ಎನ್ನುವುದು ನಿರಾಕರಿಸಲಾಗದ ವಾಸ್ತವ. 

Advertisement

ಕಳೆದ ವರ್ಷವೊಂದರಲ್ಲೇ ಲೋಕಲ್‌ ರೈಲುಗಳು 3014 ಮಂದಿಯನ್ನು ಬಲಿಪಡೆದುಕೊಂಡಿವೆ ಎಂದು ತಿಳಿಸುತ್ತದೆ ಒಂದು ವರದಿ. ಅರ್ಥಾತ್‌ ಸರಾಸರಿಯಾಗಿ ನಿತ್ಯ 10 ಮಂದಿ ಲೋಕಲ್‌ ರೈಲುಗಳಲ್ಲಿ ಪ್ರಾಣ ಕಳೆದುಕೊಂಡಂತಾಯಿತು. ಈ ವರ್ಷದಲ್ಲೇ ಜನವರಿಯಿಂದ ಜುಲೈ ತನಕ 406 ಮಂದಿ ಬಲಿಯಾಗಿದ್ದಾರೆ. ಬರೀ ಒಂದು ವರ್ಷದಲ್ಲಿ ಇಷ್ಟೊಂದು ಅಮೂಲ್ಯ ಜೀವಗಳು ರೈಲುಗಳಿಗೆ ಬಲಿಯಾಗುತ್ತಿವೆ ಎನ್ನುವುದು ಖಂಡಿತ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ. ಜಗತ್ತಿನಲ್ಲೇ ಲೋಕಲ್‌ ರೈಲು ಜಾಲಗಳಲ್ಲಿ ಅತಿ ಹೆಚ್ಚು ಸಾವು ಸಂಭವಿಸುತ್ತಿರುವುದು ಮುಂಬಯಿಯಲ್ಲಿ ಎನ್ನುವ ವರದಿ ನಮ್ಮನ್ನಾಳುವವರಿಗೆ ಎಚ್ಚರಿಸಬೇಕಿತ್ತು. ಆದರೆ ರೈಲ್ವೇ ಇಲಾಖೆಯಾಗಲಿ ಸರಕಾರವಾಗಲಿ ಈ ಭಯಾನಕ ಸಾವಿನ ವರದಿಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ. ಪರಿಗಣಿಸಿದ್ದರೆ ಈಗಲೂ ಲೋಕಲ್‌ರೈಲುಗಳಲ್ಲಿ ಜನರು ಬಾವಲಿಗಳಂತೆ ನೇತಾಡಿಕೊಂಡು ಪ್ರಯಾಣಿಸುವ ಪ್ರಮೇಯ ಬರುತ್ತಿರಲಿಲ್ಲ. ಹಾಗೆಂದು ಎಲ್ಲ ಸಾವುಗಳಿಗೆ ರೈಲುಗಳನ್ನು ದೂರಿ ಪ್ರಯೋಜನವಿಲ್ಲ. ಹಲವು ಪ್ರಕರಣಗಳಲ್ಲಿ ಜನರೇ ಅಪಾಯವನ್ನು ಆಹ್ವಾನಿಸಿಕೊಳ್ಳುತ್ತಿರುವುದನ್ನು ನಿತ್ಯ ಕಾಣುತ್ತಿದ್ದೇವೆ. ರೈಲು ಹಳಿಗಳನ್ನು ದಾಟಿಕೊಂಡು ಹೋಗಬಾರದು ಎಂಬ ನಿಯಮವೇ ಇದ್ದರೂ ಬಹುತೇಕ ಎಲ್ಲ ಲೋಕಲ್‌ ರೈಲು ನಿಲ್ದಾಣಗಳಲ್ಲಿ ಈ ನಿಯಮ ಸಾರಾಸಗಟಾಗಿ ಉಲ್ಲಂಘನೆಯಾಗುತ್ತಿದೆ. ಅದೇ ರೀತಿ ರೈಲುಗಳ ಟಾಪಿನ ಮೇಲೇರಿ ಪ್ರಯಾಣಿಸುವ ಸಾಹಸವಂತರೂ ಇಲ್ಲದಿಲ್ಲ. 

ಪರಿಸ್ಥಿತಿಯಲ್ಲಿ ಬದಲಾಗಬೇಕಾದರೆ ಮುಂಬಯಿಯ ಲೋಕಲ್‌ ರೈಲು ಜಾಲದಲ್ಲಿ ಆಮೂಲಾಗ್ರವಾದ ಸುಧಾರಣೆಯಾಗಬೇಕು. ಜನ ದಟ್ಟಣೆಯ ವೇಳೆಯಲ್ಲಿ ಸಾಧ್ಯವಾದಷ್ಟು ಹೆಚ್ಚು ರೈಲುಗಳನ್ನು ಓಡಿಸುವ ಕೆಲಸವಾಗಬೇಕು. ಆದರೆ ಅದಕ್ಕೆ ಈಗ ಇರುವ ಹಳಿಗಳು ಸಾಕಾಗುವುದಿಲ್ಲ. ಪಶ್ಚಿಮ ಮತ್ತು ಮಧ್ಯ ರೈಲ್ವೆಗೆ ಲೋಕಲ್‌ ಜಾಲಕ್ಕೆ ಇನ್ನೆರಡು ಹಳಿಗಳನ್ನು ಸೇರಿಸುವ ಬಹುಕಾಲದ ಪ್ರಸ್ತಾವ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ರೈಲು ನಿಲ್ದಾಣಗಳ ಮೂಲಸೌಕರ್ಯದಲ್ಲೂ ಇನ್ನಷ್ಟು ಸುಧಾರಣೆಯಾಗುವ ಅಗತ್ಯವಿದೆ. ಕೆಲವು ಮುಖ್ಯ ರೈಲುಗಳಲ್ಲಿ ಎಸ್ಕಲೇಟರ್‌ನಂಥ ಸೌಲಭ್ಯ ಬಂದಿದೆ ನಿಜ. ಎಲ್ಲ ರೈಲು ನಿಲ್ದಾಣಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಿದರೆ ಫ‌ೂಟ್‌ಓವರ್‌ ಬ್ರಿಜ್‌ಗಳಲ್ಲಿ ಆಗುವ ನೂಕುನುಗ್ಗಲನ್ನು ತಪ್ಪಿಸಬಹುದು. 

ರೈಲು ಹಳಿ ಪಕ್ಕದ ಭೂಮಿಯ ಅತಿಕ್ರಮಣ ರೈಲ್ವೇ ಎದುರಿಸುತ್ತಿರುವ ಇನ್ನೊಂದು ದೊಡ್ಡ ಸಮಸ್ಯೆ. ಈಗ ಬೇಲಿ ಹಾಕಿ ಅತಿಕ್ರಮಣವನ್ನು ತಡೆಯಲು ಪ್ರಯತ್ನಿಸಲಾಗಿದೆ. ಆದರೆ ಅಲ್ಲಲ್ಲಿ ಈ ತಡೆಬೇಲಿಯನ್ನು ಮುರಿದು ಜನರು ಹಳಿಗೆ ಬರುತ್ತಿರುವುದ ಉಕಾಣಿಸುತ್ತಿದೆ. ಇಲ್ಲಿ ಎದ್ದುಕಾಣುತ್ತಿರುವ ಅಂಶ ಎಂದರೆ ಸರಕಾರ ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಜನರು ಅವುಗಳನ್ನು ಉಲ್ಲಂ ಸಲು ಪ್ರಯತ್ನಿಸುವುದು. ಕಾನೂನು ಮುರಿಯುವುದೇ ಸಾಹಸ ಎಂಬ ನಮ್ಮ ಜನರ ಮನೋಧರ್ಮ ಇನ್ನೂ ಬದಲಾಗಿಲ್ಲ ಎನ್ನುವುದು ವಿಷಾದಕರ ಅಂಶ. ಅವಘಡ ಸಂಭವಿಸಿದರೆ ಸರಕಾರವೇನೋ ಒಂದಷ್ಟು ಮೊತ್ತ ಪರಿಹಾರ ನೀಡಿ ಕೈತೊಳೆದುಕೊಳ್ಳಬಹುದು. ಆದರೆ ಹೋದ ಜೀವವನ್ನು ಮತ್ತು ಮುರಿದ ಅಂಗಾಂಗಳನ್ನು ಮರಳಿ ತರಲು ಈ ಹಣದಿಂದ ಅಸಾಧ್ಯ. ಹೀಗಾಗಿ ಜನರು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಅಂತೆಯೇ ಸರಕಾರವೂ ಜನರ ಪ್ರಾಣ ಅಮೂಲ್ಯ ಎಂದು ಪರಿಗಣಿಸಿ ರೈಲುಗಳಿಂದಾಗುವ ಅವಘಡಗಳನ್ನು ತಪ್ಪಿಸುವುದನ್ನು ಆದ್ಯತೆಯಾಗಿ ಪರಿಗಣಿಸಬೇಕು. 

Advertisement

Udayavani is now on Telegram. Click here to join our channel and stay updated with the latest news.

Next