ಪಟ್ನಾ : ಇಂದು ನಸುಕಿನ ವೇಳೆ ರೈಲು ಅಪಘಾತ ಉಂಟು ಮಾಡುವ ಉದ್ದೇಶದಿಂದ ರೈಲು ಹಳಿಗಳ ಮೇಲೆ ಭಾರೀ ದೊಡ್ಡ ಗಾತ್ರದ ಎರಡು ಕಲ್ಲು ಚಪ್ಪಡಿ ಇರಿಸಲಾದುದನ್ನು ಸಕಾಲದಲ್ಲಿ ಪತ್ತೆ ಹಚ್ಚಲಾದ ಕಾರಣ ಸೋನೆಪುರ ರೈಲ್ವೆ ವಿಭಾಗದಲ್ಲಿ ಇಂದು ಭಾರೀ ದೊಡ್ಡ ರೈಲು ಅವಘಡ ಸಂಭವಿಸುವುದು ಅದೃಷ್ಟವಶಾತ್ ತಪ್ಪಿದೆ.
ಹೀರಾಖಂಡ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ಸಂಭವಿಸಿದ ದುರಂತದಲ್ಲಿ 39 ಜನರು ಮಡಿದಿರುವ ಬೆನ್ನಿಗೇ ಸಂಭವಿಸಲಿದ್ದ ಇನ್ನೊಂದು ಭಾರೀ ದೊಡ್ಡ ದುರಂತ ಕಾವಲು ಸಿಬಂದಿಗಳು ನಡೆಸಿದ ಹಳಿ ತಪಾಸಣೆಯಿಂದ ತಪ್ಪಿರುವುದು, ಅಮಾಯಕ ಪ್ರಯಾಣಿಕರ ಅತ್ಯಮೂಲ ಜೀವಗಳು ಉಳಿದಿರುವುದು ಪೂರ್ವ ಮಧ್ಯ ರೈಲು ವಿಭಾಗಕ್ಕೆ ಸಮಾಧಾನ ತಂದಿರುವ ವಿಷಯವಾಗಿದೆ.
ಮಧ್ಯರಾತ್ರಿ ಕಳೆದು 20 ನಿಮಿಷಳಾದ ಹೊತ್ತಿಗೆ ರೈಲು ಹಳಿ ತಪಾಸಣೆಯ ಸಿಬಂದಿಗಳು ತಪಾಸಣೆ ನಡೆಸುತ್ತಿದ್ದಾಗ ಸೋನೇಪುರ ವಿಭಾಗಕ್ಕೆ ಒಳಪಡುವ ಸತಾಜಾಘಾಟ್ ಮತ್ತು ದಲಸಿಂಗ್‌ಸರಾಯ್ ನಡುವೆ ರೈಲು ಹಳಿಗಳ ಮೇಲೆ ಎರಡು ದೊಡ್ಡ ಕಲ್ಪು ಚಪ್ಪಡಿ ಕಂಡು ಬಂತು. ಅದನ್ನು ಅವರು ತೆರವುಗೊಳಿಸಲು ಯತ್ನಿಸಿದಾಗ ಅಲ್ಲೇ ಕತ್ತಲೆಯಲ್ಲಿ ಅಡಗಿಕೊಂಡಿದ್ದ ನಾಲ್ವರು ದುಷ್ಕರ್ಮಿಗಳು ಇವರನ್ನು ಆಚೆಗಟ್ಟಲು ಮುಂದಾದರು.
ಈ ದುಷ್ಕರ್ಮಿಗಳ ಮುಂದೆ ತಾವು ಏನೂ ಮಾಡುವಂತಿಲ್ಲ ಎಂದು ತಿಳಿದ ಒಡನೆಯೇ ಈ ಕಾವಲು ಸಿಬಂದಿಗಳು ದಲಸಿಂಗ್‌ಸರಾಯ್ ಸ್ಟೇಶನ್‌ಗೆ ಧಾವಿಸಿ ಆರ್ ಪಿ ಎಫ್, ಜಿ ಆರ್ ಪಿ ಮತ್ತು ತಾಂತ್ರಿಕ ಸಿಬಂದಿಗಳೊಂದಿಗೆ ರಾತ್ರಿ 1.22ರ ಹೊತ್ತಿಗೆ ಸ್ಥಳಕ್ಕೆ ಮರಳಿ ಹಳಿಯ ಮೇಲಿದ್ದ ಕಲ್ಪು ಚಪ್ಪಡಿಗಳನ್ನು ತೆರವು ಗೊಳಿಸಿದರು.
ಸ್ವಲ್ಪವೇ ಹೊತ್ತಿನಲ್ಲಿ ಈ ಮಾರ್ಗದಲ್ಲಿ ಮುಜಫರಪುರ – ಭಾಗಲ್‌ಪುರ ಇಂಟರ್‌ಸಿಟಿ ರೈಲು ಹಾದು ಹೋಗುವುದಿತ್ತು. ಹಳಿ ಸುರಕ್ಷೆಯನ್ನು ಪುನರ್ ಸ್ಥಾಪಿಸಿದ ಬಳಿಕವೇ ರೈಲಿಗೆ ಗ್ರೀನ್ ಸಿಗ್ನಲ್ ನೀಡಲಾಯಿತು ಎಂದು ರೈಲ್ವೇ ಮೂಲಗಳು ತಿಳಿಸಿವೆ.
ಕಳೆದ ನವೆಂಬರ್ 20ರಂದು ಇಂದೋರ್ ಪಟ್ನಾ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ 150 ಪ್ರಯಾಣಿಕರು ಮೃತಪಟ್ಟಿದ್ದರು. ಆ ದುರಂತವು ಭಯೋತ್ಪಾದಕ ಕೃತ್ಯವಾಗಿತ್ತೆಂದು ಅನಂತರ ಗೊತ್ತಾಗಿತ್ತು.
ಆ ಘಟನೆಗೆ ಸಂಬಂಧಿಸಿದಂತೆ ಐಎಸ್‌ಐ ಜತೆಗೆ ನಂಟು ಹೊಂದಿದ್ದ ಮೂವರು ಕ್ರಿಮಿನಲ್‌ಗಳನ್ನು ಬಿಹಾರದ ಚಂಪಾರಣ್ ಜಿಲ್ಲೆಯಲ್ಲಿ ಸೆರೆ ಹಿಡಿಯಲಾಗಿತ್ತು. ಈ ಪೈಕಿ ಮೋತಿ ಪಾಸ್ವಾನ್ ಎಂಬಾತ ರೈಲು ಭಯೋತ್ಪಾದನೆ ಕೃತ್ಯದಲ್ಲಿ ತಾನು ಶಾಮೀಲಾಗಿದ್ದುದನ್ನು ಒಪ್ಪಿಕೊಂಡಿದ್ದ.