“ಜೂನ್ 23, 2017 ರಂದು ಚಿತ್ರಕ್ಕೆ ಮುಹೂರ್ತ. ಜೂನ್ 23, 2018 ರಂದು ಚಿತ್ರದ ಟ್ರೇಲರ್ ಬಿಡುಗಡೆ. ಒಂದು ವರ್ಷದಲ್ಲಿ ಸಿನಿಮಾ ಶುರುವಾಗಿ, ಮುಗಿದು ಇದೀಗ ಬಿಡುಗಡೆ ಹಂತಕ್ಕೆ ಬಂದಿದೆ…’
– ಹೀಗೆ ಖುಷಿಯಿಂದ ಹೇಳಿಕೊಂಡರು ನಿರ್ದೇಶಕ ಮೋಹನ್ ಕಾಮಾಕ್ಷಿ. ಅವರು ಹೇಳಿಕೊಂಡಿದ್ದು, ತಮ್ಮ ನಿರ್ದೇಶನದ “ಆದಿ ಪುರಾಣ’ ಚಿತ್ರದ ಬಗ್ಗೆ. ಅಂದು ಇಡೀ ಚಿತ್ರತಂಡ ಸಂತಸದಲ್ಲಿತ್ತು. ಅದಕ್ಕೆ ಕಾರಣ, ಚಿತ್ರದ ಟ್ರೇಲರ್‌ಗೆ ಉಪೇಂದ್ರ ಚಾಲನೆ ಕೊಟ್ಟಿದ್ದು. ಶೂಟಿಂಗ್ ಸೆಟ್‌ಗೆ ಹೋಗಿದ್ದ ಚಿತ್ರತಂಡವನ್ನು ಪ್ರೀತಿಯಿಂದ ಬರಮಾಡಿಕೊಂಡ ಉಪೇಂದ್ರ, “ಆದಿಪುರಾಣ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಆ ಖುಷಿ ಹಂಚಿಕೊಳ್ಳುವುದರ ಜೊತೆಗೆ ಅಂದು ಟ್ರೇಲರ್ ತೋರಿಸಿ, ಮಾತಿಗೆ ನಿಂತರು ನಿರ್ದೇಶಕರು.
“ಚಿತ್ರ ಸೆನ್ಸಾರ್‌ಗೆ ಹೋಗಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಜುಲೈನಲ್ಲಿ ಬಿಡುಗಡೆಯಾಗಲಿದೆ. ಈ ಕಥೆಗೆ ಕಾಶೀನಾಥ್ ಅವರು ಸ್ಫೂರ್ತಿ. ಅವರಿಂದಲೇ ಟ್ರೇಲರ್ ಬಿಡುಗಡೆ ಮಾಡಿಸುವ ಆಸೆ ಇತ್ತು. ಆದರೆ, ಆಗಲಿಲ್ಲ. ಅವರ ಶಿಷ್ಯ ಉಪೇಂದ್ರ ಅವರು ಟ್ರೇಲರ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ. ಇದು ಈಗಿನ ಯುವ ಮನಸ್ಸಿನ ತಳಮಳ ಕುರಿತಾದ ಚಿತ್ರ. ಪಕ್ಕಾ ಮನರಂಜನೆ ಚಿತ್ರವಾಗಿದ್ದು, ಎಲ್ಲಾ ವರ್ಗದವರು ನೋಡಬಹುದಾದ ಚಿತ್ರ’ ಅಂತ ವಿವರ ಕೊಟ್ಟರು ನಿರ್ದೇಶಕರು.
ನಿರ್ಮಾಪಕ ಶಮಂತ್ ಮಾತನಾಡಿ, “ಈಗಾಗಲೇ ಟ್ರೇಲರ್‌ಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಇಲ್ಲಿ ಕಾಲೇಜ್ ಹುಡುಗನ ಓದು, ಲವ್ವು, ಮದುವೆ ಮತ್ತು ಆ ನಂತರದಲ್ಲಿ ನಡೆಯುವ ಒದ್ದಾಟಗಳು ಚಿತ್ರದ ಹೈಲೆಟ್. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಒಂದೊಂದೇ ಹಾಡನ್ನು ವಿಶೇಷವಾಗಿ ಬಿಡುಗಡೆ ಮಾಡಲು ಯೋಚಿಸಿದ್ದೇವೆ. ಈ ಬಾರಿ, ನಮ್ಮ ಸಂಸ್ಥೆಯಿಂದ ಅಪ್ಪಟ ಮನರಂಜನೆ ಚಿತ್ರ ಹೊರಬರುತ್ತಿದೆ. ಪಕ್ಕಾ ಯೂಥ್ ಸಿನಿಮಾ ಇದಾಗಿದ್ದು, ಆರಂಭದಿಂದ ಅಂತ್ಯದವರೆಗೆ ನಕ್ಕು ಹೊರಬರುವಂತಹ ಚಿತ್ರ ಇದಾಗಲಿದೆ’ ಎಂಬ ಗ್ಯಾರಂಟಿ ಕೊಟ್ಟರು ಶಮಂತ್.
ನಾಯಕ ಶಶಾಂಕ್ ಅವರಿಗೆ ಒಂದು ವರ್ಷ ಹೇಗೆ ಕಳೆಯಿತೆಂಬುದೇ ಗೊತ್ತಾಗಲಿಲ್ಲವಂತೆ. ಮೊದಲ ಚಿತ್ರವಾದ್ದರಿಂದ ಖುಷಿ ಮತ್ತು ಭಯ ಎರಡೂ ಇದೆಯಂತೆ. “ಒಳ್ಳೆಯ ಚಿತ್ರ ಮಾಡಿದ ಖುಷಿ ಒಂದಡೆಯಾದರೆ, ಜನರು ಹೇಗೆ ಸ್ವೀಕರಿಸುತ್ತಾರೋ ಎಂಬ ಭಯ ಇನ್ನೊಂದೆಡೆ. ನಾನು ಉಪೇಂದ್ರ ಅವರ ಅಭಿಮಾನಿ, ನನ್ನ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಅವರು ಶುಭಕೋರಿದ್ದು ಮರೆಯದ ಕ್ಷಣ. ಟೀಸರ್‌ಗೆ ಮೆಚ್ಚುಗೆ ಸಿಕ್ಕಿದ್ದು, ಈಗ ಟ್ರೇಲರ್‌ಗೂ ಎಲ್ಲೆಡೆಯಿಂದ ಉತ್ತಮ ಮಾತುಗಳು ಕೇಳಿಬರುತ್ತಿವೆ’ ಎಂಬುದು ಶಶಾಂಕ್ ಮಾತು.
ನಾಯಕಿ ಮೋಕ್ಷ ಕುಶಾಲ್ ಸಿನಿಮಾ ಯಾವಾಗ ರಿಲೀಸ್ ಆಗುತ್ತೋ ಎಂಬುದನ್ನು ಎದುರು ನೋಡುತ್ತಿದ್ದಾರಂತೆ. ಇನ್ನುತಾಯಿಯಾಗಿ ನಟಿಸಿರುವ ವತ್ಸಲಾ ಮೋಹನ್ ಪಾತ್ರ ಕುರಿತು ಹೇಳಿಕೊಂಡರು. ಸಂಗೀತ ನಿರ್ದೇಶಕ ಸಿದ್ಧಾರ್ಥ, ವಿಕ್ರಮ್ ಹಾಡು ಹುಟ್ಟಿದ ಬಗ್ಗೆ ವಿವರಿಸಿದರು. ಅಂದು ನಟ ಕಿರಣ್, ನಿರ್ಮಾಪಕ ಮನುಗೌಡ ಟ್ರೇಲರ್ ವೀಕ್ಷಿಸಿ, ಚಿತ್ರತಂಡಕ್ಕೆ ಹಾರೈಸಿದರು.