ಕುಣಿಗಲ್: ಮಾರ್ಕೋನಹಳ್ಳಿ ಕೋಡಿ ಹಳ್ಳದ ನೀರಿನಲ್ಲಿ ಆಟವಾಡಲು ಹೋದ ನಾಲ್ವರು ಕೊಚ್ಚಿ ಹೋದ ದುರಂತ ಘಟನೆ ಭಾನುವಾರ ನಡೆದಿದೆ.
ಕುಣಿಗಲ್ ಪಟ್ಟಣದ ಕೋಟೆ ಪ್ರದೇಶದ ಪರ್ವಿನ್ ತಾಜ್ ( 23) , ಸಾದೀಯ (17) ಎಡಿಯೂರು ಹೋಬಳಿ ಬೀರಗಾನಹಳ್ಳಿ ಗ್ರಾಮದ ರಾಜು (23), ಅಪ್ಪು (20) ನೀರಿನಲ್ಲಿ ಕೊಚ್ಚಿಹೋದವರು ಎಂದು ತಿಳಿದು ಬಂದಿದೆ.
ಘಟನೆ ವಿವರ : ಮಾಕೋರ್ನಹಳ್ಳಿ ಜಲಾಶಯವು ತುಂಬಿಕೊಂಡಿರುವ ಹಿನ್ನಲೆಯಲ್ಲಿ ಜಲಾಶಯಕ್ಕೆ ಪ್ರವಾಸಿಗರು ಹೆಚ್ಚಾಗುತ್ತಿದ್ದು, ಭಾನುವಾರ ರಜೆ ಇದ್ದ ಹಿನ್ನಲೆಯಲ್ಲಿ ಕೋಟೆ ಪ್ರದೇಶದ ಎರಡು ಕುಟುಂಬಗಳು ಜಲಾಶಯಕ್ಕೆ ಬಂದು ಮಾರ್ಕೋನಹಳ್ಳಿ ಬಲಭಾಗದ ಕೋಡಿ ಹಳ್ಳದಲ್ಲಿ ಆಟವಾಡುತ್ತಿದ್ದರು.
ಆಟವಾಡುತ್ತಾ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಧಿಡೀರನೇ ಮಾರ್ಕೋನಹಳ್ಳಿ ಜಲಾಶಯಕ್ಕೆ ಎರಡು ಸಾವಿರ ಕ್ಯೂಸೆಕ್ಸ್ ಒಳ ಹರಿವು ಹೆಚ್ಚಾಗಿ,ಕೋಡಿ ಸೈಪೋನ್ ನಲ್ಲಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನಲೆಯಲ್ಲಿ ನಾಲ್ವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಪ್ರಾಣಾಪಾಯದಿಂದ ಬಾಲಕ ಪಾರು: ನೀರಿನಲ್ಲಿ ಆಟವಾಡುತ್ತಿದ್ದ ಬಾಲಕ 11 ವರ್ಷದ ತಬ್ರೇಜ್ ನೀರಿನಲ್ಲಿ ಕೊಚ್ಚಿಕೊಂಡು ಹೋಗುವಾಗ ಕುಟುಂಬಸ್ಥರು ಎಳೆದುಕೊಂಡ ಹಿನ್ನಲೆಯಲ್ಲಿ ಪ್ರಾಣಾಪಯದಿಂದ ಪಾರಾಗಿದ್ದಾನೆ.
ಸ್ಥಳಕ್ಕೆ ಶಾಸಕ ಡಾ.ಹೆಚ್.ಡಿ.ರಂಗನಾಥ್ ಬೇಟಿ ನೀಡಿ ಪರಿಶೀಲಿಸಿ, ನೀರಿನಲ್ಲಿ ಕೊಚ್ಚಿ ಹೋದ ನಾಲ್ವರ ಪತ್ತೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದು, ಅಗ್ನಿ ಶಾಮಕ ಸಿಬ್ಬಂದಿಗಳು, ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.