Advertisement

ಫರಂಗಿಪೇಟೆ-ಉಪ್ಪಿನಂಗಡಿ: ಪ್ರತಿ ಜಂಕ್ಷನ್‌ನಲ್ಲೂ ಟೆನ್ಶನ್‌!

11:27 PM Mar 08, 2021 | Team Udayavani |

ಈ ಹೆದ್ದಾರಿಯಲ್ಲಿ ಜಂಕ್ಷನ್‌ಗಳ ಸಮಸ್ಯೆ ಖಂಡಿತಾ ಸಣ್ಣದಲ್ಲ. ಪ್ರತಿ ಜಂಕ್ಷನ್‌ಗಳೂ ಅಪಾಯಕಾರಿ ಎನಿಸತೊಡಗಿವೆ. ಇಲ್ಲಿ ವಹಿಸಬೇಕಾದ ಕನಿಷ್ಠ ಸುರಕ್ಷತಾ ಕ್ರಮಗಳನ್ನೂ ಪಾಲಿಸಿಲ್ಲ. ಆದ ಕಾರಣ ನಿತ್ಯವೂ ಜನರು ಆತಂಕದಿಂದಲೇ ಈ ಜಂಕ್ಷನ್‌ಗಳನ್ನು ದಾಟಬೇಕು. ಈಗಾಗಲೇ ಎಲ್ಲ ಜಂಕ್ಷನ್‌ಗಳು ಅಪಘಾತಗಳ ಕೇಂದ್ರಗಳಾಗಿ ಮಾರ್ಪಟ್ಟಿವೆ. ಆದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಟೀಕೆ.

Advertisement

ಬಂಟ್ವಾಳ: ಮಂಗಳೂರು- ಬೆಂಗಳೂರು ರಾ. ಹೆ. 75 ಸಂಪೂರ್ಣ ಮೇಲ್ದರ್ಜೆಗೇರದಿರುವುದು ಈಗಾಗಲೇ ವಿವರಿಸಿದಂತೆ ಮೊದಲ ಸಮಸ್ಯೆ. ಮತ್ತೂಂದು ಸಮಸ್ಯೆಯೆಂದರೆ ಜಂಕ್ಷನ್‌ಗಳಲ್ಲಿನ ಅವ್ಯವಸ್ಥೆ.

ಹೆದ್ದಾರಿಯ ಪ್ರಮುಖ ರಸ್ತೆಗಳು ಸೇರುವ ಜಂಕ್ಷನ್‌ಗಳಲ್ಲಿ ಸಮರ್ಪಕ ವ್ಯವಸ್ಥೆಯನ್ನು ಕಲ್ಪಿಸಿಯೇ ಇಲ್ಲ. ಹಾಗಾಗಿ ಒಂದಲ್ಲಾ ಒಂದು ಜಂಕ್ಷನ್‌ಗಳಲ್ಲಿ ಆಗಾಗ್ಗೆ ಅಪಘಾತ ಘಟಿಸುತ್ತಲೇ ಇದೆ.

ಫರಂಗಿಪೇಟೆ, ಕೈಕಂಬ, ಬಿ.ಸಿ.ರೋಡು ಸರ್ಕಲ್‌, ಮೆಲ್ಕಾರ್‌, ಕಲ್ಲಡ್ಕ, ಮಾಣಿ, ನೆಕ್ಕಿಲಾಡಿ, ಉಪ್ಪಿನಂಗಡಿ ಮೊದಲಾದ ಜಂಕ್ಷನ್‌ಗಳಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಜಂಕ್ಷನ್‌ ಸಮೀಪಿಸುತ್ತಿದ್ದಂತೆ ವಾಹನ ಚಾಲಕರು ಯಾವ ದಿಕ್ಕಿನತ್ತ ಸಾಗಬೇಕೆಂದು ಗೊಂದಲಕ್ಕೊಳಗಾಗುವುದು ಖಚಿತ.

ಹೆದ್ದಾರಿಗಳೆಂದರೆ ವಾಹನಗಳು ವೇಗದಲ್ಲಿ ಸಂಚರಿ ಸುತ್ತಿರುತ್ತವೆ. ಆದ ಕಾರಣ ಇತರ ರಸ್ತೆಗಳಲ್ಲಿ ಬರುವ ವಾಹನಗಳು ಹೆದ್ದಾರಿಯನ್ನು ಸೇರಲು ಕೆಲವು ಸುರಕ್ಷತಾ ವ್ಯವಸ್ಥೆ ಬೇಕು. ಸರ್ವೀಸ್‌ ರಸ್ತೆಯ ಮೂಲಕ ಸ್ವಲ್ಪ ಸಾಗಿ ಬಳಿಕ ವಾಹನಗಳು ಹೆದ್ದಾರಿಯನ್ನು ಸೇರುವುದು ಕ್ಷೇಮ. ಆದರೆ ಫರಂಗಿಪೇಟೆಯಿಂದ ಉಪ್ಪಿನಂಗಡಿವರೆಗೆ ಅಂತಹ ಯಾವುದೇ ಸುರಕ್ಷತೆ ಕ್ರಮಗಳೇ ಇಲ್ಲ.

Advertisement

ಕಲ್ಲಡ್ಕ ಜಂಕ್ಷನ್‌: ಪ್ರಾಣಕ್ಕೇ ಕುತ್ತು!
ಕಲ್ಲಡ್ಕ ಜಂಕ್ಷನ್‌ ತೀರಾ ಅಪಾಯಕಾರಿ. ಇಲ್ಲಿ ವಿಟ್ಲ ಕ್ರಾಸ್‌ ಇದ್ದು, ಯಾವುದೇ ಸರ್ಕಲ್‌ ವ್ಯವಸ್ಥೆ ಇಲ್ಲ. ಎಲ್ಲ ಭಾಗಗಳಿಂದಲೂ ಒಟ್ಟಿಗೇ ನುಗ್ಗುವ ಪರಿಸ್ಥಿತಿ ಇದೆ. ಹೀಗಾಗಿ ಯಾವುದೇ ಸೂಚನೆಗಳಿಲ್ಲದೆ ವಾಹನಗಳು ನುಗ್ಗಿದ ಪರಿಣಾಮ ತಮಗೆ ಬೇಕಾದ ಕಡೆ ತಿರುಗಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಕೆಲವು ಸಮಯದ ಹಿಂದೆ ದ್ವಿಚಕ್ರ ಸವಾರನೊಬ್ಬ ಅಪಘಾತದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಜಂಕ್ಷನ್‌ನಲ್ಲಿ ಬ್ಯಾರಿಕೇಡ್‌ಗಳನ್ನು ಇಟ್ಟು ವಾಹನಗಳು ನಿಯಂತ್ರಿಸುತ್ತಿದ್ದಾರೆ. ಆದರೆ ಇದು ತಾತ್ಕಾಲಿಕ. ಶಾಶ್ವತ ಪರಿಹಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಾಗಲೀ, ಸ್ಥಳೀಯ ಆಡಳಿತವಾಗಲೀ ಪ್ರಯತ್ನಿಸದಿರುವುದು ಜನರ ಬೇಸರಕ್ಕೆ ಕಾರಣವಾಗಿದೆ.

ಎರಡು ಕಡೆ ಡಿವೈಡರ್‌ ತೆರೆಯುವ ಬೇಡಿಕೆ
ಫರಂಗಿಪೇಟೆಯಲ್ಲಿ ಪೇಟೆಯ ಮಧ್ಯದಲ್ಲಿ ಡಿವೈಡರ್‌ ತೆರೆದು ವಾಹನಗಳ ಸಾಗುವಿಕೆ ಅವಕಾಶ ಕಲ್ಪಿಸಿದ್ದರಿಂದ ಅಪಘಾತವಾಗುತ್ತಿದೆ ಎಂಬ ದೂರು ಬರುತ್ತಿದೆ. ಹಾಗಾಗಿ ವಾಹನಗಳ ನಿಯಂತ್ರಣಕ್ಕಾಗಿ ಬ್ಯಾರಿಕೇಡ್‌ಗಳನ್ನು ಇಡಲಾಗುತ್ತಿದೆ. ಹೀಗಾಗಿ ಈ ಡಿವೈಡರ್‌ ತೆರವನ್ನು ಮುಚ್ಚಿ, ಪೇಟೆಯ ಕೊನೆಯಲ್ಲಿ ಎರಡು ಕಡೆ ಡಿವೈಡರ್‌ ತೆರೆಯಬೇಕು ಎಂಬ ಒತ್ತಾಯವೂ ಇದೆ. ಈಗಾಗಲೇ ಈ ಕುರಿತು ಪದು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದು, ಗ್ರಾ.ಪಂ.ನಿಯೋಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿಗಳನ್ನು ಭೇಟಿಯಾಗಿ ಮನವಿ ನೀಡಿದೆ. ಇನ್ನೂ ಕಾರ್ಯಗತವಾಗಿಲ್ಲ.

ಇತರ ಜಂಕ್ಷನ್‌ಗಳಲ್ಲೂ ಅದೇ ಸಮಸ್ಯೆ
ಬಿ.ಸಿ.ರೋಡಿನ ಕೈಕಂಬ ಜಂಕ್ಷನ್‌ನಲ್ಲಿ ಪೊಳಲಿ ಭಾಗದ ರಸ್ತೆ ಸೇರುತ್ತಿದ್ದು, ಇಲ್ಲೂ ಸಾಕಷ್ಟು ಗೊಂದಲಗಳಿದೆ. ಬಿ.ಸಿ.ರೋಡು ಸರ್ಕಲ್‌ ಬಳಿ ಧರ್ಮಸ್ಥಳ, ಬಂಟ್ವಾಳ ಪೇಟೆಯ ರಸ್ತೆಗಳು ಹೆದ್ದಾರಿಯನ್ನು ಸೇರುತ್ತಿದ್ದು, ಮತ್ತೂಂದು ಭಾಗದಿಂದ ಗೂಡಿನಬಳಿ ಭಾಗದ ರಸ್ತೆಯೂ ಹೆದ್ದಾರಿಯನ್ನು ಸೇರುತ್ತಿದೆ. ಧರ್ಮಸ್ಥಳ, ಬಂಟ್ವಾಳ ಪೇಟೆಯ ರಸ್ತೆಯಲ್ಲಿ ಬಂದ ವಾಹನಗಳು ಹೆದ್ದಾರಿ ಸೇರುವ ವೇಳೆ ಹರಸಾಹಸ ಪಡಬೇಕಿದೆ.

ಮೆಲ್ಕಾರ್‌ನಲ್ಲಿ ಮುಡಿಪು ಭಾಗದ ರಸ್ತೆ ಹೆದ್ದಾರಿಯನ್ನು ಸೇರುತ್ತಿದ್ದು, ಇಲ್ಲೂ ವಾಹನಗಳು ಸಾಗಲು ಸರಿಯಾದ ಸುರಕ್ಷತಾ ವ್ಯವಸ್ಥೆಗಳಿಲ್ಲ. ಮಾಣಿಯಲ್ಲಿ ಪುತ್ತೂರು ಭಾಗದ ಹೆದ್ದಾರಿ ಸೇರುತ್ತಿದ್ದು, ಎರಡೂ ರಸ್ತೆಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಾಗುವುದರಿಂದ ವಾಹನಗಳು ಒಂದು ಭಾಗದಿಂದ ಮತ್ತೂಂದು ಭಾಗಕ್ಕೆ ಹೋಗುವಾಗಲೂ ಇದೇ ಪರಿಸ್ಥಿತಿ.

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next