Advertisement

ರಸ್ತೆ ಕಾಮಗಾರಿ ವಿಳಂಬದಿಂದ ಸಂಚಾರಕ್ಕೆ ಅಡ್ಡಿ

09:07 PM Nov 25, 2019 | Lakshmi GovindaRaj |

ಗುಂಡ್ಲುಪೇಟೆ: ಪಟ್ಟಣದ ಪ್ರಮುಖ ಜೋಡಿ ರಸ್ತೆ ಕಾಮಗಾರಿಯ ವಿಳಂಬದಿಂದಾಗಿ ಕಳೆದ ಒಂದೂವರೆ ವರ್ಷದಿಂದ ವಾಹನ ಸವಾರರು ಹಾಗೂ ಅಂಗಡಿ-ಮುಂಗಟ್ಟುಗಳನ್ನು ಹೊಂದಿರುವ ವ್ಯಾಪಾರಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಪಟ್ಟಣದ ಪ್ರವಾಸಿ ಮಂದಿರದಿಂದ ಶಿವಾನಂದ ವೃತ್ತದವರೆಗೆ ಜೋಡಿ ರಸ್ತೆಯನ್ನು ಎರಡು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಗಲೀಕರಣ ಕಾಮಗಾರಿ ಪ್ರಾರಂಭಿಸಲಾಯಿತು.

Advertisement

ಅಂದಿನ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಮೋಹನ ಕುಮಾರಿ ಭೂಮಿ ಪೂಜೆ ನೆರವೇರಿಸಿ, ಮೂರು ತಿಂಗಳಲ್ಲಿ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದ್ದರೂ ಸಹ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಈ ರಸ್ತೆಯಲ್ಲಿ ಸಂಚಾರ ಮಾಡುವ ವಾಹನ ಸವಾರರು ಹಾಗೂ ಈ ರಸ್ತೆಯಲ್ಲಿ ಅಂಗಡಿ ಮುಂಗಟ್ಟು ನಡೆಸುವ ವ್ಯಾಪಾರಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ಏಕಮುಖ ರಸ್ತೆಯಲ್ಲಿಯೇ ಸಂಚಾರ: ಡಾಂಬರು ಹಾಕದ ರಸ್ತೆಯಲ್ಲಿ ಲಾರಿ, ಆಟೋ ಮುಂತಾದ ವಾಹನಗಳು ನಿಲ್ಲುತ್ತಿದ್ದು, ಇನ್ನೊಂದು ಬದಿಯಲ್ಲಿ ಮಾತ್ರ ವಾಹನಗಳ ಸಂಚಾರ ಮಾಡಬೇಕಾಗಿದೆ. ಎದುರು ಬರುವ ವಾಹನಕ್ಕೆ ದಾರಿ ಕೊಡಲೂ ಸಾಧ್ಯವಾಗದೆ ಏಕಮುಖ ರಸ್ತೆಯಲ್ಲಿಯೇ ಸಂಚರಿಸಬೇಕಾಗಿದೆ. ಶಿವಾನಂದ ವೃತ್ತದ ಬಳಿ ಡಾಂಬರು ಕಿತ್ತು ಭಾರೀ ಹಳ್ಳವುಂಟಾಗಿದ್ದು, ಇದನ್ನು ದಾಟಲು ವಾಹನ ಸವಾರರು ಸರ್ಕಸ್‌ ಮಾಡಬೇಕಾಗಿದೆ.

ಇನ್ನೊಂದು ಬದಿಯಲ್ಲಿ ಅಳವಡಿಸಿದ್ದ ಯುಜಿಡಿ ಸಂಪೂರ್ಣವಾಗದೇ ಕಾಮಗಾರಿಯು ತೀವ್ರ ವಿಳಂಬವಾಗಿದೆ. ಈಗಾಗಲೇ ಒಂದು ಬದಿಯಲ್ಲಿ ಮಾತ್ರ ಒಳ ಚರಂಡಿ, ಪಾದಚಾರಿ ಮಾರ್ಗ ಹಾಗೂ ರಸ್ತೆಗೆ ಡಾಂಬರೀಕರಣ ಮಾಡಿ, ಕಾಮಗಾರಿ ನಿಲ್ಲಿಸಿದ್ದಾರೆ. ಆದರೆ, ನೂತನ ರಸ್ತೆಯು ಹೆಚ್ಚಿನ ವಾಹನಗಳ ಒತ್ತಡವನ್ನು ತಾಳದೇ ಈಗಾಗಲೇ ಡಾಂಬರು ಕಿತ್ತುಬರುತ್ತಿದೆ. ಕಾಮಗಾರಿ ಪ್ರಾರಂಭಿಸಿದ ನಂತರವೂ ಪುರಸಭೆಯು ಒತ್ತುವರಿಯನ್ನು ತೆರವುಗೊಳಿಸದ ಪರಿಣಾಮ ಕುಂಟುತ್ತಾ ಸಾಗಿದೆ.

ನಿತ್ಯ ಸಾವಿರಾರು ವಾಹನಗಳ ಸಂಚಾರ: ಪ್ರಮುಖ ವಾಣಿಜ್ಯ ಮಳಿಗೆಗಳನ್ನು ಹೊಂದಿದ ಹಾಗೂ ಜಿಲ್ಲಾ ಕೇಂದ್ರವನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಪ್ರತಿದಿನವೂ ಸಾರಾರು ವಾಹನಗಳ ಸಂಚಾರವಿದೆ. ಇದರಿಂದ ವ್ಯಾಪಾರ ವ್ಯವಹಾರ ನಡೆಸಲಾಗುತ್ತಿಲ್ಲ. ಇತ್ತೀಚೆಗೆ ಪುರಸಭೆಯು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಿದೆ.

Advertisement

ಆದರೆ, ರಸ್ತೆ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ನಿಗಮ ಇನ್ನೂ ಪ್ರಾರಂಭವಾಗಿಲ್ಲ. ಇದರಿಂದ ಎಲ್ಲಾ ವಾಹನಗಳೂ ಒಂದೇ ಬದಿಯಲ್ಲಿ ಸಾಗಬೇಕಾಗಿದ್ದು, ಸುಗಮ ಸಂಚಾರ ಎಂಬುದು ಕನಸಾಗಿದೆ. ಒಂದು ಬದಿಯಲ್ಲಿ ಇನ್ನೂ ಸಮರ್ಪಕವಾಗಿ ಚರಂಡಿ ನಿರ್ಮಿಸದೆ, ಕೊಳಚೆ ಮತ್ತು ಮಳೆ ನೀರು ನಿಲ್ಲುತ್ತಿದೆ. ಬಹುತೇಕ ಅಂಗಡಿಗಳ ಒಳಗೆ ಪ್ರವೇಶಿಸಲು ಸಾಧ್ಯವಾಗದೇ ಹಿಡಿಶಾಪ ಹಾಕುತ್ತಿದ್ದಾರೆ.

ಸರ್ಕಾರದ ಹಣ ವ್ಯರ್ಥ: ಕಾಮಗಾರಿ ಮುಗಿಯುವ ವೇಳೆಗೆ ಒಂದು ಬದಿಯಲ್ಲಿ ಹಾಕಿರುವ ಡಾಂಬರು ಕಿತ್ತು ಮತ್ತೆ ಹಾಳಾಗಲಿದೆ. ಮೊದಲೇ ಚೆನ್ನಾಗಿದ್ದ ರಸ್ತೆಗೆ ಡಾಂಬರು ಹಾಕಿದ್ದರೆ, ಇನ್ನೂ ಹೆಚ್ಚಿನ ಬಾಳಿಕೆ ಬರುತ್ತಿದ್ದರೂ ಸರ್ಕಾರದ ಹಣವನ್ನು ವ್ಯರ್ಥವಾಗಿ ಖರ್ಚು ಮಾಡಿ, ಸಾರ್ವಜನಿಕರಿಕೆ ತೊಂದರೆ ನೀಡಲಾಗುತ್ತಿದೆ ಎಂದು ನಾಗರಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪುರಸಭೆಯ ವತಿಯಿಂದ ಒಳ ಚರಂಡಿ ಸ್ಥಳಾಂತರಕ್ಕೆ 40 ಲಕ್ಷ ರೂಪಾಯಿ ನೀಡಲಾಗಿದೆ. ಕಾಮಗಾರಿ ಪೂರ್ಣಗೊಂಡಿದೆ. ಸದ್ಯದಲ್ಲೇ ರಸ್ತೆ ಕಾಮಗಾರಿಯ ಬಗ್ಗೆ ತುರ್ತು ಗಮನ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
-ಸಿ.ಎಸ್‌.ನಿರಂಜನಕುಮಾರ್‌, ಶಾಸಕರು

ಈ ಹಿಂದೆ ಜೋಡಿ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಗುಣಮಟ್ಟ ನಿರ್ವಹಣೆ ಮಾಡದೆ ಹಾಳಾಗಿದ್ದರೂ ಡಾಂಬರು ಹಾಕಿದ್ದರೆ ಸಾಕಾಗಿತ್ತು. ಆದರೆ, ಅಗಲೀಕರಣ ಮಾಡಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ವಾಹನ ಸವಾರರು ಹಾಗೂ ಅಂಗಡಿ ಮುಂಗಟ್ಟು ಹೊಂದಿರುವವರಿಗೆ ತೀವ್ರ ತೊಂದರೆಯಾಗಿದೆ. ಸಣ್ಣಪುಟ್ಟ ಒತ್ತುವರಿಗಳನ್ನು ಕೂಡಲೇ ತೆರವುಗೊಳಿಸಿ ಕಾಮಗಾರಿ ಮುಗಿಸಬೇಕು. ಉತ್ತಮ ಗುಣಮಟ್ಟದಲ್ಲಿ ರಸ್ತೆ ನಿರ್ಮಾಣವಾಗಬೇಕು.
-ಜಿ.ಎನ್‌.ಮಂಜುನಾಥ್‌, ನಿವಾಸಿ, ಗುಂಡ್ಲುಪೇಟೆ

* ಸೋಮಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next