ತೇರದಾಳ: ಪಟ್ಟಣದ ಪೊಲೀಸ್ ಠಾಣೆಯಿಂದ ಬಸ್ ನಿಲ್ದಾಣದವರೆಗೆ ಕೈಗೊಂಡಿರುವ ಕಲಾದಗಿ -ಕಾಗವಾಡ ರಾಜ್ಯ ಹೆದ್ದಾರಿ ಅಭಿವೃದ್ಧಿ ಹಾಗೂ ಅಗಲೀಕರಣ ಕಾಮಗಾರಿ ಅಪೂರ್ಣಗೊಂಡಿದ್ದು, ಧೂಳು ತುಂಬಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
ಅಲ್ಲದೇ, ರಸ್ತೆ ಬಳಸಿ ಹೋಗುವ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ಇದರಿಂದ ಚಿಕ್ಕ-ಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಜನರ ಆಗ್ರಹವಾಗಿದೆ.
ಲೋಕೋಪಯೋಗಿ ಇಲಾಖೆಯಡಿ ಅಂದಾಜು ಮೂರು ಕೋಟಿಗೂ ಅಧಿಕ ಅನುದಾನದಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿ ಆರಂಭದಿಂದಲೂ ಕುಂಟುತ್ತ, ತೆವಳುತ್ತ ಸಾಗಿದ್ದು, 7-8 ತಿಂಗಳಾದರೂ ಸಹ ಅರ್ಧದಷ್ಟು ಮಾತ್ರ ಪೂರ್ಣಗೊಂಡಿದೆ. ಉಳಿದ ಅರ್ಧದಷ್ಟು ಮಾತ್ರ ಗರಸು ಹಾಕಿದ್ದು, ವಾಹನ ಸಂಚರಿಸಿದರೆ 10-15 ನಿಮಿಷ ಧೂಳು ತುಂಬುವುದು. ರಾಜ್ಯ ಹೆದ್ದಾರಿಯಾಗಿದ್ದರಿಂದ ದಿನಕ್ಕೆ ಸಾವಿರಾರು ವಾಹನಗಳು ಇದೇ ರಸ್ತೆ ಬಳಸಿ ಸಾಗುತ್ತವೆ. ರಸ್ತೆಯ ಬದಿಯಲ್ಲಿ ವಾಸದ ಮನೆಗಳು ಹಾಗೂ ಸಾಕಷ್ಟು ಅಂಗಡಿ-ಮಳಿಗೆಗಳಿವೆ. ವಿಪರೀತ ಧೂಳಿನಿಂದಾಗಿ ಆರೋಗ್ಯ ಮೇಲೂ ಪರಿಣಾಮವಾಗುತ್ತಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಧೂಳಿನಲ್ಲಿ, ತಗ್ಗು-ದಿನ್ನೆ ರಸ್ತೆ ಮೂಲಕವೆ ಸಾಗುತ್ತಾರೆ. ಇದೆಲ್ಲದರ ಅರಿವಿದ್ದರೂ ಸಹ ಇಲಾಖೆಯ ಅ ಧಿಕಾರಿಗಳು ಉಳಿದರ್ಧ ಕಾಮಗಾರಿ ನಿಲ್ಲಿಸಿದ್ದು, ಪಟ್ಟಣದ ಅಭಿವೃದ್ಧಿ ಬಯಸುವ ಜನರಿಗೆ ನೋವಾಗಿದೆ. ಅರ್ಧದಷ್ಟು ರಸ್ತೆ ಕಾಮಗಾರಿ ಮಾತ್ರ ಡಾಂಬರೀರಣ ಪೂರ್ಣಗೊಂಡಿದ್ದು, ಪಕ್ಕಕ್ಕೆ ಚರಂಡಿ ನಿರ್ಮಾಣ ಕಾರ್ಯ ನಡೆದಿದೆ. ಈ ಉಳಿದ ಅರ್ಧ ರಸ್ತೆಯ ಕಾಮಗಾರಿಯನ್ನು ಸಹ ಬೇಗನೆ ಆರಂಭಿಸಿ, ಧೂಳಿನಿಂದ ಮುಕ್ತಿ ಕಲ್ಪಿಸಬೇಕೆಂದು ಸಾರ್ವಜನಿಕರ ಒತ್ತಾಸೆಯಾಗಿದೆ.
ಜಮಖಂಡಿ, ವಿಜಯಪುರ, ಸೊಲ್ಲಾಪುರ, ಕಲಬುರಗಿ, ಮುದ್ದೇಬಿಹಾಳ, ಬಾಗಲಕೋಟೆ, ಬಾದಾಮಿ, ಇಳಕಲ್, ಕುಷ್ಠಗಿ, ಸವದತ್ತಿ, ಧಾರವಾಡ, ಭಟ್ಕಳ, ಬೆಂಗಳೂರು, ಮಿರಜ, ಸಾಂಗಲಿ, ಕೋಲ್ಲಾಪುರ, ಪುಣೆ, ಮುಂಬಯಿ ಸೇರಿದಂತೆ ದೂರ ಪ್ರಯಾಣಿಸುವ ಬಸ್‌ಗಳು ಇದೇ ರಸ್ತೆ ಬಳಸಿ ಸಾಗುತ್ತವೆ. ಮಿರಜ ಸೇರಿದಂತೆ ವಿವಿಧೆಡೆ ಆಸ್ಪತ್ರೆಗಳಿಗೆ ಸಾಗುವ ಆಂಬ್ಯುಲೆನ್ಸ್‌ಗಳು ಸಹ ಈ ರಸ್ತೆಯಲ್ಲಿ ನಿಧಾನವಾಗಿ ಹೋಗುವುದು ಅನಿವಾರ್ಯವಾಗಿದೆ.
ತೇರದಾಳ ಪೊಲೀಸ್ ಠಾಣೆಯಿಂದ ಬಸ್ ನಿಲ್ದಾಣದ ವರೆಗಿನ ರಸ್ತೆ ದುರಸ್ತಿ ಕಾಮಗಾರಿ ನಡೆದಿದ್ದು, ಅದರಲ್ಲಿ ಮೊದಲ ಅರ್ಧ ಭಾಗದಷ್ಟು ರಸ್ತೆ ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಕೇವಲ 10-15ದಿನಗಳಲ್ಲಿ ಚರಂಡಿ ಸಹಿತ ಪೂರ್ಣಗೊಳ್ಳುವುದು. ಇನ್ನುಳಿದ ಅರ್ಧ ಭಾಗದ ಟೆಂಡರ್ ಪ್ರಕ್ರಿಯೆ ಮೇ ತಿಂಗಳ ಮೊದಲ ವಾರದಲ್ಲಿ ನಡೆಯಲಿದೆ. ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಕಾಮಗಾರಿ ಆರಂಭಿಸಲಾಗುವುದು. ಶೀಘ್ರ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ಅಲ್ಲಿಯವರೆಗೆ ಸ್ವಲ್ಪ ಗರಸು ಹಾಕಿಸಿ, ನೀರು ಹೊಡೆದು ಧೂಳು ಕಡಿಮೆಯಾಗುವ ವ್ಯವಸ್ಥೆ ಮಾಡಲಾಗುವುದು.
-ಎಸ್.ಆರ್. ಬಂಡಿವಡ್ಡರ, ಪಿಡಬ್ಲೂಡಿ ಎಇಇ ಜಮಖಂಡಿ.