ಬೆಂಗಳೂರು: ಶಾಲಾ ಪಠ್ಯಪುಸ್ತಕಗಳಲ್ಲಿ ಸಂಚಾರ ನಿಯಮಗಳ ಕುರಿತು ಹೆಚ್ಚು ಮಾಹಿತಿ ಒದಗಿಸಲು ಸಂಚಾರ ಪೊಲೀಸ್ ವಿಭಾಗ ತೀರ್ಮಾನಿಸಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಹೇಳಿದರು.
ಸಂಚಾರ ಪೊಲೀಸ್ ದಿನಾಚರಣೆ ಅಂಗವಾಗಿ ಸೋಮವಾರ ಸಿಎಂಸಿಎ ಸಂಸ್ಥೆ ನಗರದ ಸಂಚಾರ ನಿರ್ವಹಣೆ ಕೇಂದ್ರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ “ಶಾಲಾ ಮಕ್ಕಳಿಂದ ಸಂಚಾರ ಪೊಲೀಸರಿಗೆ ಧನ್ಯವಾದಗಳು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲಾ ಪಠ್ಯಪುಸ್ತಕಗಳಲ್ಲಿ ಸಂಚಾರ ನಿಯಮಗಳು ಹಾಗೂ ಉಲ್ಲಂಘನೆಗಳ ಕುರಿತ ಹೆಚ್ಚಿನ ಮಾಹಿತಿಯಿಲ್ಲ. ಈ ಹಿನ್ನೆಲೆಯಲ್ಲಿ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರ ಜತೆ ಚರ್ಚಿಸಿ, ಮುಂದಿನ ದಿನಗಳಲ್ಲಿ ಸಂಚಾರ ನಿಯಮಗಳ ಬಗ್ಗೆ ಶಾಲಾ ಮಟ್ಟದಲ್ಲೇ ಮಾಹಿತಿ ನೀಡಲು ತೀರ್ಮಾನಿಸಲಾಗಿದೆ.
ಸಂಚಾರ ನಿರ್ವಹಣೆ ಕೇಂದ್ರದ ಕಾರ್ಯವೈಖರಿ ಮತ್ತು ಸಂಚಾರ ಪೊಲೀಸರು ಹೇಗೆ ಕರ್ತವ್ಯ ನಿರ್ವಹಿಸುತ್ತಾರೆ, ಸಾರ್ವಜನಿಕರು, ವಾಹನ ಸವಾರು ಯಾವ ರೀತಿ ಸಂಚಾರ ನಿಯಮ ಪಾಲಿಸಬೇಕು ಎಂಬೆಲ್ಲ ಮಾಹಿತಿಯನ್ನು ಶಾಲಾ ದಿನಗಳಲ್ಲೇ ಮಕ್ಕಳಿಗೆ ನೀಡಲು ಚಿಂತಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ನಗರದ ಎಲ್ಲಾ ಸಂಚಾರ ಠಾಣೆಗಳ ವ್ಯಾಪ್ತಿಯ ಶಾಲೆಗಳಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಅಭಿಯಾನ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಹೆಚ್ಚಿಸುವುದರ ಜತೆಗೆ, ನಿರ್ದಿಷ್ಟ ವಿಷಯ ಕುರಿತು ಆಂದೋಲನ ಆರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಅಜಯ್‌ಕುಮಾರ್ ಸಿಂಗ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಸಂಚಾರ ಪೊಲೀಸರ ಕೆಲಸ ಬಹಳ ಕಷ್ಟ. ಒಂದು ಕ್ಷಣ ನಿರ್ಲಕ್ಷ್ಯ ತೋರಿದರೂ ದೊಡ್ಡ ಅನಾಹುತವೇ ನಡೆಯುತ್ತದೆ.
ಇಂತಹ ಕಾರ್ಯಕ್ರಮಗಳ ಮೂಲಕ ಸಂಚಾರ ಪೊಲೀಸರಿಗೆ ಧನ್ಯವಾದ ತಿಳಿಸುತ್ತಿರುವುದು ಸಂತೋಷದ ವಿಚಾರ ಎಂದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿವಿಧ ಶಾಲಾ ಮಕ್ಕಳು ಸಂಚಾರ ಪೊಲೀಸ್ ಸಿಬ್ಬಂದಿಗೆ ಗ್ರಿಟಿಂಗ್ ಕಾರ್ಡ್ ಕೊಡುವ ಮೂಲಕ ಧನ್ಯವಾದ ತಿಳಿಸಿದರು.