ನವದೆಹಲಿ:ಕೋವಿಡ್ 19 ವೈರಸ್ ತಡೆಗಟ್ಟಲು ದೇಶದಲ್ಲಿ ಮೂರನೇ ಹಂತದ ಲಾಕ್ ಡೌನ್ ಮೇ 17ರವರೆಗೆ ಮುಂದುವರಿಯಲಿದ್ದು, ಏತನ್ಮಧ್ಯೆ ಲಾಕ್ ಡೌನ್ ವೇಳೆ ಭಾರತದಲ್ಲಿ ಅಶ್ಲೀಲ ವೆಬ್ ಸೈಟ್ಸ್ ವೀಕ್ಷಿಸಿದವರ ಸಂಖ್ಯೆ ಶೇ.95ರಷ್ಟು ಹೆಚ್ಚಳವಾಗಿದೆ ಎಂದು ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರಿಂದ ಬಯಲಾಗಿದೆ.
ಶೇ.89ರಷ್ಟು ಮಂದಿ ಅಶ್ಲೀಲ ವೆಬ್ ಸೈಟ್ಸ್ ಅನ್ನು ತಮ್ಮ ಸೆಲ್ ಫೋನ್ ನಲ್ಲಿಯೇ ಆ್ಯಕ್ಸಸ್ ಮಾಡಿಕೊಂಡಿದ್ದರೆ, ಸುಮಾರು ಶೇ.30ರಿಂದ 40ರಷ್ಟು ಭಾರತೀಯರು ಲಾಕ್ ಡೌನ್ ಸಂದರ್ಭದಲ್ಲಿ ಪೋರ್ನ್ ವಿಡಿಯೋಗಳನ್ನು ಡೌನ್ ಲೋಡ್ ಮಾಡಿಕೊಂಡಿರುವುದಾಗಿ ಸಮೀಕ್ಷೆ ವಿವರಿಸಿದೆ.
ದೇಶದಲ್ಲಿ 3,500ಕ್ಕೂ ಅಧಿಕ ಅಶ್ಲೀಲ ವೆಬ್ ಸೈಟ್ಸ್ ಗಳನ್ನು ನಿಷೇಧಿಸಲಾಗಿತ್ತು. ಆದರೂ ಅಂತರ್ಜಾಲದಲ್ಲಿ ಇಂತಹ ಅಶ್ಲೀಲ ಸೈಟ್ಸ್ ವೀಕ್ಷಕರ ಸಂಖ್ಯೆ ಹೆಚ್ಚಳವಾಗಿರುವುದಾಗಿ ಸಮೀಕ್ಷೆ ತಿಳಿಸಿದೆ. ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸುಮಾರು 400 ವಿದ್ಯಾರ್ಥಿಗಳನ್ನು ಸಂದರ್ಶಿಸಿ ನಡೆಸಿದ ಸಮೀಕ್ಷೆಯಲ್ಲಿ ತಮ್ಮ 10ನೇ ವಯಸ್ಸಿನಲ್ಲಿಯೇ ಶೇ.70ರಷ್ಟು ವಿದ್ಯಾರ್ಥಿಗಳು ಅಶ್ಲೀಲ ವಿಡಿಯೋ ನೋಡಲು ಆರಂಭಿಸಿದ್ದರು ಎಂಬುದು ಬಯಲಾಗಿತ್ತು.
ಅಧ್ಯಯನದ ಪ್ರಕಾರ, ಭಾರತದಲ್ಲಿ ಶೇ.90ರಷ್ಟು ಪೋಷಕರು ದೊಡ್ಡ ನಗರದಲ್ಲಿ ವಾಸಿಸುತ್ತಿದ್ದು, ಅವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಇಂಟರ್ನೆಟ್ ನೆರವಾಗುತ್ತದೆ ಎಂದು ಭಾವಿಸುತ್ತಾರೆ. ಇದರಲ್ಲಿ 10 ಮಂದಿ ಪೋಷಕರಲ್ಲಿ 9 ಮಂದಿ ತಮ್ಮ ಮಕ್ಕಳು ಇಂಟರ್ನೆಟ್ ಅನ್ನು ಕೇವಲ ಓದಲು ಮಾತ್ರ ಉಪಯೋಗಿಸುತ್ತಾರೆ. ಅವರು ಯಾವುದೇ ಆಶ್ಲೀಲ ವಿಡಿಯೋ ನೋಡುವುದಿಲ್ಲ ಎಂದು ನಂಬುತ್ತಾರೆ.
ಆದರೆ ಆರು ಅಥವಾ ಏಳು ವರ್ಷದ ಮಕ್ಕಳ ಕೈಗೆ ಮೊಬೈಲ್ ಫೋನ್, ಇಂಟರ್ನೆಟ್ ಸಿಕ್ಕಿದರೆ ಅವರು ಉಚಿತವಾಗಿ ತಮಗೆ ಏನು ನೋಡಬೇಕೋ ಅದನ್ನೆಲ್ಲಾ ನೋಡಲು ಆರಂಭಿಸುತ್ತಾರೆ ಎಂದು ವಿವರಿಸಿದೆ. ಅತೀ ಕಡಿಮೆ ದರದಲ್ಲಿ ಡಾಟಾ ಸಿಗುತ್ತಿರುವುದು ಕೂಡಾ ಇದಕ್ಕೆ ಕಾರಣವಾಗಿದೆ. ಆದರೆ ಹೊಸ ಪೀಳಿಗೆ ಮತ್ತು ವಿದ್ಯಾರ್ಥಿ ಸಮುದಾಯ ಉಚಿತ ಅಶ್ಲೀಲ ವಿಡಿಯೋ ನೋಡುವ ಮೂಲಕ ಅವರ ಭವಿಷ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಅವರ ಮನಸ್ಸಿನ ಮೇಲೂ ಗಾಢ ಸಮಸ್ಯೆ ತಂದೊಡ್ಡಲಿದೆ ಎಂದು ಎಚ್ಚರಿಸಿದೆ.
ಅತೀ ಹೆಚ್ಚು ಅಶ್ಲೀಲ ವಿಡಿಯೋ, ಸಿನಿಮಾ ನೋಡುವ ಪಟ್ಟಿಯಲ್ಲಿ ಅಮೆರಿಕ, ಬ್ರಿಟನ್ ಮುಂಚೂಣಿಯಲ್ಲಿದ್ದರೆ, ಭಾರತ ಇಡೀ ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ವರದಿ ವಿವರಿಸಿದೆ.