ಮಹಾನಗರ: ನಗರದಲ್ಲಿ ಅತೀ ಹೆಚ್ಚು ಸಂಚಾರ ದಟ್ಟಣೆ ಇರುವ ಕರಾವಳಿ ವೃತ್ತದಿಂದ ಲೋವರ್ ಬೆಂದೂರ್‌ವೆಲ್ ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ವಾಹನ ಸವಾರರು ಸಂಚಾರ ನಡೆಸಲು ಕಷ್ಟಪಡುತ್ತಿದ್ದಾರೆ. ಚತುಷ್ಪಥ ರಸ್ತೆಯ ಎರಡೂ ಭಾಗಗಳಲ್ಲೂ ಹೊಂಡ ಗುಂಡಿಗಳಿಂದಾಗಿ ನಿತ್ಯ ಟ್ರಾಫಿಕ್ ಜಾಂ ಉಂಟಾಗುತ್ತಿದೆ.
ಕೆಲವೇ ಮೀಟರ್‌ಗಳಷ್ಟು ಇರುವ ಈ ರಸ್ತೆಯಲ್ಲಿ ಹೊಂಡ ತಪ್ಪಿಸಲು ಸವಾರರು ಪ್ರಯತ್ನಿಸಿದರೆ ಅಪಘಾತ ತಪ್ಪಿದ್ದಲ್ಲ ಎನ್ನುವಂತಾಗಿದೆ. ರಸ್ತೆಯಲ್ಲಿ ಬೃಹತ್ ಹೊಂಡಗುಂಡಿಗಳು ನಿರ್ಮಾಣ ವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರಂತೂ ಸಂಕಷ್ಟ ಅನುಭವಿಸುವಂತಾಗಿದೆ. ದಿನವಿಡೀ ಈ ರಸ್ತೆ ವಾಹನ ದಟ್ಟಣೆಯಿಂದ ಕೂಡಿರುವ ಕಾರಣ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.
ಕಾಸರಗೋಡು, ಬಿ.ಸಿ. ರೋಡ್, ಬೆಳ್ತಂಗಡಿ, ಪುತ್ತೂರು, ಮುಡಿಪು ಸಹಿತ ಹಲವು ಪ್ರದೇಶಗಳಿಗೆ ತೆರ ಳುವ ನೂರಾರು ಬಸ್‌ಗಳು ಈ ರಸ್ತೆ ಯನ್ನು ಅವಲಂಬಿಸಿಕೊಂಡಿವೆ. ಇದರ ಹೊರತಾಗಿ ಶಾಲಾ ಬಸ್ಗಳು, ನಗರಕ್ಕೆ ಆಗಮಿಸುವ ಖಾಸಗಿ ವಾಹನ ಗಳು, ಬಂದರು ಪ್ರದೇಶಕ್ಕೆ ತೆರಳುವ ಘನವಾಹನಗಳು ಕೂಡ ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಇದು ಪ್ರಯಾಣಿಕರಿಗೆ ಸಂಕಷ್ಟ ತಂದಿದೆ. ಇದೇ ರಸ್ತೆಯ ಬದಿಯಲ್ಲಿ ವಾಹನ ನಿಲುಗಡೆಯಿಂದ ಸಮಸ್ಯೆಯಾಗುತ್ತಿದ್ದು, ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ.
ಪ್ರತಿ ಮಳೆಗಾಲದಲ್ಲಿ ಅವ್ಯವಸ್ಥೆ
ಕರಾವಳಿ ವೃತ್ತದಿಂದ ಲೋವರ್ ಬೆಂದೂರ್‌ವೆಲ್ ವರೆಗೆ ಇರುವ ಡಾಮರು ರಸ್ತೆ ಪ್ರತೀ ವರ್ಷ ಮಳೆಗಾಲ ದಲ್ಲಿ ಹೊಂಡಗುಂಡಿಗಳಿಂದ ಕೂಡಿರು ತ್ತದೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದೇ ಹರಸಾಹಸ. ಈ ರಸ್ತೆ ಬಹುತೇಕ ಕಾಂಕ್ರೀಟ್ ಒಳ ಗೊಂಡಿದ್ದು, ಕರಾವಳಿ ವೃತ್ತದಿಂದ ಕೆಲವೇ ಮೀಟರ್‌ವರೆಗೆ ಡಾಮರು ರಸ್ತೆಯಾಗಿರುವ ಕಾರಣ ಕಾಂಕ್ರೀಟ್ ಅಳವಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ತತ್‌ಕ್ಷಣ ರಸ್ತೆ ದುರಸ್ತಿಗೆ ಸೂಚನೆ
ತತ್‌ಕ್ಷಣಕ್ಕೆ ರಸ್ತೆ ದುರಸ್ತಿಗೆ ಸೂಚನೆ ನೀಡಲಾಗಿದೆ. ಮಳೆ ನಿಂತಾಕ್ಷಣ ಮರು ಡಾಮರು ಕಾಮಗಾರಿ ನಡೆಸುತ್ತೇವೆ. ರಸ್ತೆಯಲ್ಲಿ ನೀರಿನ ಪೈಪ್ ಹಾದು ಹೋಗಿರುವ ಕಾರಣ ಕಾಂಕ್ರೀಟ್ ಅಳವಡಿಸಲು ಸಾಧ್ಯವಾಗುತ್ತಿಲ್ಲ.
-ಸುಧೀರ್ ಶೆಟ್ಟಿ ಕಣ್ಣೂರು, ಮೇಯರ್, ಮನಪಾ
ಅವ್ಯವಸ್ಥೆಗೆ ಮುಕ್ತಿ ಕಲ್ಪಿಸಿ
ಸಂಚಾರ ಸಮಸ್ಯೆ ಹಾಗೂ ಆಹಾರದ ಗುಣಮಟ್ಟದ ಕಾರಣ ನೀಡಿ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಟೈಗರ್ ಕಾರ್ಯಾಚರಣೆ ನಡೆಸುತ್ತಿರುವ ಪಾಲಿಕೆ ಮೊದಲು ಸಂಚಾರ ದಟ್ಟಣೆ ಇರುವ ರಸ್ತೆ ದುರಸ್ತಿ ಮಾಡಬೇಕು. ಕಳಪೆ ಕಾಮಗಾರಿ ನಡೆಸಿದವರ ವಿರುದ್ಧ ಪಾಲಿಕೆ ಯಾಕೆ ಕ್ರಮ ವಹಿಸುತ್ತಿಲ್ಲ? ಇಲ್ಲಿನ ಅವ್ಯವಸ್ಥೆಗೆ ಮುಕ್ತಿ ಕಲ್ಪಿಸಿ ಕಾಂಕ್ರೀಟ್ ಅಳವಡಿಸಿ.
-ರಾಜೇಶ್, ವಾಹನ ಸವಾರರು
ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ
ಬಲ್ಮಠದಿಂದ ಕಂಕನಾಡಿಯತ್ತ ತೆರಳುವ ರಸ್ತೆಯ ಬಲ್ಮಠ ಸಮೀಪ ರಸ್ತೆ ಬದಿಯಲ್ಲಿ ನೋ ಪಾರ್ಕಿಂಗ್ ಬೋರ್ಡ್ ಅಳವಡಿಸಲಾಗಿದೆ. ಆದರೆ, ಅದೇ ರಸ್ತೆಯಲ್ಲಿ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿದ್ದು ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಟ್ರಾಫಿಕ್ ಜಾಂಗೆ ಕಾರಣವಾಗುತ್ತಿದೆ. ಇದು ಪಾಲಿಕೆಯ ಕಣ್ಣಿಗೆ ಕಾಣಿಸುತ್ತಿಲ್ಲವೇ ಎಂದು ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.