Advertisement

ಸುಬ್ರಹ್ಮಣ್ಯ ಪೇಟೆ: ಸಂಚಾರ ನಿರ್ವಹಣೆ ದೊಡ್ಡ ಸವಾಲು

04:15 AM Dec 18, 2018 | Team Udayavani |

ಸುಬ್ರಹ್ಮಣ್ಯ: ವಾಹನ ನಿಷೇಧಿತ ಸ್ಥಳವಾಗಿದ್ದರೂ ರಸ್ತೆ, ಫ‌ುಟ್‌ಪಾತ್‌ನಲ್ಲಿ ವಾಹನ ನಿಲ್ಲಿಸುವ ಸವಾರರು, ಪರದಾಡುವ ಪಾದಚಾರಿಗಳು. ಪಾರ್ಕಿಂಗ್‌ ಜಾಗವಿದ್ದರೂ ನಿಯಂತ್ರಣಕ್ಕೆ ಯಾವುದೇ ಸಮರ್ಪಕ ವಾದ ವ್ಯವಸ್ಥೆ ಜಾರಿ ಇಲ್ಲದಿರುವುದರಿಂದ ಎಲ್ಲರಿಗೂ ಸಮಸ್ಯೆ. ಇದು ಕುಕ್ಕೆ ಸುಬ್ರಹ್ಮಣ್ಯ ನಗರದ ಚಿತ್ರಣ. ದಕ್ಷಿಣ ಭಾರತದ ಸರ್ವಶ್ರೇಷ್ಠ, ರಾಜ್ಯದ ನಂ. 1 ದೇಗುಲವೆನಿಸಿದ ಕುಕ್ಕೆ ಸುಬ್ರಹ್ಮಣ್ಯ ನಗರದಲ್ಲಿ ಸಂಚಾರ ಸಮಸ್ಯೆ ಪ್ರತಿನಿತ್ಯದ ಗೋಳು. ಸಂಚಾರ ನಿರ್ವಹಣೆಯೇ ಇಲ್ಲಿ ಬಹುದೊಡ್ಡ ಸವಾಲಾಗಿದೆ. ವರ್ಷದಿಂದ ವರ್ಷಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ದಿನಕ್ಕೆ ಸರಾಸರಿ 10 ಸಾವಿರಕ್ಕೂ ಅಧಿಕ ಮಂದಿ ಭಕ್ತರು ಇಲ್ಲಿಗೆ ಭೇಟಿ ಕೊಡುತ್ತಿದ್ದಾರೆ. ಹೆಚ್ಚಿನವರು ಇಲ್ಲಿಗೆ ಸ್ವಂತ ವಾಹನಗಳಲ್ಲಿಯೇ ಬರುತ್ತಾರೆ. ಆದ್ದರಿಂದ ಇಲ್ಲಿ ಜನಸಂದಣಿಯ ಜತೆಗೆ ವಾಹನ ದಟ್ಟನೆಯೂ ಅಧಿಕವಾಗಿದೆ.

Advertisement

ಬಸ್‌ಗಳ ಪೈಪೋಟಿ
ಕಾಶಿಕಟ್ಟೆಯಿಂದ ಸ್ವಲ್ಪ ಮುಂದಕ್ಕೆ ಸಾಗಿದಾಗ ಅಲ್ಲಿಂದ ಸಂಚಾರ ಸಮಸ್ಯೆ ಪ್ರಾರಂಭವಾಗುತ್ತದೆ. ಸಾಲು ಸಾಲಾಗಿ ಬರುವ ಖಾಸಗಿ ವಾಹನಗಳು, ಮುಂದೆ ಸಾಗಲು ಕಿರಿದಾದ ರಸ್ತೆ ಸಮಸ್ಯೆ ತಂದೊಡ್ಡುತ್ತಿದೆ. ಪ್ರಮುಖ ರಸ್ತೆಗೆ ತಾಗಿಕೊಂಡೇ ಸರಕಾರಿ ಬಸ್‌ ನಿಲ್ದಾಣ ಇದೆ. ಇಲ್ಲಿ ತಾಸುಗಟ್ಟಲೆ ವಾಹನಗಳು ರಸ್ತೆಯಲ್ಲೆ ಕರ್ಕಶ ಹಾರ್ನ್ ಹಾಕುತ್ತ ನಿಲ್ಲುವುದು ಸಾಮಾನ್ಯವಾಗಿದೆ. ಸರಕಾರಿ ಸಾರಿಗೆ ಬಸ್‌ ಹಾಗೂ ಖಾಸಗಿ ಬಸ್‌ ನಡುವೆ ಪೈಪೋಟಿ ಇದ್ದು, ಅವರೂ ಇಲ್ಲಿನ ಸಮಸ್ಯೆಗೆ ಕಾರಣರಾಗುತ್ತಿದ್ದಾರೆ. ದೇಗುಲಕ್ಕೆ ತೆರಳುವ ರಥಬೀದಿ ಪ್ರವೇಶಿಸುವ ಮುಖ್ಯ ಪೇಟೆಯ ಜಂಕ್ಷನ್‌ ಗೇಟಿನ ಬಳಿ ಇನ್ನೊಂದು ದೊಡ್ಡ ಸಮಸ್ಯೆ. ಈ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿ ಜನರನ್ನು ಇಳಿಸಿ ವಾಹನಗಳು ಮುಂದೆ ಸಾಗುತ್ತವೆ. ಆದರೆ ಭಕ್ತರನ್ನು ಇಳಿಸಲು ಸಾಕಷ್ಟು ಹೊತ್ತು ತೆಗೆದುಕೊಳ್ಳುತ್ತಿರುವ ಕಾರಣ ಇಲ್ಲಿಯೂ ಟ್ರಾಫಿಕ್‌ ಜಾಮ್‌ ಸಮಸ್ಯೆ ತಲೆದೋರುತ್ತದೆ.

ಸ್ಥಳ ಗುರುತಿಸಲಾಗಿದೆ
ನಗರದ ಆಂಜನೇಯ ಗುಡಿ, ಸವಾರಿ ಮಂಟಪ, ಬಿಲದ್ವಾರ, ಮೊದಲಾದ ಕಡೆಗಳಲ್ಲಿ ವಾಹನ ಪಾರ್ಕಿಂಗ್‌ ಸ್ಥಳ ಗುರುತಿಸಲಾಗಿದೆ. ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲಿ ಕಲ್ಪಿಸಿದ್ದರೂ, ಸಮರ್ಪಕ ನಿರ್ವಹಣೆಯ ಕೊರತೆ ಇದೆ. ರಜಾ ದಿನಗಳಲ್ಲಿ ಕಿಕ್ಕಿರಿದು ಬರುವ ವಾಹನಗಳಿಂದ ಇಲ್ಲಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ. ಮುಖ್ಯ ಪೇಟೆಯಲ್ಲಿ ಪೊಲೀಸರು, ಗೃಹರಕ್ಷಕ ಸಿಬಂದಿ ನಿಯೋಜಿಸಿದ್ದರೂ ದಟ್ಟಣೆ ಹೆಚ್ಚಾದರೆ ಅವರೂ ಅಸಹಾಯಕರಾಗುತ್ತಿದ್ದಾರೆ. ಬೇಸಗೆಯಲ್ಲಿ ಇಲ್ಲಿನ ಜೂನಿಯರ್‌ ಕಾಲೇಜು ಬಳಿ ರಸ್ತೆ ಬದಿ ಇರುವ ವಸತಿಗೃಹದಲ್ಲಿ ನಡೆಯುವ ಕಾರ್ಯಕ್ರಮದ ವೇಳೆ ಜನದಟ್ಟಣೆ ಅಧಿಕವಿರುತ್ತದೆ. ವಾಹನಗಳು ರಸ್ತೆ ಬದಿಯಲ್ಲಿ ನಿಲ್ಲುವುದರಿಂದ ಇಲ್ಲಿಯೂ ಸಂಚಾರ ಸಮಸ್ಯೆ ಕಂಡುಬರುತ್ತದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಇಲ್ಲಿ ಸೂಕ್ತ ವ್ಯವಸ್ಥೆಗಳು ಆಗಬೇಕಿದೆ.

ಹತೋಟಿ ಕಷ್ಟ
ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ಇದೆ. ದೇಗುಲದ ಸಿಬಂದಿ ಸಹಕಾರ ಪಡೆದು ಲಭ್ಯವಿರುವ ಪೊಲೀಸ್‌ ಸಿಬಂದಿ ಹಾಗೂ ಗೃಹರಕ್ಷಕದಳ ಸಿಬಂದಿ ಬಳಸಿಕೊಂಡು ಸಂಚಾರ ಸುವ್ಯವಸ್ಥೆಗೆ ತರುವ ಯತ್ನ ನಡಸುತ್ತಿದ್ದೇವೆ. ಸರಣಿ ರಜಾ ದಿನಗಳಲ್ಲಿ ನಿಯಂತ್ರಣ ಕಷ್ಟವಾಗುತ್ತಿದೆ.
-ಗೋಪಾಲ್‌, ಉಪನಿರೀಕ್ಷಕರು, ಸುಬ್ರಹ್ಮಣ್ಯ ಠಾಣೆ

— ಬಾಲಕೃಷ್ಣ ಭೀಮಗುಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next