Advertisement
ಇಂದಿನಿಂದ ಮೂರು ದಿನಗಳ ಕಾಲ ಸರಣಿ ರಜೆ ಇರುವ ಕಾರಣ ರಾಜಧಾನಿಯ ನಿವಾಸಿಗಳು ಪ್ರವಾಸ ಹಾಗೂ ತಮ್ಮ ಸ್ವಂತ ಊರಿನತ್ತ ಪ್ರಯಾಣ ಬೆಳೆಸುವುದು ಸಾಮಾನ್ಯ. ಶನಿವಾರ ವೈಕುಂಠ ಏಕಾದಶಿ, ಭಾನುವಾರ ಹನುಮಜಯಂತಿ ಹಾಗೂ ಸೋಮವಾರ ಕ್ರಿಸ್‌ಮಸ್ ಹಬ್ಬ ಇರುವುದು ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಯಿತು. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಮೈಸೂರಿನತ್ತ ಪ್ರಯಾಣ ಬೆಳೆಸಿದ್ದರಿಂದ ಟೋಲ್ ಪ್ಲಾಜಾ ಬಳಿ ಸಂಚಾರ ದಟ್ಟಣೆ ಕಂಡು ಬಂದಿತು.
Related Articles
Advertisement
ರಸ್ತೆಗಿಳಿದ 70 ಸಾವಿರಕ್ಕೂ ಹೆಚ್ಚು ವಾಹನ: ಸರಣಿ ರಜೆಯ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಟೋಲ್ ಪ್ಲಾಜಾಬಳಿ ಸಾವಿರಾರು ವಾಹನಗಳು ಸಾಲು ಗಟ್ಟಿ ನಿಲ್ಲುವಂತಾಗಿತ್ತು. ಟೋಲ್ ಪ್ಲಾಜಾ ಸಿಬ್ಬಂದಿಯ ಮಾಹಿತಿಯ ಪ್ರಕಾರ ಶುಕ್ರವಾರ ಸಂಜೆಯಿಂದಲೇ ವಾಹನಗಳ ಸಂಚಾರ ಹೆಚ್ಚಿದ್ದು, ಶನಿವಾರ ಸಂಜೆಯ ಸುಮಾರಿಗೆ 53 ಸಾವಿರದಷ್ಟು ವಾಹನಗಳ ಟೋಲ್ ಪ್ಲಾಜಾ ಹಾಯ್ದು ಹೋಗಿವೆ. ಇನ್ನು ಸರ್ವಿಸ್ ರಸ್ತೆಯಲ್ಲಿ 15 ರಿಂದ 20 ಸಾವಿರ ದಷ್ಟು ವಾಹನ ಗಳು ಹೋಗಿದ್ದು, ಎಕ್ಸ್‌ಪ್ರೆಸ್ ವೇನಲ್ಲಿ ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆ ಯವರೆಗೆ 70 ಸಾವಿರಕ್ಕೂ ಹೆಚ್ಚು ವಾಹನ ಸಂಚರಿಸಿವೆ.
ಬೆಂಗಳೂರು -ಮೈಸೂರು ಎಕ್ಸ್ ಪ್ರಸ್ ವೇನಲ್ಲಿ ಸರಾಸರಿ 35 ಸಾವಿರ ವಾಹನ ಪ್ರತಿದಿನ ಸಂಚರಿಸುತ್ತವೆ ಎಂದು ಅಂದಾಜು ಮಾಡಿದ್ದು, ವಾರಾಂತ್ಯದ ದಿನಗಳಲ್ಲಿ ಈ ಸಂಖ್ಯೆ 50 ಸಾವಿರದ ಆಸುಪಾಸಿದೆ. ಸರಣಿ ರಜೆ ಹಿನ್ನೆಲೆಯಲ್ಲಿ ಸಾಮಾನ್ಯ ದಿನಗಳಿಗಿಂತ ವಾಹನಗಳ ಸಂಚಾರ ಪ್ರಮಾಣ ದುಪಟ್ಟಿದೆ.
ಫಾಸ್ಟ್ ಟ್ಯಾಗ್ ಕಿರಿಕಿರಿಯೇ ಕಾರಣ: ಟೋಲ್‌ಪ್ಲಾಜಾ ಬಳಿ ಸಂಚಾರ ಸಮಸ್ಯೆ ಎದುರಾಗಿದ್ದಕ್ಕೆ ಸಂಚಾರ ಫಾಸ್ಟ್‌ಟ್ಯಾಗ್ ಗೊಂದಲ ಪ್ರಮುಖ ಕಾರಣವಾಗಿತ್ತು. ಕೆಲ ವಾಹನಗಳು ಫಾಸ್ಟ್ ಟ್ಯಾಗ್‌ಇಲ್ಲದೆ ಟೋಲ್ ದಾಟಲು ಮುಂದಾದ ಪರಿಣಾಮ ಇವ ರಿಂದ ಟೋಲ್ ಶುಲ್ಕ ಸಂಗ್ರಹಿಸಿ ರಶೀದಿ ನೀಡುವುದಕ್ಕೆ ಸಾಕಷ್ಟು ಸಮಯವಾಗುತ್ತಿದ್ದ ಪರಿಣಾಮ ವಾಹನಗಳ ಸಂಚಾರಕ್ಕೆ ವಿಳಂಬವಾಯಿತು. ಇದರೊಂದಿಗೆ ಕೆಲ ವಾಹನಗಳ ಫಾಸ್ಟ್‌ಟ್ಯಾಗ್ ಖಾತೆಯಲ್ಲಿ ಹಣ ಖಾಲಿಯಾಗಿದ್ದು, ಒಂದರ ಹಿಂದೆ ಒಂದು ವಾಹನ ಚಲಿಸುತ್ತಿದ್ದ ಕಾರಣ ಫಾಸ್ಟ್‌ಟ್ಯಾಗ್ ಸ್ಕ್ಯಾನ್ ಮಾಡುವಲ್ಲಿ ತಾಂತ್ರಿಕ ಅಡಚಣೆಗಳಿಂದಾಗಿ ಟೋಲ್ ಪ್ಲಾಜಾ ಪಾಸ್ ಮಾಡುವಷ್ಟರಲ್ಲಿ ಚಾಲಕರು ಹೈರಾಣಾಗಿ ಹೋದರು. ಟೋಲ್ ಸಿಬ್ಬಂದಿ ಸಹ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಲ್ಲಿ ಸಾಕು ಬೇಕಾಗಿ ಹೋದರು.