ಮಂಗಳೂರು: ನಗರದಲ್ಲಿ ಸ್ಮಾರ್ಟ್ ಯೋಜನೆಯ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಂಟಾದ ಟ್ರಾಫಿಕ್ ಜಾಮ್ ಸಮಸ್ಯೆಯ ಕುರಿತು ಶಾಸಕ ವೇದವ್ಯಾಸ್ ಕಾಮತ್ ಅವರು ತಕ್ಷಣವೇ ಸ್ಮಾರ್ಟ್ ಸಿಟಿ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳು, ಕೆಯುಡಿಎಫ್ಸಿ ಇಲಾಖೆಯ ಅಧಿಕಾರಿಗಳು ಹಾಗೂ ಬಸ್ ಮಾಲಕರ ಸಂಘದ ಅದ್ಯಕ್ಷರೊಂದಿಗೆ ಸಭೆ ನಡೆಸಿದರು.
ಆ ಕುರಿತು ಮಾತನಾಡಿರುವ ಶಾಸಕ ಕಾಮತ್, ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದೇನೆ. ಇಂದು ಪಿವಿಎಸ್ ಜಂಕ್ಷನ್ ನಿಂದ ನೇರವಾಗಿ ಕೆ.ಎಸ್ ರಾವ್ ರಸ್ತೆಗೆ ತೆರಳಲು ಅವಕಾಶ ಕಲ್ಪಿಸಿ ಕೊಡಬೇಕು. ಕೆ.ಎಸ್ ರಾವ್ ರಸ್ತೆಯಿಂದ ಹಳೆಯ ಸರ್ವಿಸ್ ಬಸ್ ಸ್ಟಾಂಡ್, ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ (ಲೈಟ್ ಹೌಸ್ ಹಿಲ್ ರಸ್ತೆ) ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.
ಅದೇ ರೀತಿ ಕೆ.ಎಸ್ ರಾವ್ ರಸ್ತೆಯ ಮೂಲಕ ಬರುವ ವಾಹನಗಳು ವಿ.ಟಿ ರಸ್ತೆಗೆ ತಿರುಗಲು ಹಾಗೂ ಶರವು ದೇವಸ್ಥಾನ ರಸ್ತೆಯಿಂದ ಜಿ.ಎಚ್.ಎಸ್ ರಸ್ತೆಯ ಮೂಲಕ ಕ್ಲಾಕ್ ಟವರ್ ತೆರಳಲು ಅವಕಾಶ ಕಲ್ಪಿಸಿಕೊಡಬೇಕು. ಸ್ಟೇಟ್ ಬ್ಯಾಂಕ್ ಪರಿಸರದಿಂದ ಬರುವ ವಾಹನಗಳಿಗೆ ಹಂಪನಕಟ್ಟೆ, ಕೆ.ಎಸ್ ರಾವ್ ರಸ್ತೆ, ಯೆನಪೋಯ ಆಸ್ಪತ್ರೆಯ ಮೂಲಕ ತೆರಳಲು ಅವಕಾಶ ಕಲ್ಪಿಸಲಾಗುತ್ತದೆ. ಅಥವ ಕೆ.ಎಸ್ ರಾವ್ ರಸ್ತೆಯಿಂದ ಹಳೇ ಸರ್ವಿಸ್ ಬಸ್ ಸ್ಟ್ಯಾಂಡ್ ಮೂಲಕ ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆಯ ಮೂಲಕ ಹೋಗಲು ಅವಕಾಶ ನೀಡಲಾಗುತ್ತದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಅದೇ ರೀತಿ ಶಾರದಾ ವಿದ್ಯಾಲಯ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈಗಾಗಲೇ ಪ್ರಗತಿ ಹಂತದಲ್ಲಿರುವ ಬಂದರ್ ಪ್ರದೇಶದಲ್ಲಿ ರಾತ್ರಿಯ ವೇಳೆ ಕಾಮಗಾರಿ ನಡೆಸಿ ಹಗಲು ಹೊತ್ತಿನಲ್ಲಿ ಸಂಚಾರಕ್ಕೆ ತೊಡಕಾಗದಂತೆ ಕಾರ್ಯ ನಿರ್ವಹಿಸಲು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಾಳೆಯಿಂದ ಜನರಿಗೆ ಸಮಸ್ಯೆಯಾಗದಂತೆ ಮತ್ತು ಟ್ರಾಫಿಕ್ ಸಮಸ್ಯೆ ಉದ್ಭವಿಸದಂತೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೂ ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಸಚೇತರಕಾದ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅದ್ಯಕ್ಷರಾದ ಜಗದೀಶ್ ಶೆಟ್ಟಿ ಬೋಳೂರು, ಪೂರ್ಣಿಮಾ ಎಂ, ಸಹಾಯಕ ಆಯುಕ್ತರಾದ ಮದನ್ ಮೋಹನ್,ಸಂಚಾರಿ ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತರಾದ ನಟರಾಜ್, ಸಂಚಾರ ಪಶ್ಚಿಮ ಪೊಲೀಸ್ ಠಾಣೆ ನಿರೀಕ್ಷಕರಾದ ಜಯಾನಂದ, ಬಸ್ ಮಾಲಕರ ಸಂಘದ ಅಧ್ಯಕ್ಷರಾದ ದಿಲ್ ರಾಜ್ ಆಳ್ವ, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು, ಕೆಯುಡಿಎಫ್ಸಿ ಅಧಿಕಾರಿಗಳು, ನಾಗರಿಕ ಹಿತರಕ್ಷಣಾ ಸಮಿತಿಯ ಹನುಮಂತ್ ಕಾಮತ್ ಮುಂತಾದವರು ಉಪಸ್ಥಿತರಿದ್ದರು.