ಕಲಾದಗಿ: ಮೂರು ತಾಲೂಕಿನ ಸುಮಾರು ಮೂವತ್ತು ಹಳ್ಳಿಗಳಿಗೆ ಪರಸ್ಪರ ಸನಿಹ ಸಂಪರ್ಕ ಕಲ್ಪಿಸುವ ಕಲಾದಗಿ ಕಾತರಕಿ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ದಕ್ಷಿಣ ಭಾಗದ ಮಣ್ಣು ಏರು ರಸ್ತೆಯಲ್ಲಿ ಮೊಳಕಾಲುದ್ದ ತಗ್ಗು ಗುಂಡಿಗಳು ಬಿದ್ದಿದ್ದು, ಕಬ್ಬು ತುಂಬಿದ ಟ್ರ್ಯಾಕ್ಟರ್ ವಾಹನ ಚಲಾವಣೆ ಮಾಡಲು ರೈತರು ಹರಸಾಹಸ ಪಡುತ್ತಿರುವ ದೃಶ್ಯಗಳು ದಿನೇ ದಿನೇ ಸಾಮಾನ್ಯವಾಗಿವೆ.
ಬಾಗಲಕೋಟೆ, ಬೀಳಗಿ, ಮುಧೋಳ ತಾಲೂಕಿನ ಹಲವು ಹಳ್ಳಿಗಳಿಗೆ ಸನಿಹ ಸಂಪರ್ಕ ರಸ್ತೆ ಕಲಾದಗಿ ಕಾತರಕಿ ಬ್ರಿಡ್ಜ್ ಕಂ ಬ್ಯಾರೆಜ್ ರಸ್ತೆ ರೈತರಿಗೆ ವ್ಯಾರಾಸ್ಥರಿಗೆ ನಿತ್ಯ ಉಪಯೋಗಿ ಸಂಚಾರ ರಸ್ತೆಯಾಗಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತಿವೆ. ಕಳೆದೊಂದು ತಿಂಗಳಿಂದ ಪ್ರಸಕ್ತ ವರ್ಷದ ಕಬ್ಬ ಕಟಾವು ಪ್ರಾರಂಭವಾಗಿದ್ದು, ನಿತ್ಯ ನೂರಾರು ಕಬ್ಬು ತುಂಬಿದ ಟ್ರ್ಯಾಕ್ಟರ್ ಗಳು ಈ ತಗ್ಗು ಗುಂಡಿ ಬಿದ್ದ ರಸ್ತೆಯಲ್ಲಿ ಹರಸಾಹಸ ಪಟ್ಟು ಬ್ಯಾರೇಜ್ ಏರು ರಸ್ತೆ ಹತ್ತಿಸಬೇಕಾಗಿದೆ, ಈ ವೇಳೆ ಹಲವು ಸರ್ಕಸ್‌ಗಳು ನಡೆಯುತ್ತಿವೆ, ಸರ್ಕಸ್ ವೇಳೆ ಏನಾದರು ಅವಘಡ ಸಂಭವಿಸಿದರೂ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಯಾವುದಾರೂ ದೊಡ್ಡ ಅನಾಹುತ ಸಂಭವಿಸುವ ಮೊದಲು ಬ್ಯಾರೇಜ್ ಏರು ರಸ್ತೆಯನ್ನು ಕಡಿ ಕಲ್ಲು, ಮರಂ ಮಣ್ಣು ಸುರಿದು ಗಟ್ಟಿಗೊಳಿಸಿ ಗುಣಮಟ್ಟದ ಡಾಂಬರೀಕರಣ ಕಾಮಗಾರಿ ಮಾಡಿಸಬೇಕೆಂದು ರೈತ ಸಮುದಾಯ ಸೇರಿದಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸವಾರರ ಆಕ್ರೋಶ: 2019 ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಉಂಟಾದ ನದಿ ಪ್ರವಾಹಕ್ಕೆ ಬ್ಯಾರೇಜ್ ಬಳಿಯ 200 ಮೀಟರ್ ರಸ್ತೆ ಸಮೇತ ಹಿಂದೆ ಅಳವಡಿಸಿದ್ದ ಕ್ರಾಸ್ ಬೇರಿಯರ್ ಕಿತ್ತು ಹೋಗಿದ್ದವು. ಪ್ರವಾಹ ಅಬ್ಬರ ಕಡಿಮೆ ಆದ ನಂತರ ತುರ್ತು ಕಾಮಗಾರಿಯಲ್ಲಿ ರಸ್ತೆಯನ್ನು ದುರಸ್ತಿ ಮಾಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಸಂಚಾರ ರಸ್ತೆ ನಿರ್ಮಿಸಿ ಮೂರು ವರ್ಷ ಕಳೆಯುತ್ತ ಬಂದರೂ ಇನ್ನೂ ಏರು ರಸ್ತೆಗೆ ಡಾಂಬರೀಕರಣ ಮಾಡಿಲ್ಲ ಎಂದು ವಾಹನ ಸವಾರರು, ಸಂಚಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ವರ್ಷದ ಕಬ್ಬು ಕಟಾವು ಹಂಗಾಮು ಪ್ರಾರಂಭಗೊಂಡಿದ್ದು ನಿತ್ಯ ನೂರಾರು ಕಬ್ಬುತುಂಬಿದ ಟ್ರ್ಯಾಕ್ಟರ್ ವಾಹನ ಈ ರಸ್ತೆಯಲ್ಲಿ ಸಾಗಿ ಜೆಮ್ ಫ್ಯಾಕ್ಟರಿ, ಮುಧೋಳ ಫ್ಯಾಕ್ಟರಿಗೆ ಸಾಗಬೇಕಾಗಿದೆ. ರಸ್ತೆ ಹದಗೆಟ್ಟಿದ್ದರಿಂದ ಟ್ರ್ಯಾಕ್ಟರ್ ವಾಹನ ಸಂಚಾರ ಮಾಡುವುದು ಕಷ್ಟಕರ. ಕೂಡಲೇ ರಸ್ತೆ ಡಾಂಬರೀಕರಣ ಮಾಡಬೇಕು.
-ಹನುಮಂತ ಬಿ. ಮರೆಮ್ಮನವರ, ನಿಂಗಾಪೂರ ಎಸ್.ಕೆ. ಗ್ರಾಮದ ರೈತ
ಕಲಾದಗಿ ಕಾತರಕಿ ಬ್ರಿಡ್ಜ್ ಕಂ ಬ್ಯಾರೇಜ್ ಬಳಿಯ ರಸ್ತೆ ದುರಸ್ತಿ ಹಾಗೂ ಡಾಂಬರೀಕರಣ ಮಾಡಲು ಗುತ್ತಿಗೆದಾರನಿಗೆ ಸೂಚನೆ ನೀಡಲಾಗಿದೆ. ಶೀಘ್ರ ರಸ್ತೆ ದುರಸ್ತಿ ಕಾರ್ಯ ಪ್ರಾರಂಭವಾಗುವಂತೆ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು.
-ಎಸ್.ಎಂ. ದೇಸಾಯಿ, ಎಇಇ, ಸಣ್ಣ ನಿರಾವರಿ ಇಲಾಖೆ ಬಾಗಲಕೋಟೆ
-ಚಂದ್ರಶೇಖರ ಹಡಪದ