Advertisement

ರಸ್ತೆಗಳ ಅವ್ಯವಸ್ಥೆಯಿಂದ ಸಂಚಾರಕ್ಕೆ ಕಿರಿಕಿರಿ

09:03 PM Feb 25, 2020 | Team Udayavani |

ಗುಂಡ್ಲುಪೇಟೆ: ಪಟ್ಟಣದ ಪ್ರಮುಖ ರಸ್ತೆಗಳಾದ ಕಿತ್ತೂರು ರಾಣೆ ಚೆನ್ನಮ್ಮ ರಸ್ತೆ, ದೇವರಾಜ ಅರಸ್‌ ರಸ್ತೆ ಮತ್ತು ಸಂಗೊಳ್ಳಿರಾಯಣ್ಣ ರಸ್ತೆ ಹಾಗೂ ಹೊಸೂರು ಬಡಾವಣೆಯ ರಸ್ತೆಗಳಲ್ಲಿ ಭಾರೀ ಪ್ರಮಾಣದ ಗುಂಡಿಗಳಾಗಿದ್ದು, ಜನಗಳ ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ಕಿರಿಕಿರಿಯಾಗುತ್ತಿದೆ.

Advertisement

ಪಟ್ಟಣದ ಎಲ್ಲಾ ರಸ್ತೆಗಳು ಗುಂಡಿಬಿದ್ದು, ದ್ವಿಚಕ್ರ ವಾಹನ ಸವಾರರ ಪಾಡು ಹೇಳ ತೀರದಂತಾಗಿದೆ. ಕೆಲವೆಡೆ ಆಯಾ ತಪ್ಪಿ ಬೀಳುತ್ತಿರುವ ಗಾಯಗೊಂಡಿರುವ ಘಟನೆಗಳು ಹೆಚ್ಚಾಗುತ್ತಿದೆ.ಪಟ್ಟಣವನ್ನು ಒಂದು ಸುತ್ತು ನೋಡಿದಾಗ ಇದು ಕೇವಲ ಗುಂಡ್ಲುಪೇಟೆಯಲ್ಲ, ಸಂಪೂರ್ಣ ಈಗ ಗುಂಡಿ ಪೇಟೆ ಎಂದು ಅರ್ಥವಾಗುತ್ತಿದೆ.

ಸರ್ಕಸ್‌ ಮಾಡುವ ಅನಿವಾರ್ಯ: ನೀಲಗಿರಿ-ಮೈಸೂರು ರಸ್ತೆಯಿಂದ ಪುರಸಭೆಯ ಪಕ್ಕದಲ್ಲೇ ಹಾದು ಬರುವ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯಲ್ಲಿ ಸಂಪೂರ್ಣವಾಗಿ ಗುಂಡಿ ಬಿದ್ದಿದೆ. ಇದು ಪಟ್ಟಣದ ಅತೀ ಪ್ರಮುಖ ರಸ್ತೆಯಾದ ಕಾರಣ ಪ್ರತಿ ನಿತ್ಯ ದ್ವಿಚಕ್ರ ವಾಹನ, ಶಾಲಾ ವಾಹನಗಳು ಮತ್ತು ಸರಕು ಸಾಗಾಣಿಕೆಯ ಲಾರಿ, ಟೆಂಪೋಗಳು ಸಂಚರಿಸುತ್ತದೆ. ಆದರೆ, ರಸ್ತೆಯೆಂದು ತಿಳಿದು ವಾಹನ ಚಲಾಯಿಸಿದರೆ ಗುಂಡಿಗಳಿಗೆ ಚಕ್ರ ಬಿದ್ದು, ಸರ್ಕಸ್‌ ಮಾಡುತ್ತಾ ಸಾಗ ಬೇಕಾದ ಅನಿವಾರ್ಯತೆ ಇದೆ.

ಇನ್ನೊಂದು ಪ್ರಮುಖ ರಸ್ತೆಯಾದ ದೇವರಾಜ ಅರಸ್‌ ರಸ್ತೆಯ ಸ್ಥಿತಿಯಂತೂ ಹೇಳತೀರದಂತಾಗಿದೆ. ಇದೇ ರಸ್ತೆಯಲ್ಲಿ ಅಂಚೆ ಕಚೇರಿ, ಬ್ಯಾಂಕ್‌, ಚಿತ್ರಮಂದಿರ, ಸರ್ಕಾರಿ ಆರ್ಯುವೇದ ಆಸ್ಪತ್ರೆ ಸೇರಿದಂತೆ ಇನ್ನೂ ಅನೇಕ ಸಾರ್ವಜನಿಕರ ಸೇವಾ ಕೇಂದ್ರಗಳಿದೆ. , ಈ ರಸ್ತೆಯಲ್ಲಿ ಪಾದಚಾರಿಗಳ ಓಡಾಟ ಅಧಿಕವಾಗಿದೆ. ಆದರೆ, ಗುಂಡಿ ಬಿದ್ದ ರಸ್ತೆಗಳಲ್ಲಿ ವಾಹನ ಚಲಿಸುವುದರಿಂದ ಕಿರಿಕಿರಿ ಹೆಚ್ಚಾಗಿದೆ.

ಒಳಚರಂಡಿ ಕಾಮಗಾರಿಯಿಂದ ಈ ಸ್ಥಿತಿ: ಇಷ್ಟೊಂದು ಗುಂಡಿ ಬೀಳಲು ಪ್ರಮುಖ ಕಾರಣವೆಂದರೆ ಹಲವೆಡೆ ಒಳಚರಂಡಿ ಕಾಮಗಾರಿಯ ಸಂಪರ್ಕಕ್ಕಾಗಿ ರಸ್ತೆಗಳನ್ನು ಅಗೆದು ಬಿಟ್ಟಿರುವುದು. ನಡೆಯುತ್ತಿರುವುದು. ಪಟ್ಟಣದ ಹಲವು ಬಡಾವಣೆ, ಪ್ರಮುಖ ರಸ್ತೆಯನ್ನು ಅಗೆದು ಹಾಕಿರುವುದರಿಂದ ಸಂಪೂರ್ಣವಾಗಿ ರಸ್ತೆಗಳಿಲ್ಲೆ ಗುಂಡಿಗಳ ನಡುವೆ ಸಾಗಬೇಕಾದ ಸ್ಥಿತಿ ಪಟ್ಟಣದ ನಾಗರಿಕರಿಗೆ ಬಂದೊದಗಿದೆ.

Advertisement

ಮಣ್ಣನ್ನು ಸರಿ ಮುಚ್ಚಿಲ್ಲ: ಹಲವೆಡೆ ಟಾರ್‌ ರಸ್ತೆಯನ್ನು ಅಗೆದು ಹಾಕಿದ ನಂತರ ಮಣ್ಣನ್ನು ಸರಿಮಾಡದೇ ಹೋಗಿರುವುದರಿಂದ ರಸ್ತೆಗಳಲ್ಲಿ ತಗ್ಗು ದಿಣ್ಣೆಗಳಾಗಿದೆ. ಸಂಚಾರ ಸಂಪೂರ್ಣವಾಗಿ ದುಸ್ತರಮಯವಾಗಿದೆ. ಪಟ್ಟಣದ ನಾಗರಿಕರು ರಸ್ತೆಯ ಸ್ಥಿತಿಯನ್ನು ನೋಡಿಯೂ ಸುಮ್ಮನಿರುವ ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸುಗಮ ಸಂಚಾರಕ್ಕೆ ಅನುವು ಮಾಡಿ: ಹಾಲಿ ಒಳಚರಂಡಿ ಕಾಮಗಾರಿ ಮುಗಿದಿರುವ ಹಲವು ಬಡಾವಣೆ ಹಾಗೂ ಪ್ರಮುಖ ರಸ್ತೆಗಳನ್ನು ಪುನರ್‌ ನಿರ್ಮಾಣ ಮಾಡಲು ಮುಂದಾಗಲಿ, ಅದು ಸಾಧ್ಯವಾಗದಿದ್ದರೆ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿಸಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಗುಂಡಿ ರಸ್ತೆ ದುರಸ್ತಿಗೆ ಮುಂದಾಗಿ: ಅದೇ ರಸ್ತೆಯಲ್ಲಿ ಪ್ರತಿ ನಿತ್ಯ ಓಡಾಡುವ 23 ವಾರ್ಡ್‌ಗಳ ಪುರಪಿತೃಗಳಿಗೆ ಪಟ್ಟಣದಲ್ಲಿ ಕಾಡುತ್ತಿರುವ ಮೂಲ ಸಮಸ್ಯೆಯು ಅರ್ಥವಾಗುತ್ತಿಲ್ಲವೇ. ಇನ್ನಾದರೂ ಪುರಸಭೆ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಗುಂಡಿ ಬಿದ್ದಿರುವ ರಸ್ತೆಗಳನ್ನು ದುರಸ್ತಿ ಮಾಡಿಸಲು ಹಾಗೂ ಹೊಸದಾಗಿ ಡಾಂಬರು ರಸ್ತೆ ಮಾಡಿಸಲು ಮುಂದಾಗಲಿ ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಪ್ರಮುಖ ರಸ್ತೆಗಳ ಡಾಂಬರೀಕರಣ ಕಾಮಗಾರಿಯನ್ನು ಮಾಡಲು ಯೋಜನೆ ರೂಪಿಸಿದ್ದು, ಶೀಘ್ರದಲ್ಲೇ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಮತ್ತು ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿ ಕಾರ್ಯವನ್ನು ಮಾಡಲಾಗುವುದು.
-ಎ.ರಮೇಶ್‌, ಮುಖ್ಯಾಧಿಕಾರಿ, ಪುರಸಭೆ

* ಸೋಮಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next