Advertisement

ಹಬ್ಬಕ್ಕೆ ಊರಿಗೆ ಹೊರಟವರಿಗೆ ಟ್ರ್ಯಾಫಿಕ್ ಕಿರಿಕಿರಿ

10:08 AM Aug 26, 2017 | |

ಬೆಂಗಳೂರು: ಗಣೇಶನ ಹಬ್ಬದ ಜತೆಗೆ ವಾರಾಂತ್ಯದ ರಜೆಯೂ ಸಿಕ್ಕ ಸಂಭ್ರಮದಲ್ಲಿ ಗುರುವಾರ ಊರುಗಳಿಗೆ ಹೊರಟ ಪ್ರಯಾಣಿಕರಿಗೆ ಮಳೆ ಜೊತೆಗೆ, ಟ್ರ್ಯಾಫಿಕ್‌ನ ಕಿರಿಕಿರಿ ಎದುರಾಯಿತು. ಒಂದೆಡೆ ಜಿಟಿಜಿಟಿ ಮಳೆ, ಮತ್ತೂಂದೆಡೆ ಸಂಚಾರದಟ್ಟಣೆಯಲ್ಲಿ ಬ್ಯಾಗುಗಳನ್ನು ಹೊತ್ತು ಹಬ್ಬಕ್ಕೆ ಊರುಗಳಿಗೆ ಹೊರಟ ಜನರಿಗೆ ಪ್ರಯಾಣ ಪ್ರಯಾಸದಾಯಕವಾಯಿತು. ತೊಯ್ದುತೊಪ್ಪೆಯಾದ
ಪ್ರಯಾಣಿಕರು ನಡುಗುತ್ತಲೇ ಬಸ್‌ಗಳನ್ನು ಏರಿದರು. ಆದರೆ, ಆ ಬಸ್‌ಗಳು ನಗರದ ದಾಟಲು ಗಂಟೆಗಟ್ಟಲೆ ಸಮಯ
ಹಿಡಿಯಿತು. ಇನ್ನು ಕೆಲವರಿಗೆ ನಿಲ್ದಾಣಗಳನ್ನು ತಲುಪುವುದೇ ಸವಾಲಾಗಿತ್ತು. ಪ್ರಮುಖ ನಿಲ್ದಾಣಗಳನ್ನು ಕೂಡುವ ರಸ್ತೆಗಳೆಲ್ಲಾ ವಾಹನಗಳಿಂದ ತುಂಬಿತುಳುಕುತ್ತಿದ್ದವು. ಬಿಎಂಟಿಸಿ ಬಸ್‌ಗಳು, ಆ್ಯಪ್‌ ಆಧಾರಿತ ಟ್ಯಾಕ್ಸಿಗಳು, ಆಟೋಗಳು, ಸ್ನೇಹಿತರ ಬೈಕ್‌ಗಳಲ್ಲಿ ರಸ್ತೆಗಿಳಿದ ಪ್ರಯಾಣಿಕರು, ನಿಲ್ದಾಣಗಳನ್ನು ತಲುಪಲು ಕಿ.ಮೀ.ಗಟ್ಟಲೆ ಕಾದುನಿಲ್ಲಬೇಕಾಯಿತು. ಮತ್ತೂಂದೆಡೆ ಟ್ರ್ಯಾಫಿಕ್‌ ಜಾಮ್‌ನಲ್ಲಿ ಹೊರಹೋಗಲಾಗದೆ, ಸೀಟು ಕಾಯ್ದಿರಿಸಿದ ಪ್ರಯಾಣಿಕರ ಎದುರು ನೋಡುವ ಬಸ್‌ಗಳು ಗಂಟೆಗಟ್ಟಲೆ ಸಹಾಯಕವಾಗಿ ನಿಂತಿದ್ದವು. ಹೆಚ್ಚುವರಿ ಬಸ್‌ಗಳಿಗೆ ನಿಲ್ದಾಣಗಳಲ್ಲಿ ಜಾಗದ ಕೊರತೆಯಿಂದ ರಸ್ತೆ ಬದಿ ನಿಲ್ಲಿಸಲೂ ಆಗದೆ, ಸುಮ್ಮನೆ ಸುತ್ತುಹಾಕುತ್ತಿದ್ದವು. ಖಾಸಗಿ ಬಸ್‌ ನಿಲ್ದಾಣಗಳೂ ಟ್ರ್ಯಾಫಿಕ್‌ ಜಾಮ್‌ನಿಂದ ಹೊರತಾಗಿರಲಿಲ್ಲ. ಇದರ ಜತೆಗೆ ಕಿಕ್ಕಿರಿದ ಜನಸಂದಣಿ ಬೇರೆ. ನಿಲ್ದಾಣಗಳಿಗೆ ಬರುವ ಬಸ್‌ಗಳು ಸಂಚಾರದಟ್ಟಣೆ ಹಿನ್ನೆಲೆಯಲ್ಲಿ ತಾಸುಗಟ್ಟಲೆ ತಡವಾಗಿ ಹೊರಟವು. ಇದರಿಂದ ನಗರದ ವಿವಿಧೆಡೆ ಪಿಕ್‌ಅಪ್‌ ಪಾಯಿಂಟ್‌ಗಳಲ್ಲಿ ಜನ ಕಾದುಕುಳಿತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವು ಪ್ರತಿಷ್ಠಿತ ಟ್ರಾವೆಲ್‌ ಏಜೆನ್ಸಿಗಳು ಜಮಾವಣೆಗೊಂಡ ಪ್ರಯಾಣಿಕರನ್ನು ಕೊಂಡೊಯ್ಯಲು ಮಿನಿ ಕ್ಯಾಬ್‌ಗಳನ್ನು ನಿಯೋಜಿಸಿದ್ದವು. ಅವುಗಳು ಕೂಡ ಟ್ರ್ಯಾಫಿಕ್‌ ಜಾಮ್‌ನಲ್ಲಿ ಸಿಲುಕಿದವು. ನಿಲ್ದಾಣಗಳಿಗೆ ತಲುಪಲು ಆಟೋ, ಕ್ಯಾಬ್‌ಗಳ ಮೊರೆ ಹೋದ ಪ್ರಯಾಣಿಕರ ಜೇಬಿಗೆ ಸರಿಯಾಗಿಯೇ ಕತ್ತರಿ ಬಿತ್ತು. ದುಬಾರಿದರ, ಪೀಕ್‌ ಅವರ್‌ ದರ ಪ್ರಯಾಣಿಕರನ್ನು ಸುಲಿಗೆ ಮಾಡಿವೆ. ಬೆಳಿಗ್ಗೆಯಿಂದಲೇ ತಟ್ಟಿದ ಬಿಸಿ ಕಳೆದ ಹತ್ತು ದಿನಗಳಿಂದ ನಿತ್ಯ ಸಂಜೆ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆಯೇ ಬುಕಿಂಗ್‌ ಮಾಡಿಸಿಕೊಂಡು ಊರುಗಳತ್ತ ಮುಖಮಾಡಿದ ಜನರಿಗೂ ಸಂಚಾರದಟ್ಟಣೆ ಬಿಸಿ ತಟ್ಟಿತು. ಮೆಜೆಸ್ಟಿಕ್‌, ಮೈಸೂರು ರಸ್ತೆ, ಶಾಂತಿನಗರ, ಕೆ.ಆರ್‌. ಪುರ ಸೇರಿದಂತೆ ನಗರದ ಪ್ರಮುಖ ಪ್ರವೇಶ ದ್ವಾರಗಳಲ್ಲಿ ಬೆಳಿಗ್ಗೆಯಿಂದಲೇ ಸಂಚಾರದಟ್ಟಣೆ ಉಂಟಾಯಿತು. ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಮಧ್ಯಾಹ್ನ 12ರಿಂದಲೇ ಹಬ್ಬಕ್ಕೆ ಹೊರಟ ಪ್ರಯಾಣಿಕರ ಆಗಮನ ಶುರುವಾಯಿತು. ಸಂಜೆ ಇದು ತುಸುತಗ್ಗಿದಂತೆ ಕಂಡುಬಂದಿತು. ರಾತ್ರಿ ಮತ್ತೆ ಜನದಟ್ಟಣೆ ಹೆಚ್ಚಿತು.
ಬಸ್‌ ಮತ್ತು ರೈಲುಗಳಿಗೆ ತೆರಳುವ ಜನ ಹೆಚ್ಚಿನ ಸಂಖ್ಯೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಇದರಿಂದ ಮೆಜೆಸ್ಟಿಕ್‌
ಕೂಡುವ ರಸ್ತೆಗಳೆಲ್ಲಾ ಜನರಿಂದ ಗಿಜಗುಡುತ್ತಿದ್ದವು. ಹೆಜ್ಜೆ-ಹೆಜ್ಜೆಗೂ ಜನ ಪರದಾಡಿದರು. ಕೆಂಪೇಗೌಡ ಬಸ್‌ ನಿಲ್ದಾಣ, ಪೀಣ್ಯ ಬಸವೇಶ್ವರ ಬಸ್‌ ನಿಲ್ದಾಣ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ, ಗೃಹರಕ್ಷಕ ದಳದ ಸಿಬ್ಬಂದಿ ಒಳಗೊಂಡಂತೆ 100ಕ್ಕೂ ಹೆಚ್ಚು ಜನರನ್ನು ಬಸ್‌ಗಳ ಸುಗಮ ಸಂಚಾರ ನಿರ್ವಹಣೆಗೆ ನಿಯೋಜಿಸಲಾಗಿತ್ತು. ಕೆಎಸ್‌ಆರ್‌ಟಿಸಿಯಿಂದ ಗುರುವಾರ ಸಾವಿರ ಹೆಚ್ಚುವರಿ ಬಸ್‌ಗಳು ಕಾರ್ಯಾಚರಣೆ ಮಾಡಿವೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next