Advertisement

ಇಂದಿನಿಂದ ಸಾಂಪ್ರದಾಯಿಕ ಹೋರಿ ಓಟದ ಸ್ಪರ್ಧೆ ; ಧಮ್‌ ಇದ್ದಾಂವ ದನ ಬೆದರಸ್ತಾನ

01:09 PM Oct 26, 2022 | Team Udayavani |

ಹಾವೇರಿ: ಕೊರಳಲ್ಲಿ ಹೂವಿನ ಹಾರ, ಕೋಡುಗಳಿಗೆ ರಿಬ್ಬನ್‌, ಬಲೂನ್‌ಗಳಿಂದ ಸಿಂಗಾರಗೊಂಡು ಮಿಂಚಿನ ವೇಗದಲ್ಲಿ ಓಡುವ ಹೋರಿಗಳು, ಸಿಳ್ಳೆ, ಕೇಕೆ ನಡುವೆ ಕೊಬ್ಬರಿ ಹರಿಯಲು ಯತ್ನಿಸುವ ಯುವಕರ ದಂಡು… ಇಂತಹ ಮೈ ರೋಮಾಚನಗೊಳಿಸುವ ದೃಶ್ಯಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.

Advertisement

ಜಿಲ್ಲೆಯಲ್ಲಿ ಜನಪದ ಕೃಷಿ ಮೂಲದ ಕ್ರೀಡೆಯಂದೇ ಪ್ರಚಲಿತವಾದ ಹೋರಿ ಓಡಿಸುವ ಸ್ಪರ್ಧೆ ನೆರೆದಿದ್ದ ಜನರನ್ನು ರೋಮಾಂಚನಗೊಳಿಸುತ್ತದೆ. ಬೆಳಕಿನ ಹಬ್ಬ ದೀಪಾವಳಿಯಿಂದ ಜಿಲ್ಲೆಯಲ್ಲಿ ನಿರಂತರ ಎರಡು ತಿಂಗಳ ಕಾಲ ನಡೆಯುವ ವಿಶಿಷ್ಟ ಸಾಂಪ್ರದಾಯಿಕ ಹೋರಿ ಓಟ ಹಾಗೂ ಸ್ಪರ್ಧೆಗಳಿಗೆ ಬುಧವಾರದಿಂದ (ಪಾಡ್ಯ) ಅಧಿಕೃತವಾಗಿ ಚಾಲನೆ ಸಿಗಲಿದ್ದು, ರೈತಾಪಿ ವರ್ಗದಲ್ಲಿ ಹುಮ್ಮಸ್ಸು ಮೂಡಿಸಲಿದೆ.

ದೀಪಾವಳಿ ಹಬ್ಬದಲ್ಲಿ ನಗರದ ಜನರು ಮನೆಗಳ ಮುಂದೆ ಸಾಲು ಸಾಲು ದೀಪಗಳನ್ನಿಟ್ಟು ಸಂಭ್ರಮಿಸಿದರೆ, ಗ್ರಾಮೀಣ ಜನರು ದೀಪದ ಹಬ್ಬದ ಜೊತೆಗೆ ಈ ಕೊಬ್ಬರಿ ಹೋರಿ ಹಬ್ಬವನ್ನು ಆಯೋಜಿಸಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಾರೆ. ಜನಪದರು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಈ ಸ್ಪರ್ಧೆ ರಾಜ್ಯದಲ್ಲಿ ಹಾವೇರಿ ಜಿಲ್ಲೆಗೆ ವಿಶೇಷ ರೂಪ ತಂದುಕೊಟ್ಟಿದೆ.

ದೀಪಾವಳಿ ಹಬ್ಬದಂದು ರೈತರು ಬಣ್ಣಬಣ್ಣದ ಬಟ್ಟೆಗಳನ್ನು ತೊಟ್ಟು ಹಬ್ಬದೂಟ ಸವಿದ ನಂತರ ಗ್ರಾಮೀಣ ಯುವಕರು ತಾವು ವರ್ಷಪೂರ್ತಿ ಮೇಯಿಸಿದ ಹೋರಿಗಳನ್ನು ಸ್ಪರ್ಧೆಯಲ್ಲಿ ಓಡಲು ಬಿಡುತ್ತಾರೆ. ಹಾಗೆ ಬಿಡುವ ಹೋರಿಗಳಿಗೆ ಬಣ್ಣಬಣ್ಣದ ಝುಲಗಳನ್ನು ಹಾಕಿ ಕೊರಳಿಗೆ ಗೆಜ್ಜೆ ಸರ, ಕೊಂಬುಗಳಿಗೆ ರಿಬ್ಬನ್‌ ಹಾಗೂ ಬಣ್ಣಬಣ್ಣದ ಬಲೂನ್‌ಗಳನ್ನು ಕಟ್ಟಿ ಸಿಂಗರಿಸಲಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಒಣಕೊಬ್ಬರಿ ಸರ ಕೊರಳಿಗೆ ಕಟ್ಟಲಾಗುತ್ತದೆ.

ಹೀಗೆ ಸಿಂಗರಿಸಿದ ಹೋರಿಗೆ ಎರಡು ಮೂರು ಹಗ್ಗಗಳನ್ನು ಕಟ್ಟಿ ಹಿಡಿದುಕೊಂಡು ಸ್ಪರ್ಧೆಗೆ ನಿಗದಿ ಮಾಡಿದ ಸ್ಥಳದಲ್ಲಿ ಓಡಿಸಲಾಗುತ್ತದೆ. ಹೀಗೆ ಓಡುವ ಹೋರಿಗಳನ್ನು ಹಿಡಿದು ಅದರ ಕೊರಳಲ್ಲಿರುವ ಕೊಬ್ಬರಿಯನ್ನು ಹರಿದುಕೊಳ್ಳಬೇಕು. ಸಾಕಷ್ಟು ಅವಘಡಗಳಿಗೆ ಕಾರಣವಾಗುವ ಹೋರಿಗಳು ಅದರ ಜೊತೆಯಲ್ಲಿಯೇ ಸಾಹಸ ಪ್ರಿಯರಿಗೆ ಒಂದಕ್ಕಿಂತ ಒಂದು ಮಿಗಿಲು ಎನ್ನುವಂತೆ ರಸದೌತಣ ಒದಗಿಸುತ್ತವೆ.

Advertisement

ಆಕರ್ಷಕ ಬಹುಮಾನ: ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಬಹುಮಾನ ವಿಜೇತ ಹೋರಿಗಳಿಗೆ ಬಂಗಾರ, ಬೆಳ್ಳಿ, ಆಭರಣಗಳು, ತಾಮ್ರ ಕೊಡ, ಟಾಕಿ, ಟಿ.ವಿ., ಮಿಕ್ಸರ್‌, ಗ್ರೆ„ಂಡರ್‌, ಸೈಕಲ್‌, ವಾಚ್‌ ಸೇರಿದಂತೆ ವಿವಿಧ ಬೆಲೆ ಬಾಳುವ ವಸ್ತುಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ಒಂದೊಂದು ಕೊಬ್ಬರಿ ಹೋರಿ ಸ್ಪರ್ಧೆ ವೀಕ್ಷಿಸಲು ಸಹಸ್ರಾರು ಜನರು ಆಗಮಿಸುತ್ತಾರೆ.

ಒಂದೊಂದು ಹೋರಿ ಒಡುವಾಗಲು ಬಾಜಾ ಭಜಂತ್ರಿ, ಹಲಗೆ, ಮದ್ದು, ಕೇಕೆ, ಸಿಳ್ಳೆಗಳಿಂದ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ಪ್ರತಿ ಕ್ಷಣವೂ ರೋಮಾಂಚನಗೊಳಿಸುವ ಕೊಬ್ಬರಿ ಹೋರಿಗಳ ಹಾಗೂ ಹೋರಿ ಹಿಡಿಯುವವರ ಸಾಹಸ ಸಂಭ್ರಮ ಒಂದೆಡೆಯಾದರೆ, ಇದರಿಂದ ಅಪಾಯ ಒಡ್ಡುವಂತಹ ಕ್ಷಣಗಳನ್ನು ಸಹ ಮರೆಯುವಂತಿಲ್ಲ. ಹೋರಿಗಳ ಕೊರಳಲ್ಲಿರುವ ಕೊಬ್ಬರಿ ಸರ ಕಿತ್ತುಕೊಳ್ಳಲು ಪ್ರಯತ್ನಿಸುವ ಹಲವಾರು ಯುವಕರು ಹೋರಿಗಳ ಇರಿತದಿಂದ
ಅಪಾಯಕ್ಕೆ ಸಿಕ್ಕ ನಿದರ್ಶನಗಳೂ ಸಾಕಷ್ಟಿವೆ. ಒಟ್ಟಾರೆ, ಎಲ್ಲರ ಮನೆ ಬೆಳಗುವ ದೀಪಾವಳಿಯ ಹೋರಿ ಬೆದರಿಸುವ ಸಂದರ್ಭದಲ್ಲಿ ಯಾವುದೇ ಅಪಾಯ ನಡೆದು ಸಾವಿನ ಮನೆಯಾಗದಂತೆ ಎಚ್ಚರ ವಹಿಸಬೇಕಾಗಿದೆ.

ಹೋರಿಗಳಿಗೆ ವಿಶೇಷ ನಾಮಕರಣ
ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಭಾಗವಹಿಸುವ ಹೋರಿಗಳನ್ನು ಅಲಂಕರಿಸುವುದು ಜತೆಗೆ ಅವುಗಳಿಗೆ ವಿಶೇಷವಾಗಿ ನಾಮಕರಣ ಮಾಡಲಾಗುತ್ತದೆ. ಕರ್ನಾಟಕ ರತ್ನ, ಪವರ್‌, ಕದಂಬ, ನಾಗರಹಾವು, ಟೈಗರ್‌, ರೆಬಲ್‌ಸ್ಟಾರ್‌, ಸಾಹಸಸಿಂಹ, ಡಾ|ರಾಜ್‌, ಚಾಮುಂಡಿ ಎಕ್ಸ್‌ಪ್ರೆಸ್‌, ಆಂಬ್ಯುಲೆನ್ಸ್‌, ಕರ್ನಾಟಕ ಎಕ್ಸ್‌ಪ್ರೆಸ್‌ ಸೇರಿದಂತೆ ಸಿನಿಮಾ, ಕ್ರಿಕೆಟ್‌ ತಾರೆಗಳ ಹಾಗೂ ರಾಜಕಾರಣಿಗಳ ಹೆಸರು ಹೀಗೆ ನಾನಾ ನಮೂನೆಯ ಹೆಸರುಗಳು ಹೋರಿಗಳ ಮೈಮೇಲೆ ರಾರಾಜಿಸುತ್ತಿರುತ್ತವೆ. ಅಲ್ಲದೇ, ಅವುಗಳನ್ನು ಅದೇ ಹೆಸರಿನಿಂದ ಧ್ವನಿವರ್ಧಕದ ಮೂಲಕ ಅನೌನ್ಸ್‌ ಮಾಡುವುದು ಸಾಮಾನ್ಯವಾಗಿ ಕೇಳಿಬರುತ್ತದೆ.

ಧಮ್‌ ಇದ್ದಾಂವ ದನ ಬೆದರಸ್ತಾನ
ಹೋರಿ ಬೆದರಿಸುವ ಅಖಾಡದ ಮಧ್ಯದಲ್ಲಿ ಬಂದು ನಿಲ್ಲುವ ಹೋರಿಗಳು ಯಾರನ್ನೂ ಹತ್ತಿರ ಬಿಟ್ಟಿಕೊಳ್ಳದೇ ಕಣ್ಣು ಕೆಂಪಾಗಿಸಿಕೊಂಡು ಕೆಲಕ್ಷಣ ನೋಡುಗರಿಂದ ಮೆಚ್ಚುಗೆ ಪಡೆಯುತ್ತವೆ. ಅದಕ್ಕಾಗಿಯೇ ಧಮ್‌ ಇದ್ದಾಂವ ದನ ಬೆದರಸ್ತಾನ ಎಂಬ ಮಾತು ಜಿಲ್ಲೆಯಲ್ಲಿ ಚಾಲ್ತಿಯಲ್ಲಿದೆ. ಹೆಚ್ಚು ಕೊಬ್ಬರಿಗಳನ್ನು ಹರಿದುಕೊಂಡ ವ್ಯಕ್ತಿಗೆ ಸಂಘಟಿಕರು ಉತ್ತಮ ಹಿಡಿತಗಾರರೆಂಬ ಬಿರುದು, ಪ್ರಶಸ್ತಿ ನೀಡಿದರೆ, ಯಾರ ಕೈಗೋ ಸಿಗದೇ ಕೊಬ್ಬರಿ ಸರ ಹರಿಸಿಕೊಳ್ಳದೇ ಓಡಿದ ಹೋರಿಗಳನ್ನು
ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next